ಬಿಡದಿ ಟೌನ್‌ಶಿಪ್ ಫೈಟ್: ಕುಮಾರಸ್ವಾಮಿ ಸವಾಲು ಸ್ವೀಕರಿಸಿ ಭೇಟಿಗೆ ಜಾಗ, ಡೇಟ್‌ ಫಿಕ್ಸ್‌ ಮಾಡಿದ ಡಿ.ಕೆ.ಶಿವಕುಮಾರ್

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಡುವಿನ ರಾಜಕೀಯ ಜಟಾಪಟಿ ಈಗ ಮತ್ತೊಂದು ಕುತೂಹಲಕಾರಿ ಹಂತಕ್ಕೆ ತಲುಪಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಹಾಗೂ ಸಮಗ್ರವಾಗಿ ಚರ್ಚಿಸಲು ತಾನು ಸಿದ್ಧನಿದ್ದು, ಜೂನ್ 26ರಂದು ವಿಧಾನಸೌಧಕ್ಕೆ ಆಗಮಿಸುವಂತೆ ಹೆಚ್‌ಡಿಕೆಗೆ ಸಿಎಂ ಡಿ.ಕೆ.ಶಿವಕುಮಾರ್‌ ಅಧಿಕೃತ ಆಹ್ವಾನ ನೀಡಿದ್ದಾರೆ.

ಐದು ಜನ ಪ್ರತಿನಿಧಿಗಳೊಂದಿಗೆ ಬನ್ನಿ

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, "ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಹಾಗೂ ಮಾಜಿ‌ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಲು ನಾನು ಸಿದ್ಧನಿದ್ದೇನೆ. ಜೂನ್‌ 26ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ತಮ್ಮ ಐವರು ಪ್ರತಿನಿಧಿಗಳೊಂದಿಗೆ ವಿಧಾನಸೌಧದ ನನ್ನ ಕಚೇರಿಗೆ ಆಗಮಿಸುವಂತೆ ಪತ್ರದ ಮೂಲಕ ಅಧಿಕೃತ ಆಹ್ವಾನ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.

DK Shivakumar

ದಾಖಲೆಗಳ ಆಧಾರದ ಮೇಲೆ ಚರ್ಚೆ ನಡೆಯಲಿ

ಬಿಡದಿ ಟೌನ್‌ಶಿಪ್ ಯೋಜನೆಯ ಇತಿಹಾಸವನ್ನು ನೆನಪಿಸಿರುವ ಡಿ.ಕೆ.ಶಿವಕುಮಾರ್, ಈ ಯೋಜನೆಯನ್ನು ಆರಂಭಿಸಿದ್ದೇ ಕುಮಾರಸ್ವಾಮಿ ಅವರು ಎಂದು ಉಲ್ಲೇಖಿಸಿದ್ದಾರೆ. "ಕುಮಾರಸ್ವಾಮಿ ಅವರೇ ಆರಂಭಿಸಿದ ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಎಲ್ಲ ದಾಖಲೆಗಳು, ಸರ್ಕಾರದ ನಿರ್ಣಯಗಳು ಹಾಗೂ ವಾಸ್ತವಾಂಶಗಳ ಆಧಾರದ ಮೇಲೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ, ಬನ್ನಿ..." ಎಂದು ಕುಮಾರಸ್ವಾಮಿ ಅವರಿಗೆ ನೇರ ಸವಾಲು ಹಾಕಿದ್ದಾರೆ.

ಏನಿದು ವಿವಾದ?

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಉಭಯ ನಾಯಕರ ನಡುವೆ ಸರಣಿ ವಾಗ್ದಾಳಿಗಳು ನಡೆದಿದ್ದವು. ಯೋಜನೆಯಲ್ಲಿ ಅಕ್ರಮ ನಡೆದಿದೆ ಹಾಗೂ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಜೆಡಿಎಸ್ ಮತ್ತು ಹೆಚ್‌ಡಿಕೆ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಡಿಕೆಶಿ, ಈಗ ನೇರವಾಗಿ ವಿಧಾನಸೌಧದಲ್ಲೇ ಮುಖಾಮುಖಿ ಚರ್ಚೆಗೆ ದಿನಾಂಕ ಹಾಗೂ ಸಮಯ ನಿಗದಿಪಡಿಸಿ ಪತ್ರ ಬರೆದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಜೂನ್ 26ರ ಈ ಹೈವೋಲ್ಟೇಜ್ ಸಭೆಗೆ ಕುಮಾರಸ್ವಾಮಿ ಅವರು ಹೋಗುತ್ತಾರಾ ಇಲ್ಲವಾ ಎಂಬುದನ್ನು ಕಾದುನೋಡಬೇಕಿದೆ.

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಉಭಯ ನಾಯಕರ ನಡುವಿನ ಈ ವಾಕ್ಸಮರ ಮೇ ತಿಂಗಳಿನಲ್ಲೇ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗ ವಾಗ್ದಾಳಿ ನಡೆಸಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು, "ನಾನು ಬಿಡದಿ ಟೌನ್‌ಶಿಪ್ ಕುರಿತು ಚರ್ಚೆ ನಡೆಸಲು ಯಾವಾಗಲೂ ತಯಾರಾಗಿದ್ದೇನೆ. ಆದರೆ ಸದ್ಯ ಆಡಳಿತದಲ್ಲಿ ಇರುವವರಿಗೆ ಅದಕ್ಕೆಲ್ಲಾ ಸಮಯವಿಲ್ಲ. ಅವರು ರೇಟ್ ಫಿಕ್ಸ್ ಮಾಡುವುದು ಮತ್ತು ವಸೂಲಿ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಮೊದಲು ಅದರಿಂದ ಬಿಡುವು ಮಾಡಿಕೊಂಡು ಅವರು ಚರ್ಚೆಗೆ ಬರಲಿ" ಎಂದು ಗಂಭೀರ ಆರೋಪ ಮಾಡಿದ್ದರು.

ಕುಮಾರಸ್ವಾಮಿ ಅವರ ಈ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಖಾರವಾಗಿ ತಿರುಗೇಟು ನೀಡಿದ್ದರು. ಹೆಚ್‌ಡಿಕೆ ಹಾಕಿದ್ದ ಸವಾಲನ್ನು ಬಹಿರಂಗವಾಗಿ ಸ್ವೀಕರಿಸಿದ್ದ ಡಿಕೆಶಿ, "ಬಿಡದಿ ಟೌನ್‌ಶಿಪ್ ವಿಷಯವಾಗಿ ಕುಮಾರಸ್ವಾಮಿ ಅವರ ಪಂಥಾಹ್ವಾನವನ್ನು ಎದುರಿಸಲು ನಾನು ಸಂಪೂರ್ಣ ಸಿದ್ಧನಾಗಿದ್ದೇನೆ. ಚರ್ಚೆಗೆ ಬೇಕಾದ ಜಾಗ ಮತ್ತು ಸಮಯ ಯಾವುದು ಎಂಬುದನ್ನು ಅವರೇ ನಿರ್ಧಾರ ಮಾಡಿ ತಿಳಿಸಲಿ" ಎಂದು ಪ್ರತಿ ಸವಾಲು ಹಾಕಿದ್ದರು. ಆ ಸವಾಲಿನ ಮುಂದುವರಿದ ಭಾಗವಾಗಿಯೇ ಈಗ ಜೂನ್ 26ರಂದು ವಿಧಾನಸೌಧದಲ್ಲಿ ಮುಖಾಮುಖಿ ಚರ್ಚೆಗೆ ಡಿಕೆಶಿ ದಿನಾಂಕ ನಿಗದಿಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+