ಚಂದ್ರಾ ಬಡಾವಣೆ ಪೊಲೀಸ್ ಠಾಣೆ 60 ಪೊಲೀಸರಿಗೆ ಕೊರೋನಾ ಪಾಸಿಟಿವ್ ಸತ್ಯಕ್ಕೆ ದೂರ
ಬೆಂಗಳೂರು, ಏಪ್ರಿಲ್ 08: ಚಂದ್ರ ಲೇಔಟ್ ಪೊಲೀಸ್ ಠಾಣೆಯ 60 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಎಎನ್ಐ ಸುದ್ದಿಸಂಸ್ಥೆಯ ಮಾಹಿತಿ ಆಧರಿಸಿ ಒನ್ಇಂಡಿಯಾ ಕನ್ನಡ ಸುದ್ದಿ ಸಂಸ್ಥೆ ಚಂದ್ರ ಲೇಔಟ್ ಪೊಲೀಸ್ ಠಾಣೆಯ 60 ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ವರದಿ ಮಾಡಿತ್ತು. ಸುದ್ದಿ ಸಂಸ್ಥೆ ಮಾಡಿದ ಟ್ವೀಟ್ ನಂತರ ಡಿಲೀಟ್(https://twitter.com/ANI/status/1380045016580550656) ಮಾಡಿದೆ. ಸುದ್ದಿ ಸಂಸ್ಥೆಯ ಮಾಡಿರುವ ತಪ್ಪು ಮಾಹಿತಿ ಆಧರಿಸಿ ವರದಿ ಪ್ರಕಟಿಸಲಾಗಿತ್ತು.
ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ ಅವರನ್ನು ಕೇಳಿದಾಗ, ಈ ರೀತಿಯ ಪ್ರಮಾದ ಆಗಬಾರದು. ಚಂದ್ರ ಬಡಾವಣೆಯ ಪೊಲೀಸ್ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ವಿನಃ, 60 ಮಂದಿಗೆ ಕೊರೋನಾ ಪಾಸಿಟೀವ್ ಬಂದಿದೆ ಎಂಬ ವರದಿ ಸುಳ್ಳು. ಸುದ್ದಿ ಸಂಸ್ಥೆ ತಪ್ಪು ಸಂದೇಶದಿಂದ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂಥ ಅವಘಡಗಳಿಗೆ ಅವಕಾಶ ಮಾಡಿಕೊಡಬಾರದು. ಒಂದಲ್ಲಾ ಎರಡು ಸಲ ಸುದ್ದಿಯನ್ನು ಖಚಿತಪಡಿಸಿಕೊಂಡು ಪ್ರಕಟಿಸಬೇಕು ಎಂದರು. ಚಂದ್ರಾ ಲೇಔಟ್ ಪೊಲೀಸ್ ಠಾಣೆಯ 60 ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ಒಂದೇ ದಿನ 6976 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 35 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ 2794 ಸೋಂಕಿತರು ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 1,033,560ಕ್ಕೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿವೆ. ಈ ಪೈಕಿ 9,71,556 ಸೋಂಕಿತರು ಗುಣಮುಖರಾಗಿದ್ದು, ಸೋಂಕಿಗೆ ಈವರೆಗೂ 12,731 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 49254 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.