ಬೆಂಗಳೂರಿನಲ್ಲಿ ಚಿತ್ರಸಂತೆ: ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗ ವಿವರ
ಬೆಂಗಳೂರಿನಲ್ಲಿ 23ನೇ ಚಿತ್ರಸಂತೆಗೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಚಿತ್ರ ಸಂತೆಯನ್ನು ಇದೇ ಭಾನುವಾರ (ಜನವರಿ 4) ಆಯೋಜಿಸಲಾಗಿದೆ. ಚಿತ್ರ ಸಂತೆಗೆ ಹೆಚ್ಚಿನ ಜನ ಸೇರುವ ನಿರೀಕ್ಷೆಯಿರುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ವಿಂಡ್ಸರ್ ಮ್ಯಾನರ್ ಜಂಕ್ಷನ್‌ನಿಂದ ಶಿವಾನಂದ ವೃತ್ತದವರೆಗೆ ಕುಮಾರಕೃಪಾ ರಸ್ತೆಯ ಎರಡೂ ಬದಿಗಳಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ 10ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸುಗಮ ಸಂಚಾರದ ಹಿತದೃಷ್ಟಿಯಿಂದ ಕುಮಾರಕೃಪಾ ರಸ್ತೆಯ ಶಿವಾನಂದ ಜಂಕ್ಷನ್‌ನಿಂದ ವಿಂಡ್ಸರ್ ಮ್ಯಾನರ್ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ರಾತ್ರಿ 10 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ವಾಹನಗಳ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸುವಂತೆ ಆದೇಶ ಹೊರಡಿಸಲಾಗಿದೆ.

ಪರ್ಯಾಯ ಮಾರ್ಗಗಳು
ಮೌರ್ಯ ಜಂಕ್ಷನ್ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಕುಮಾರಕೃಪಾ ರಸ್ತೆ ಕಡೆಗೆ ಸಾಗುವ ವಾಹನಗಳು ರೇಸ್ ಕೋರ್ಸ್ ನ್ಯೂ ಜಂಕ್ಷನ್‌ನಲ್ಲಿ ಬಸವೇಶ್ವರ ವೃತ್ತಕ್ಕೆ ನೇರವಾಗಿ ಸಾಗಿ ಬಸವೇಶ್ವರ ವೃತ್ತದಲ್ಲಿ ಎಡತಿರುವು ಪಡೆದು, ಓಲ್ಡ್ ಹೈ ಗ್ರೌಂಡಡ್ ಜಂಕ್ಷನ್, ವಿಂಡ್ಸರ್ ಮ್ಯಾನರ್ ಜಂಕ್ಷನ್ ಮೂಲಕ ಸಾಗಬಹುದು.
ಟಿ.ಚೌಡಯ್ಯ ರಸ್ತೆಯಿಂದ ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರ 'ಕೃಪ ರಸ್ತೆ ಮೂಲಕ ಆನಂದರಾವ್ ವೃತ್ತದ ಕಡೆಗೆ ಬರುವ ವಾಹನಗಳು, ವಿಂಡ್ಸರ್ ಮ್ಯಾನರ್ ಜಂಕ್ಷನ್, ಹೈಗ್ರೌಂಡ್ ಜಂಕ್ಷನ್‌ಗೆ ನೇರವಾಗಿ ಸಾಗಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ಬಸವೇಶ್ವರ ವೃತ್ತ, ರೇಸ್ ಕೋರ್ಸ್ ರಸ್ತೆ ಮೂಲಕ ಮುಂದೆ ಸಾಗಬಹುದು. ಟಿ.ಚೌಡಯ್ಯ ರಸ್ತೆಯಲ್ಲಿ ಹೈಗ್ರೌಂಡ್ ಜಂಕ್ಷನ್‌ನಿಂದ ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರ ಕೃಪ ರಸ್ತೆ ಪ್ರವೇಶ ಪಡೆಯುವ ವಾಹನಗಳು ನೇರವಾಗಿ ಸಾಗಿ ರೈಲ್ವೆ ಸಮಾನಾಂತರ ರಸ್ತೆ (ಪ್ಯಾರಲಲ್ ರೋಡ್) ಮೂಲಕ ಮುಂದೆ ಸಾಗಬಹುದು.
ನೆಹರೂ ವೃತ್ತದಿಂದ ಉಕ್ಕಿನ ಸೇತುವೆ ಕೆಳ ಭಾಗದಲ್ಲಿ ಶಿವಾನಂದ ವೃತ್ತದ ಮೂಲಕ ಟ್ರಿಲೈಟ್ ಜಂಕ್ಷನ್ ಮತ್ತು ರೇಸ್ ಕೋರ್ಸ್ ಕಡೆಗೆ ಸಾಗುವ ವಾಹನಗಳು ನೆಹರೂ ವೃತ್ತದಿಂದ ಉಕ್ಕಿನ ಮೇಲೇತುವೆ ಮೇಲೆ ಸಾಗಿ ಟ್ರಿಲೈಟ್ ಜಂಕ್ಷನ್ ಹಾಗೂ ರೇಸ್ ಕೋರ್ಸ್ ರಸ್ತೆ ಕಡೆಗೆ ತಲುಪಬಹುದು.
ವಾಹನ ನಿಲುಗಡೆಗೆ ವ್ಯವಸ್ಥೆ ಎಲ್ಲಿ?
ಕಾರ್ಯಕ್ರಮಕ್ಕೆ ಬರುವವರು ತಮ್ಮ ವಾಹನಗಳನ್ನು ರೈಲ್ವೆ ಪ್ಯಾರಲಲ್ ರಸ್ತೆ, ರೇಸ್ ಕೋರ್ಸ್ ರಸ್ತೆ (ಟ್ರಿಲೈಟ್ ಜಂಕ್ಷನ್ ನಿಂದ ಮೌರ್ಯ ಜಂಕ್ಷನ್ ರಸ್ತೆಯ ಪೂರ್ವ ಭಾಗದಲ್ಲಿ ನಿಲುಗಡೆ ಮಾಡಬಹುದು. ಸಂಚಾರ ಪೊಲೀಸರು ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿದ್ದಾರೆ. ಕ್ರೆಸೆಂಟ್ ರಸ್ತೆಯ ಪಶ್ಚಿಮ ಭಾಗದಲ್ಲಿ ಗುರುರಾಜ ಕಲ್ಯಾಣಮಂಟಪದಿಂದ ಹೋಟೆಲ್ ಜನಾರ್ದನವರೆಗೆ ವಾಹನ ನಿಲುಗಡೆ.
"ಪಾರ್ಕಿಂಗ್ ಸ್ಥಳದ ಕೊರತೆ ಮತ್ತು ಜನದಟ್ಟಣೆ ಇರುವ ಕಾರಣ ಸಾರ್ವಜನಿಕರು ಇಲ್ಲಿಗೆ ಬರಲು ತಮ್ಮ ಸ್ವಂತ ವಾಹನಗಳ ಬದಲಿಗೆ ಮೆಟ್ರೋ ಮತ್ತು ಬಿಎಂಟಿಸಿ ಫೀಡರ್ ಸೇವೆಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಮೆಜೆಸ್ಟಿಕ್, ಶಿವಾಜಿನಗರ ಮತ್ತು ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣಗಳಿಂದ ಶಿವಾನಂದ ವೃತ್ತಕ್ಕೆ ಬಿಎಂಟಿಸಿ ವಿಶೇಷ ಫೀಡರ್ ಬಸ್‌ಗಳ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದ್ದಾರೆ.ಚಿತ್ರಸಂತೆ ಇರುವ ಹಿನ್ನೆಲೆ ಒಂದು ದಿನ ಮಾತ್ರ ಸಂಚಾರ ವ್ಯವಸ್ಥೆಯಲ್ಲಿ ಈ ಬದಲಾವಣೆಗಳು ಇರಲಿವೆ.












Click it and Unblock the Notifications