ವಿ.ಸೋಮಣ್ಣ ನಮ್ಮ ಜೊತೆಗೆ ಇದ್ದಾರೆ, ಮುಂದೆಯೂ ಇರುತ್ತಾರೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಿಜೆಪಿಯಲ್ಲಿ ತಮ್ಮ ಮಗ ಅರುಣ್ ಸೋಮಣ್ಣ ಅವರ ರಾಜಕೀಯ ಭವಿಷ್ಯವನ್ನು ಮೂಲೆಗುಂಪು ಮಾಡಿದ್ದಾರೆಂದು ಬೇಸರಗೊಂಡಿರುವ ಸೋಮಣ್ಣ ಬಿಜೆಪಿ ತ್ಯಜಿಸಲು ಯೋಜಿಸಿದ್ದಾರೆ.
ಬೆಂಗಳೂರು, ಮಾರ್ಚ್ 13: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಟಿಕೆಟ್ ಹಂಚಿಕೆ, ಸಚಿವ ಸ್ಥಾನ ಮುಂತಾದ ಕಾರಣಕ್ಕೆ ತಮ್ಮ ಪಕ್ಷಗಳನ್ನು ಬಿಟ್ಟು ಬೇರೋಂದು ಪಕ್ಷಕ್ಕೆ ಹೋಗುವುದು ಆರಂಭವಾಗುತ್ತದೆ. ಹೀಗೆಯೇ ಸದ್ಯ ರಾಜ್ಯದಲ್ಲಿ ಹೆಚ್ಚು ಚರ್ಚೆಗೆ ಬಂದಿರುವುದು ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬುದು.
ಈ ವದಂತಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ವಿ ಸೋಮಣ್ಣ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, "ನಾವಿಬ್ಬರೂ ಹಳೆಯ ಸ್ನೇಹಿತರು. ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಅವರು ಭವಿಷ್ಯದಲ್ಲಿಯೂ ನಮ್ಮೊಂದಿಗೆ ಇರುತ್ತಾರೆ ಯಾವುದೇ ವದಂತಿಗಳನ್ನು ಹಬ್ಬಿಸುವ ಅಗತ್ಯವಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, 'ವಿ. ಸೋಮಣ್ಣ ಅವರ ಜೊತೆ ಭಾನುವಾರ ಹುಬ್ಬಳ್ಳಿಯಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ನಮ್ಮದು ಕೇವಲ ಔಪಚಾರಿಕ ಭೇಟಿ' ಎಂದಿದ್ದಾರೆ. ಇತ್ತೀಚೆಗೆ ಸಚಿವ ವಿ.ಸೋಮಣ್ಣ ಅವರು ಬಿಜೆಪಿಯ ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ. ಇದಕ್ಕೆ ಚಾಮರಾಜನಗರದ ಜನಸಂಕಲ್ಪ ಯಾತ್ರೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿಯೇ ಆಗಿದ್ದ ಸೋಮಣ್ಣ ಗೈರಾಗಿ ಮತ್ತಷ್ಟು ವದಂತಿಗೆ ಕಾರಣವಾಗಿದ್ದರು.
ಇದರ ಬೆನ್ನಲ್ಲೇ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದ್ದಂತೆ ಮೈಸೂರಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಮೈಸೂರು - ಚಾಮರಾಜನಗರ ಜಿಲ್ಲೆಯ ಸೋಮಣ್ಣ ಅಭಿಮಾನಿಗಳು, ಬೆಂಬಲಿಗರು ಗುರುವಾರ ದಿಢೀರ್ ಮಹತ್ವದ ಸಭೆ ನಡೆಸಿದ್ದರು. ಸಭೆಯಲ್ಲಿ ವಿ.ಸೋಮಣ್ಣ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಬಿಜೆಪಿಯಲ್ಲಿ ತಮ್ಮ ಮಗ ಅರುಣ್ ಸೋಮಣ್ಣ ಅವರ ರಾಜಕೀಯ ಭವಿಷ್ಯವನ್ನು ಮೂಲೆಗುಂಪು ಮಾಡಿದ್ದಾರೆಂದು ಬೇಸರಗೊಂಡಿರುವ ಸೋಮಣ್ಣ ಬಿಜೆಪಿ ತ್ಯಜಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ಸೋಮಣ್ಣ ಅವರನ್ನು ಬಿಜೆಪಿಯೊಳಗೆ ಉಳಿಸಿಕೊಳ್ಳಲು ಮನವೊಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಆದರೆ, ಈ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ ಅವರು ಬಿಜೆಪಿ ಬಿಡುವುದನ್ನು ನಿರಾಕರಿಸಿದ್ದರು. ನನಗೆ ಈಗ 72 ವರ್ಷ, ಆಗಬೇಕಿರುವುದು ಏನೂ ಇಲ್ಲ. ನಾನು ನಿಂತ ನೀರಲ್ಲ, ಹರಿಯುವ ನೀರು, ನಾನು ಯಾರ ಬಗ್ಗೆಯೂ ಒಂದು ಸಣ್ಣ ಅಪಚಾರವೂ ಮಾಡಿಲ್ಲ ಎಂದಿದ್ದರು. ಇನ್ನು, ಇತ್ತೀಚೆಗೆ ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿಯಿಂದ ಕೂಡ ಸೋಮಣ್ಣ ಅವರನ್ನು ಕೈ ಬಿಟಲಾಗಿದೆ. ಇದು ಕೂಡ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬುದಕ್ಕೆ ಪುಷ್ಠಿ ನೀಡಿದೆ. .












Click it and Unblock the Notifications