ಕರ್ನಾಟಕದಿಂದ ಬಿಜೆಪಿ ಅವನತಿ ಆರಂಭವಾಗಿದೆ: ಸಿಎಂ ಸಿದ್ದರಾಮಯ್ಯ
ಸಮಾನ ಅವಕಾಶಗಳಿಂದ ನೆಮ್ಮದಿ ಶಾಂತಿಯಿಂದ, ಸರ್ವಜನಾಂಗದ ಶಾಂತಿಯ ತೋಟವನ್ನು ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕಟ್ಟುತ್ತೇವೆಂಬ ನಂಬಿಕೆಯಿಂದ ಜನರು ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಅವರು. ರಾಜ್ಯದ ಜನರು ಯಾವತ್ತು ಬಿಜೆಪಿಯವರಿಗೆ ಆರ್ಶೀವಾದ ಮಾಡಿಲ್ಲ. ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದು ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿ ರೋಡ್ ಶೋ ಮಾಡಿಸುವುದು ಮತ್ತು ನಡ್ಡಾರವರು ನರೇಂದ್ರ ಮೋದಿಯವರನ್ನು ನೋಡಿ ಮತ ನೀಡಿ ಎಂದರೂ ಜನ ಮತ ನೀಡಲಿಲ್ಲ ಎಂದರು. ಇನ್ನು ಮುಂದೆ ಪ್ರಧಾನಿ ಮೋದಿಯವರ ಮೇಲೆ ಅವಲಂಬಿತರಾಗಬೇಡಿ. ಅವರು ಬಂದ ಕಡೆಯಲೆಲ್ಲಾ ಬಿಜೆಪಿ ಸೋತಿದೆ ಎಂದರು.
ಮೋದಿ ಹೆಸರು ಮಂಕಾಗುತ್ತಿದೆ
1980 ರಲ್ಲಿ ಜನತಾ ಲೋಕದಳದಿಂದ ಲೋಕಸಭಾ ಸ್ಪರ್ಧಿಯಾಗಿದ್ದೆ. ಆ ಸಂದರ್ಭದಲ್ಲಿ ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಗ, ಇಂದಿರಾ ಗಾಂಧಿ ಹೆಸರು ಹೇಳಿ, ಚುನಾವಣೆ ಗೆಲ್ಲುತ್ತೀರಿ ಎಂದು ಅವರಿಗೆ ಹೇಳಿದರು. ಆ ಕಾಲದಲ್ಲೇ ಇಂದಿರಾಗಾಂಧಿ ಹಸರು ಹೇಳಿದರೆ ಚುನಾವಣೆ ಗೆಲ್ಲುತ್ತಿದ್ದರು. ಅಂತೆಯೇ, ಮೋದಿಯವರಿಗೂ ಹೆಸರು ಇತ್ತು. ಆದರೆ ಈಗ ಅದು ಮಂಕಾಗುತ್ತಿದೆ. ಪ್ರಧಾನಿ ಮೋದಿಯವರು ಜನಪ್ರಿಯ ನಾಯಕ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಈಗ ಮಂಕಾಗುತ್ತಿದೆ. ಮೇಲಿದ್ದವರು ಕೆಳಗೆ, ಕೆಳಗಿದ್ದವರು ಮೇಲೆ ಬರಬೇಕು ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ ಎಂದರು.
ಕಾಂಗ್ರೆಸ್‌ನದ್ದು ಜಾತ್ಯಾತೀತೆಯ ಸಿದ್ಧಾಂತ
ನಾವು ಎಲ್ಲಾ ಧರ್ಮ, ಜಾತಿ, ಆಚಾರಗಳನ್ನು ಗೌರವಿಸುತ್ತೇವೆ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಆದಿಕವಿ ಪಂಪ ಹೇಳಿದರು. ನಾವೆಲ್ಲರೂ ಮಾನವತಾವಾದಿಗಳು. ಇದೇ ನಮ್ಮ ಸಂವಿಧಾನದಲ್ಲಿರುವದರಿಂದ , ಸಂವಿಧಾನದ ಹೊರತಾಗಿ ಬೇರೆ ಯಾವುದಕ್ಕೂ ತಲೆಬಾಗುವುದಿಲ್ಲ. ಭಾರತ ದೇಶದಲ್ಲಿ 142 ಕೋಟಿ ಜನರಿದ್ದಾರೆ, ಎಲ್ಲರೂ ಒಂದೇ , ನಾವೆಲ್ಲಾ ಭಾರತೀಯರೇ ಎಂದರು.
ಯಾರದೋ ಸ್ವಾರ್ಥಕ್ಕಾಗಿ ಜಾತಿ ಮಾಡಲ್ಪಟ್ಟಿತ್ತು. 850 ವರ್ಷಗಳ ಹಿಂದೆಯೆ ಬಸವಣ್ಣನವರು ಹೇಳಿದಂತೆ , ಕಾಯಕ ಮತ್ತು ದಾಸೋಹ. ವೃತ್ತಿಯಲ್ಲಿ ಯಾರು ಮೇಲೂ ಅಲ್ಲ ಕೀಳೂ ಅಲ್ಲ. ಅನುಭವ ಮಂಟಪ ಅಲ್ಲಿಂದಲೇ ಬಂದಿದ್ದು. ವಿಧಾನಮಂಡಲದ ಪರಿಕಲ್ಪನೆ ಅಲ್ಲಿಂದಲೇ ಬಂದಿದೆ. ಜಾತಿ ಪದ್ದತಿಯಲ್ಲಿ ಮೇಲೊಬ್ಬ, ಕೆಳಗೊಬ್ಬ ಎಂಬ ಬೇಧಭಾವ ಇದೆ. ಮನುಷ್ಯರನ್ನು ಮೇಲೆ ಕೆಳಗೆ ಮಾಡಬಾರದು, ಎಲ್ಲರೂ ಸಮಾನಾಗಿರಬೇಕು ಎಂದು ಹೇಳಿದರು.
ಜಾತೀಯತೆ ಮಾಡಬೇಡಿ
ಬಿಜೆಪಿಯವರಿಗೆ ಜಾತಿಯತೆ ಮಾಡಬೇಡಿ ಎಂದು ಬಹಳ ಬಾರಿ ಹೇಳಿದ್ದೇನೆ. ನಾವೇ, ನಮ್ಮ ಧರ್ಮವೇ ಶ್ರೇಷ್ಠ ಎನ್ನಬಾರದು. ಇದನ್ನು ಜನ ಒಪ್ಪಲ್ಲ. 5 ಚುನಾವಣೆಯಲ್ಲಿಯೂ ಜನ ನಿಮ್ಮನ್ನು ನಂಬಲ್ಲ. ಹಿಟ್ಲರ್ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ಯಾಕೆ ಬೇಸರ? ಹಿಟ್ಲರ್ ಒಬ್ಬ ಮತಾಂಧ, ಬಿಜೆಪಿಯವರು ಅವನ ಪರವೇ ? ಮನುಷ್ಯ - ಮನುಷ್ಯರ ನಡುವೆ ಗೋಡೆ ಕಟ್ಟಬಾರದು. ಜಾತಿ ನಡುವೆ ಬೆಂಕಿ ಹಚ್ಚಿದರೆ ಅದು ನಮ್ಮನ್ನೇ ಸುಡುತ್ತದೆ ಎಂದರು.
ಐದು ಗ್ಯಾರಂಟಿಗಳಿಂದ 5000 ರೂಪಾಯಿ
ರಾಜ್ಯದಲ್ಲಿ ಸಮಾನತೆ, ಸಾಮರಸ್ಯ ಇರಬೇಕು. ಉತ್ತರ ಯೂರೋಪ್ ದೇಶಗಳಲ್ಲಿ ಯುನಿವರ್ಸಲ್ ಬೇಸಿಕ್ ಇನ್‌ಕಂ ಅನ್ನು ಪಾಲಿಸುತ್ತಿದ್ದಾರೆ. ಅದಕ್ಕೆ ನಾವು ಜನರ ಜೇಬಿಗೆ ದುಡ್ಡು ಹಾಕುತ್ತಿದ್ದೇವೆ. ಪಂಚ ಗ್ಯಾರೆಂಟಿಗಳ ಮೂಲಕ ಎಲ್ಲರಿಗೂ 5000 ರೂ. ಸಿಗುತ್ತದೆ, ಬಿಜೆಪಿಯವರು, ಅಕ್ಕಿ ಗೋಧಿ ಮೇಲೆ, ಹಾಲು ಮೊಸರು, ಪೆನ್ನು ಪೆನ್ಸಿಲ್ ಮೇಲೆ ಜಿಎಸ್ ಟಿ ಹಾಕುವ ಮೂಲಕ ಜೇಬಿನಿಂದ ಹಣ ಕಿತ್ತರು ಎಂದರು.
ಗೃಹ ಲಕ್ಷ್ಮಿ, ಗೃಹ ಜ್ಯೋತಿ , ಅನ್ನಭಾಗ್ಯ, ಶಕ್ತಿ, ಯುವನಿಧಿ ಗಳ ಮೂಲಕ ವರ್ಷಕ್ಕೆ ಸುಮಾರು 52,000 ಕೋಟಿಗೂ ಹೆಚ್ಚು ಖರ್ಚಾಗುತ್ತದೆ. ಜನರಿಗೆ ಪ್ರತಿ ತಿಂಗಳು ಸುಮಾರು 5 ಸಾವಿರ ನೀಡಲಾಗುತ್ತವೆ. ಜನರ ಕೈಯಲ್ಲಿ ದುಡ್ಡು ಇದ್ದರೆ, ವ್ಯಾಪಾರ, ವಹಿವಾಟು ನಡೆಯುತ್ತದೆ. ಕೊರೋನಾ ಸಂದರ್ಭದಲ್ಲಿ ಜನರ ಕೈಯಲ್ಲಿ ದುಡ್ಡು ಇರದೇ ತೊಂದರೆ ಅನುಭವಿಸಿದರು. ಗ್ಯಾರೆಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿಗಳೇ ಹೇಳಿದ್ದಾರೆ. ಆದರೆ ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಹಾಗೂ ರಾಜ್ಯ ದಿವಾಳಿಯಾಗುವುದಕ್ಕೂ ಬಿಡುವುದಿಲ್ಲ ಎಂದರು.
ಗೃಹಲಕ್ಷ್ಮಿ ಯೋಜನೆಗೆ ವರ್ಷಕ್ಕೆ 30 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಆಗಸ್ಟ್ 16 ರಿಂದ ಮನೆಯ ಯಜಮಾನಿ ಖಾತೆಗೆ 2000 ರೂ. ನೀಡಲಾಗುವುದು . ಈ ವರ್ಷದ ಉಳಿದ ಅವಧಿಗೆ 17 ರಿಂದ 18 ಸಾವಿರ ಕೋಟಿ ಮೀಸಲಿಟ್ಟಿದೆ, 1 ಕೋಟಿ 30 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ ಎಂದರು.












Click it and Unblock the Notifications