ಬೆಂಗಳೂರು: ಮೋಡ ಬಿತ್ತನೆಗೆ ಇಂದಿನಿಂದ ವಿಧ್ಯುಕ್ತ ಚಾಲನೆ
ಬೆಂಗಳೂರು, ಆಗಸ್ಟ್ 21: ಮಳೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಮೋಡ ಬಿತ್ತನೆ ಕಾರ್ಯ ಆರಂಭಿಸುವ ಸರ್ಕಾರದ ಯೋಜನೆಗೆ ಇಂದು(ಆಗಸ್ಟ್ 21) ಮಧ್ಯಾಹ್ನ 2 ಗಂಟೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ರಾಜಧಾನಿ ಬೆಂಗಳೂರಿನ ಜಕ್ಕೂರು ವಾಯುನೆಲೆಯಲ್ಲಿ ಮೋಡಬಿತ್ತನೆಗೆ ಅಧಿಕೃತ ಚಾಲನೆ ದೊರೆಯಲಿದ್ದು, ಹುಬ್ಬಳ್ಳಿ ಮತ್ತು ಬೆಂಗಳೂರು ಎಚ್ ಎಎಲ್ ವಿಮಾನ ನಿಲ್ದಾಣ ಬಳಸಿಕೊಂಡು ಎರಡು ವಿಶೇಷ ವಿಮಾನಗಳಿಂದ ಮೋಡಬಿತ್ತನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೆ.ಹೊಯ್ಸಳ ಪ್ರಾಜೆಕ್ಟ್(ಪ್ರೈ.)ಲಿ. ಈ ಯೋಜನೆಯ ಗುತ್ತಿಗೆ ಪಡೆದಿದ್ದು, ಒಂದೂವರೆ ದಶಕದ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮೋಡ ಬಿತ್ತನೆ ನಡೆಯಲಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮೋಡಬಿತ್ತನೆ ಮಾಡಳು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸರ್ಕಾರ 30 ಕೋಟಿ ರೂ. ವೆಚ್ಚದ ಯೋಜನೆ ಹಾಕಿಕೊಂಡಿದೆ.

ಮೋಡ ಬಿತ್ತನೆಯ ಫಲಶ್ರುತಿ ಧನಾತ್ಮಕವಾಗಿಯೇ ಇರುತ್ತದೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ(2003)ಯಾಗಿದ್ದಾಗಲೂ ಮೋಡಬಿತ್ತನೆ ಮಾಡಲಾಗಿತ್ತಾದರೂ ನಿರೀಕ್ಷಿತ ಫಲಿತಾಂಶ ದೊರಕಿರಲಿಲ್ಲ.











Click it and Unblock the Notifications