CJ Roy: ಕಾನ್ಫಿಡೆಂಟ್ ಗ್ರೂಪ್‌ನ ಸಿಜೆ ರಾಯ್ ಡೈರಿಯಲ್ಲಿ ಸ್ಫೋಟಕ ಮಾಹಿತಿಗಳು
CJ Roy: ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ ಉದ್ಯಮ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಐಟಿ ಅಧಿಕಾರಿಗಳ ವಿಚಾರಣೆಯ ವೇಳೆ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಅವರು ಸಾವನ್ನಪ್ಪಿರುವ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ತನಿಖೆಯಲ್ಲಿ ಈಗ ರಾಯ್ ಅವರ ವೈಯಕ್ತಿಕ ಡೈರಿ ಪೊಲೀಸರಿಗೆ ಪ್ರಮುಖ ಸುಳಿವಾಗಿ ಪರಿಣಮಿಸಿದೆ. ಇದರಲ್ಲಿ ಪ್ರಮುಖ ವಿಚಾರಗಳನ್ನು ಬರೆದಿಟ್ಟಿರುವ ಬಗ್ಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.
ಡೈರಿಯಲ್ಲಿ ಏನಿದೆ?: ಖ್ಯಾತ ಉದ್ಯಮಿ ಸಿಜೆ ರಾಯ್ ಅವರಿಗೆ ಪ್ರತಿದಿನ ಡೈರಿ ಬರೆಯುವ ಅಭ್ಯಾಸವಿತ್ತು ಎನ್ನಲಾಗಿದ್ದು, ಆ ದಿನಚರಿಯಲ್ಲಿ ಹಲವು ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರ ಕುರಿತು ಉಲ್ಲೇಖಗಳಿರುವುದಾಗಿ ಮೂಲಗಳು ತಿಳಿಸಿವೆ. ಡೈರಿಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಶಾಸಕರು ಮತ್ತು ಒಬ್ಬ ಮಾಜಿ ಸಂಸದರ ಹೆಸರುಗಳು ಕಾಣಿಸಿಕೊಂಡಿರುವುದು ಪೊಲೀಸರ ಗಮನ ಸೆಳೆದಿದೆ ಎಂದು ಹೇಳಲಾಗುತ್ತಿದೆ.

ಯಾರ ಹೆಸರುಗಳು ಉಲ್ಲೇಖ?: ವಿಶೇಷವಾಗಿ ಬೆಂಗಳೂರಿನ ಒಬ್ಬ ಪ್ರಭಾವಿ ಶಾಸಕ ಮತ್ತು ಕೋಲಾರ ಜಿಲ್ಲೆಯ ಶಾಸಕರೊಂದಿಗೆ ನಡೆದಿದ್ದ ವ್ಯವಹಾರಿಕ ಸಂಪರ್ಕಗಳ ಕುರಿತು ವಿವರಗಳು ದಾಖಲಾಗಿವೆ ಎನ್ನಲಾಗಿದೆ. ಜೊತೆಗೆ, ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಮಾಡೆಲ್‌ಗಳ ಹೆಸರುಗಳೂ ಕೂಡ ಡೈರಿಯಲ್ಲಿ ಉಲ್ಲೇಖವಾಗಿರುವ ಮಾಹಿತಿ ಲಭ್ಯವಾಗಿದೆ.
ಇದಲ್ಲದೆ, ರಾಯ್ ಅವರು ದುಬೈನಲ್ಲಿ ನಡೆಸುತ್ತಿದ್ದ ವ್ಯವಹಾರಗಳು, ಅಲ್ಲಿನ ಪ್ರಭಾವಿ ವ್ಯಕ್ತಿಗಳೊಂದಿಗೆ ಹೊಂದಿದ್ದ ಸಂಪರ್ಕಗಳ ಕುರಿತು ಕೂಡ ಡೈರಿಯಲ್ಲಿ ಬರೆಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ಅಂಶಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಡೈರಿಯಲ್ಲಿರುವ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರೆದಿದೆ ಎನ್ನಲಾಗಿದೆ.
ಸಿಜೆ ರಾಯ್ ಅವರ ಆತ್ಮಹತ್ಯೆಯ ಹಿಂದಿರುವ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಡೈರಿಯಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ದೃಢಪಟ್ಟ ಬಳಿಕವೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರು ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಉದ್ಯಮ ವಲಯದಲ್ಲಿ ದೊಡ್ಡ ಮಟ್ಟದ ಯೋಜನೆಗಳನ್ನು ನಡೆಸುತ್ತಿದ್ದ ಕಾರಣ, ಅವರ ವ್ಯವಹಾರಗಳು ವಿವಿಧ ಸರ್ಕಾರಿ ಇಲಾಖೆ, ರಾಜಕೀಯ ಮುಖಂಡರು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದವು ಎನ್ನಲಾಗುತ್ತಿದೆ.
ತನಿಖಾ ಮೂಲಗಳ ಪ್ರಕಾರ, ಸಿಜೆ ರಾಯ್ ಅವರ ವೈಯಕ್ತಿಕ ಡೈರಿಯಲ್ಲಿ ಕೆಲವು ರಾಜಕೀಯ ನಾಯಕರೊಂದಿಗೆ ಇದ್ದ ವ್ಯವಹಾರಿಕ ಸಂಪರ್ಕಗಳ ಕುರಿತು ಉಲ್ಲೇಖಗಳಿವೆ. ವಿಶೇಷವಾಗಿ ನಗರಾಭಿವೃದ್ಧಿ, ಭೂ ವ್ಯವಹಾರ ಮತ್ತು ಅನುಮತಿಗಳ ಕುರಿತಂತೆ ಕೆಲ ಶಾಸಕರೊಂದಿಗೆ ನಡೆದ ಸಂವಹನಗಳ ಬಗ್ಗೆ ಬರಹಗಳಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಉಲ್ಲೇಖಗಳು ಯಾವ ರೀತಿಯ ವ್ಯವಹಾರಕ್ಕೆ ಸಂಬಂಧಿಸಿದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರಾಜಕೀಯ ನಾಯಕರ ಜೊತೆಗಿನ ಸಂಪರ್ಕಗಳು ಸಂಪೂರ್ಣವಾಗಿ ಉದ್ಯಮ ಸಂಬಂಧಿತವಾಗಿದ್ದವೆಯೇ ಅಥವಾ ಬೇರೆ ಕಾರಣಗಳಿದ್ದವೆಯೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ರಾಜಕೀಯ ನಾಯಕರ ವಿರುದ್ಧವೂ ನೇರ ಆರೋಪಗಳು ದಾಖಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಮೂಲಗಳು ಹೇಳುವುದೇನು?: ಸಿಜೆ ರಾಯ್ ಅವರು ದೇಶದ ಹೊರಗೆಯೂ, ವಿಶೇಷವಾಗಿ ದುಬೈನಲ್ಲಿ ನಡೆಸುತ್ತಿದ್ದ ವ್ಯವಹಾರಗಳ ಹಿನ್ನೆಲೆಯಲ್ಲಿ ಅಲ್ಲಿನ ಪ್ರಭಾವಿ ಉದ್ಯಮಿಗಳು ಮತ್ತು ಮಧ್ಯವರ್ತಿಗಳ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ. ಈ ಅಂತಾರಾಷ್ಟ್ರೀಯ ವ್ಯವಹಾರಗಳ ವಿವರಗಳು ತನಿಖೆಯ ಭಾಗವಾಗಿವೆ. ಅವರ ವ್ಯವಹಾರ ಮತ್ತು ರಾಜಕೀಯ ಸಂಪರ್ಕಗಳ ಕುರಿತು ಲಭ್ಯವಾಗಿರುವ ಮಾಹಿತಿ ತನಿಖಾ ಹಂತದಲ್ಲಿದ್ದು, ಡೈರಿಯಲ್ಲಿರುವ ದಾಖಲೆಗಳ ಸತ್ಯಾಸತ್ಯತೆ ದೃಢಪಟ್ಟ ಬಳಿಕವೇ ಸ್ಪಷ್ಟ ಮಾಹಿತಿ ಸಿಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications