ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಹಿತಿ ಚಂದ್ರಶೇಖರ್ ಪಾಟೀಲ್ ನಿಧನಕ್ಕೆ ಗಣ್ಯರ ಕಂಬನಿ

|
Google Oneindia Kannada News

ಬೆಂಗಳೂರು, ಜನವರಿ 10: ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಸೋಮವಾರ ಬೆಳಗ್ಗೆ ನಿಧನರಾಗಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಕನ್ನಡದ ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಅವರು "ಚಂಪಾ' ಎಂದೇ ಪ್ರಖ್ಯಾತರಾಗಿದ್ದರು. 1939ರಲ್ಲಿ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದ್ದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೋಟಣನಕುಂಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾರ್ಥಿವ ಶರೀರವನ್ನು ಬೆಂಗಳೂರಿನ ಯಲಚೇನಹಳ್ಳಿ ಸಮೀಪದ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಂಪಾ ಅವರಿಗೆ 83 ವರ್ಷ ವಯಸ್ಸಾಗಿತ್ತು.

CM Bommai and other leaders express condolence to Kannada Poet Chandrashekar Patil Death

ಸಾಹಿತಿ ಚಂದ್ರಶೇಖರ ಪಾಟೀಲ ನಿಧನಕ್ಕೆ ರಾಜ್ಯದ ಸಾಹಿತಿಗಳು, ರಾಜಕಾರಣಿಗಳು ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಚಂಪಾ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ನೇರಾನೇರ ನುಡಿಯ ಪ್ರಭುತ್ವ ವಿರೋಧಿ ಪ್ರತಿಭಟನಾ ಧ್ವನಿಯಾಗಿದ್ದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ್ (ಚಂಪಾ) ಸೋಮವಾರ ಬೆಳಗ್ಗೆ ನಿಧನ ಸುದ್ದಿ ತಿಳಿದು ಅತೀವ ಆಘಾತ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಅವರಿಗೆ 83 ವರ್ಷ ವಯಸ್ಸಾಗಿದ್ದು, ವಯೋಸಹಜ ಆರೋಗ್ಯ ಸಮಸ್ಯೆಗಳ ಜತೆ ಇತ್ತೀಚೆಗೆ ಮನೆಯೊಳಗೆ ಸಣ್ಣ ಅಪಘಾತವಾಗಿ ಬೆನ್ನಿಗೆ ನೋವು ಮಾಡಿಕೊಂಡಿದ್ದರು. ಕೆಲ ವಾರಗಳ ಹಿಂದಷ್ಟೆ ಅವರ ಜತೆ ಮಾತನಾಡಿ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದೆ.

ಅರ್ಧ ಶತಮಾನ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು, ನಾಲ್ಕು ದಶಕಗಳ ಕಾಲ ಕನ್ನಡ ನೆಲದ ವಿವೇಕವನ್ನು ಹೆಚ್ಚಿಸಲು, ಈ ನೆಲದ ಸೌಹಾರ್ದ ಪರಂಪರೆಯನ್ನು ಮುನ್ನಡೆಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ಕಾಯಕ ಜೀವಿಯಾಗಿ ಮೆರೆದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಚಂಪಾ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ
ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರಾದ ಚಂದ್ರಶೇಖರ್ ಪಾಟೀಲ್ ಅವರು ಚಂಪಾ ಎಂದೇ ಪ್ರಸಿದ್ಧರಾದವರು. ಚಂಪಾ ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು- ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದರು ಎಂದು ಚಂಪಾ ಅವರನ್ನು ಸಿಎಂ ಬಣ್ಣಿಸಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅವರು ಪ್ರಾಧ್ಯಾಪಕರಾಗಿ, ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಕ್ರಮಣ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕತ್ವದ ಸಾರಥ್ಯವನ್ನು ಅವರು ವಹಿಸಿದ್ದರು. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಚಂಪಾ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿ ಮತ್ತು ಶಿಷ್ಯರಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಕೋರಿದ್ದಾರೆ.

ಚಂದ್ರಶೇಖರ್ ಪಾಟೀಲ್ ನಿಧನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಸಂತಾಪ
ಚಂಪಾ ಎಂದೇ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತಿ ಪಡೆದಿದ್ದ ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ ಅವರ ಅಗಲಿಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ ಅವರ ಅಕಾಲಿಕ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಭಾಷೆ, ನೆಲ, ಜಲಗಳ ಹೋರಾಟಕ್ಕಾಗಿ ನಡೆದ ಹಲವಾರು ಹೋರಾಟಗಳನ್ನು ತಾವೇ ಖುದ್ದಾಗಿ ರೂಪಿಸಿದ್ದಲ್ಲದೆ, ಅವುಗಳಲ್ಲಿ ಮುಂಚೂಣಿಯಾಗಿ ನಿಂತು, ಹೋರಾಟಗಳಿಗೆ ತಾರ್ಕಿಕ ಅಂತ್ಯ ಕಾಣಿಸುತಿದ್ದರು ಎಂದು ಸಚಿವರು ಸ್ಮರಿಸಿದ್ದಾರೆ.

ಸಚಿವ ನಾರಾಯಣಗೌಡ ಶೋಕ ಸಂದೇಶ
ಹಿರಿಯ ಸಾಹಿತಿ, ವಿಮರ್ಶಕ ಪ್ರೊ. ಚಂದ್ರಶೇಖರ್ ಪಾಟೀಲ್ ಅವರ ನಿಧನಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ನಾರಾಯಣಗೌಡ ಅವರು ಕಂಬನಿ ಮಿಡಿದಿದ್ದಾರೆ.

ಗೋಕಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಚಂಪಾ ಅವರು ಕನ್ನಡಕ್ಕೆ ಎಲ್ಲಿಯೇ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು. ನಾಡು- ನುಡಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಚಂಪಾರವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಮೃತರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದು ಸಚಿವರು ತಿಳಿಸಿದ್ದಾರೆ.

ಚಂಪಾ ನಿಧನಕ್ಕೆ ಸಚಿವ ಮುರುಗೇಶ್ ನಿರಾಣಿ ಸಂತಾಪ
ಹಿರಿಯ ಸಾಹಿತಿ, ಬಂಡಾಯಗಾರ, ಕನ್ನಡದ ಅಸ್ಮಿತೆ, ಬರಹ, ಬದುಕು, ನಡೆ, ನುಡಿಯನ್ನು ಒಟ್ಟಿಗೆ ಇಟ್ಟುಕೊಂಡು ಬದುಕು ಸವೆಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿದ್ದ ಡಾ.ಚಂದ್ರಶೇಖರ ಪಾಟೀಲ್ ಅವರ ಹಠಾತ್ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಂಬಿನಿ ಮಿಡಿದಿದ್ದಾರೆ.

ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ಚಂದ್ರಶೇಖರ ಪಾಟೀಲರ ಹಠಾತ್ ನಿಧನ ಕನ್ನಡ ನಾಡು ಮತ್ತು ಸಾಹಿತ್ಯ ಹಾಗೂ ಸಂಸ್ಕೃತಿಗೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.

ಚಂಪಾ ನಿಧನಕ್ಕೆ ಎಚ್.ಡಿ. ಕುಮಾರಸ್ವಾಮಿ ಕಂಬನಿ
ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕನ್ನಡಪರ ಹೋರಾಟಗಾರ, ಕವಿ, ನಾಟಕಕಾರ, ಸಂಘಟನಕಾರ, ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರು ಆಗಿದ್ದ ಚಂದ್ರಶೇಖರ ಪಾಟೀಲ ನಿಧನ ಬಹಳ ದುಃಖ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.

ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಅವರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ. ‌‌

ಚಂಪಾ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ
ಚಂಪಾ ಎಂದೇ ಖ್ಯಾತರಾಗಿದ್ದ ಖ್ಯಾತ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಚಂದ್ರಶೇಖರ ಪಾಟೀಲರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ನಾಡಿನ ಭಾಷೆ, ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಎಂದಿದ್ದಾರೆ.

ಚಂಪಾ ಕ್ರಾಂತಿಕಾರಿ ಸಾಹಿತಿ ಮಾತ್ರವಲ್ಲದೇ, ವಿಮರ್ಶಕರು, ನಾಟಕಕಾರರು ಹಾಗೂ ಕವಿಗಳಾಗಿದ್ದರು. ರಾಜ್ಯದ ನಾಡು, ನುಡಿಗೆ ಅವರ ಸೇವೆ ಅವಿಸ್ಮರಣೀಯ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಅಭಿಮಾನಿ ಬಳಗ ಭಗವಂತ ನೀಡಲಿ ಎಂದು ಶಿವಕುಮಾರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಚಂಪಾ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ
ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಸಂತಾಪ ಸೂಚಿಸಿದ್ದಾರೆ. ಚಂಪಾ ಎಂದೇ ಪ್ರಸಿದ್ಧರಾದ, ಚಂದ್ರಶೇಖರ್ ಪಾಟೀಲ್ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ.

ಕನ್ನಡ ನಾಡು- ನುಡಿಗೆ ಅವರು ಸಲ್ಲಿಸಿದ ಸೇವೆ ಅನುಪಮವಾದುದು. ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳನ್ನು ರೂಪಿಸಿದ್ದಲ್ಲದೆ ಅವುಗಳಲ್ಲಿ ಮುಂಚೂಣಿಯಾಗಿ ನಿಂತವರು, ಎಂದು ಸಚಿವರು ಸ್ಮರಿಸಿದ್ದಾರೆ. ಮೃತರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೋರಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಸಂತಾಪ
ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ (ಚಂಪಾ) ಅವರ ನಿಧನ ಸಾಹಿತ್ಯ ಲೋಕಕ್ಕೆ ಹಾಗೂ ನಾಡಿಗೆ ತುಂಬಲಾಗದ ನಷ್ಟ‌ವಾದಂತಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ಸಾಹಿತ್ಯದ ಮುತ್ತಾಗಿ ಕನ್ನಡ ನಾಡು- ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದ್ದ ಚಂಪಾರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Recommended Video

South Africa ಹಾಗು India ನಡುವಿನ ಮೂರನೇ ಪಂದ್ಯಕ್ಕೆ Kohli ಸಿದ್ಧ! | Oneindia Kannada

English summary
CM Bsavaraj Bommai and other Political leaders express condolence to Kannada Poet Chandrashekar Patil Death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X