CM Ibrahim: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾ ವಿರುದ್ಧ ಕಾನೂನು ಹೋರಾಟ: ಸಿಎಂ ಇಬ್ರಾಹಿಂ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 19: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅವರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಎಚ್‌ಡಿ ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಮೈತ್ರಿ ಕುರಿತು ಮಾತನಾಡಲು ಕರೆಯಿಸಿ ಈ ರೀತಿ ರಾಜ್ಯಾಧ್ಯಕ್ಷರ ಘೋಷಣೆ ಮಾಡುವುದು ಸರಿಯಲ್ಲ. ಈ ವಿಚಾರವನ್ನು ರಾಜ್ಯ ಚುನಾವಣೆ ಆಯೋಗ ಮತ್ತು ನ್ಯಾಯಾಲಯದ ಗಮನಕ್ಕೆ ತರುತ್ತೇನೆ, ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ ಎಂದು ಸಿಎಂ ಇಬ್ರಾಹಿಂ ಗುಡುಗಿದರು.
ಜೆಡಿಎಸ್‌ಗೆ ನೂತನ ರಾಜ್ಯಾಧ್ಯಕ್ಷ ಘೋಷಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ ಅವರು, ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ವಿರುದ್ಧ ಅಸಮಾಧಾನ ಹೊರ ಹಾಕಿದರು.

ದೇವೇಗೌಡರನ್ನು ನಾನು ತಂದೆಯ ಸಮಾನ ಎಂದು ಭಾವಿಸಿದ್ದೆ. ಅವರಿಗಾಗಿ ನಾಲ್ಕು ವರ್ಷ ವಿಧಾನಪರಿಷತ್ ಸದಸ್ಯ ಅವಧಿ ಮುಗಿಯುವ ಮೊದಲೇ ಬಿಟ್ಟು ಬಂದೆ. ಈ ಮಗನಿಗೆ ಎಂತಹ ಪ್ರೀತಿ ತೋರಿಸಿದ್ದೀರಿ ನೀವು. ಎಷ್ಟು ಜನರ ಮನೆ ಹಾಳು ಮಾಡಬೇಕು ಎಂದುಕೊಂಡಿದ್ದೀರಿ ಎಂದು ಅವರು ಕಿಡಿ ಕಾರಿದರು.
ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದೇ ಈ ಒಮ್ಮೆಲೆ ನನ್ನನ್ನು ಕೆಳಗೆ ಇಳಿಸಲು ಆಗಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ರಾಜ್ಯಾಧ್ಯಕ್ಷಕ್ಕೆ ಕೋರ್ಟ್ ಮೂಲಕ ತಡೆ (ಸ್ಟೇ) ತರುತ್ತೇನೆ ಎಂದು ಅವರು ತಿಳಿಸಿದರು.
ಸಭೆ ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು
ಎಚ್‌ಡಿ ದೇವೇಗೌಡರೇ ಬುಧವಾರ ತಿಪ್ಪೇಸ್ವಾಮಿ ಅವರಿಂದ ಕರೆ ಮಾಡಿಸಿದರು. ಮೈತ್ರಿ ಕುರಿತು ಮಾತನಾಡೋಣ ಎಂದು ಕರೆಯಿಸಿ. ಇದೀಗ ನೂತನ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಿದ್ದಾರೆ, ಇದು ಸರಿಯಲ್ಲ. ಅಧಿಕಾರ ಇದ್ದ ದೇವೇಗೌಡರು ಸಭೆ ಕರೆದ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಪುತ್ರ ವ್ಯಾಮೋಹ: ಇದು ಕುಟುಂಬದ ಪಕ್ಷ
ದೇವೇಗೌಡರೇ ನಿಮ್ಮ ಪುತ್ರ ಎಚ್‌ಡಿ ಕುಮಾರಸ್ವಾಮಿ ಅವರ ಸಲುವಾಗಿ ಬೇರೆಯವರ ಮಕ್ಕಳನ್ನು ಬಲಿ ಕೊಡುತ್ತಿದ್ದೀರಿ. ಹಾಗಾದರೆ ನಿಮಗೆ ಪುತ್ರ ವ್ಯಾಮೋಹ ಇದೆ ಎಂದಾಯಿತು. ನನಗೆ ಈ ನಿರ್ಣಯ ಖುಷಿ ಕೊಟ್ಟಿದೆ. ದೇವರು ಮತ್ತು ಮತದಾರರು ನನ್ನ ಜೊತೆಗಿದ್ದಾರೆ. ನೀವು ಏಕಾಎಕಿ ಇಂತಹ ನಿರ್ಣಯ ಕೈಗೊಂಡಿರುವುದು ತಪ್ಪು. ಇದು ನೂರಕ್ಕೆ ನೂರರಷ್ಟು ಜೆಡಿಎಸ್ ಕುಟುಂಬದ ಪಕ್ಷ ಎಂಬುದು ಸಾಬೀತಾಯಿತು ಎಂದು ಪಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಜನತಾದಳ ನಮ್ಮದೇ. ಕಾಂಗ್ರೆಸ್ ಸೇರ್ಪಡೆಗೆ ಇನ್ನೂ ಡೈವರ್ಸ್ ಆಗಿಲ್ಲ. ನಾನು ಎಲ್ಲಿಗೆ ಹೋದರೂ ಹೋಲ್ ಸೆಲ್ ಆಗೇ ಹೋಗುತ್ತೇನೆ. ಈ ಮೂಲಕ ಸಂದರ್ಭ ಬಂದರೆ ಇತರ ಸದಸ್ಯರನ್ನು ಜೊತೆಗೆ ಕರೆದುಕೊಂಡು ಪಕ್ಷ ಬಿಡುವ ಮುನ್ಸೂಚನೆ ನೀಡಿದರು.












Click it and Unblock the Notifications