Chicken Price: ಬೆಂಗಳೂರಿನಲ್ಲಿ ಗಗನಕ್ಕೇರುತ್ತಿದೆ ಚಿಕನ್ ಬೆಲೆ; ಎಷ್ಟಿದೆ?
ಬೆಂಗಳೂರು, ಮೇ. 27: ಬೇಸಿಗೆ ಕಡಿಮೆಯಾಗಿದೆ. ಇನ್ನೇನು ನಿಧಾನಕ್ಕೆ ಚಳಿ ಶುರುವಾಗುತ್ತಿದೆ. ಇದರ ಜೊತೆಗೆ ಮಾಂಸಪ್ರಿಯರಿಗೆ ಶಾಕಿಂಗ್ ಸುದ್ದಿ ಸಿಗುತ್ತಿದೆ. ಈಗಾಗಲೇ ನಗರದಲ್ಲಿ ಚಿಕನ್ ಬೆಲೆ ಏರಿಕೆಯಾಗುತ್ತಲೆ ಇದೆ. 200... 220 ... 280 ಇದ್ದದ್ದು ಈಗ 300 ರೂಪಾಯಿ ದಾಟಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಚಿಕನ್ ಬಳಕೆ, ಹವಾಮಾನ ವೈಪರೀತ್ಯ ಹಾಗೂ ಚಿಕ್ನ ಫುಡ್ ಬೆಲೆ ಏರಿಕೆಯಿಂದಾಗಿ ಇದೇ ಮೊದಲ ಬಾರಿಗೆ ಕೋಳಿಮಾಂಸದ ಬೆಲೆ 300 ರೂಪಾಯಿ ದಾಟಿದೆ. ಮುಂದಿನ ದಿನಗಳಲ್ಲಿ ಚಿಕನ್ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಕೋಳಿ ಅಂಗಡಿ ಮಾಲೀಕರು ಮತ್ತು ಮಾರಾಟಗಾರರು ಭವಿಷ್ಯ ನುಡಿದಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಚಿಕನ್ ಬೆಲೆ
ಬೆಂಗಳೂರಿನಲ್ಲಿ, ಕೆಲವು ವಾರಗಳ ಹಿಂದೆ 220 ರಿಂದ 280 ರೂಪಾಯಿದ್ದ ಚಿಕನ್ ಬೆಲೆಗೆ ಹೋಲಿಸಿದರೆ, ಒಂದು ಕೆಜಿ ಸ್ಕೀನ್ ಔಟ್ ಕೋಳಿ ಬೆಲೆ 300 ರಿಂದ 350 ರೂಪಾಯಿಯಾಗಿದೆ. ವಿತ್ ಸ್ಕೀನ್ ಚಿಕನ್ ಬೆಲೆ ಕೆಜಿಗೆ 200, 220 ರೂಪಾಯಿಗಳಿಂದ 280 ರೂಪಾಯಿಗೆ ಬ್ರಾಯ್ಲರ್ ಕೋಳಿ ಮಾರಾಟವಾಗುತ್ತಿದೆ.
ಲೈವ್ ಚಿಕನ್ ಸಗಟು ಮಾರುಕಟ್ಟೆಯಲ್ಲಿ ಕಿಲೋಗೆ 156 ರಿಂದ 157 ರೂಪಾಯಿಯಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 180 ರಿಂದ 200 ರೂಪಾಯಿಯಿದೆ. ರಾಜ್ಯದಲ್ಲಿನ ವಿಪರೀತ ಬಿಸಿಲಿನಿಂದ ಕೋಳಿಗಳ ಜೀವಿತಾವಧಿ ಕಡಿಮೆಯಾಗುತ್ತಿದ್ದು, ಬೆಲೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ಕೋಳಿ ಫಾರಂ ಮಾಲೀಕರು.
ಹಠಾತ್ ಬೆಲೆ ಏರಿಕೆಗೆ ಪೌಲ್ಟ್ರಿ ಫಾರ್ಮ್ ಮಾಲೀಕರು ಕಾರಣಗಳನ್ನು ವಿವರಿಸಿದ್ದಾರೆ. ಸುಮಾರು 30% ರಷ್ಟು ಕೋಳಿ ಮರಿಗಳು ಹುಟ್ಟಿದ ಎರಡು ವಾರಗಳಲ್ಲಿ ತೀವ್ರ ತಾಪಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಸಾಯುತ್ತವೆ. ಕಳೆದ ಎರಡು ತಿಂಗಳ ತಾಪಮಾನದಿಂದಾಗಿ ಕೋಳಿ ಮರಿಗಳು ಬದುಕಲು ತುಂಬಾ ಕಷ್ಟವಾಗಿತ್ತು. ಸಾಮಾನ್ಯವಾಗಿ, ಹುಟ್ಟಿದ 45 ದಿನಗಳ ನಂತರ, ಮರಿಗಳು ಕನಿಷ್ಠ ಎರಡು ಕೆಜಿ ತೂಗುತ್ತದೆ. ಆದರೆ ಈ ವರ್ಷ, ಅವುಗಳಿಗೆ ನೀಡಲಾದ ಆಹಾರವನ್ನು ತಿನ್ನಲು ಕೂಡ ತುಂಬಾ ಕಷ್ಟಕರವಾಗಿತ್ತು. ಇದರಿಂದ ಮರಿಗಳು ಸಾವನ್ನಪ್ಪಿವೆ ಎಂದಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದ ನಂತರ ಕೋಳಿ ಬೆಲೆಗಳು ರೂ 200 ಮತ್ತು 220 ರ ನಡುವೆ ಸ್ಥಿರವಾಗಿದ್ದರು. ಆದರೆ, ಈಗ ಹಿಂದೆಂದೂ ಇಲ್ಲದಂತೆ ಚಿಕನ್ ಬೆಲೆ ಏರಿಕೆಯಾಗಿವೆ. ಮುಂಬರುವ ವಾರದಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂದು ಹಲವು ಮಾರಾಟಗಾರರು ತಿಳಿಸಿದ್ದಾರೆ.
ರಾಣಿಖೇತ್ ಅಥವಾ ನ್ಯೂಕ್ಯಾಸಲ್ ಕಾಯಿಲೆ
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ಮೈಸೂರು ವಲಯದ ಅಧ್ಯಕ್ಷ ಸತೀಶ್ ಬಾಬು ಅವರನ್ನು ಉಲ್ಲೇಖಿಸಿರುವ ಡೆಕ್ಕನ್ ಹೆರಾಲ್ಡ್, "ಹೆಚ್ಚಿನ ತಾಪಮಾನವು ಮರಿಗಳ ಸಾವಿಗೆ ಪ್ರಾಥಮಿಕ ಕಾರಣವಾಗಿದ್ದರೆ, ಹೆಚ್ಚಿನ ಮರಣಕ್ಕೆ ಮತ್ತೊಂದು ಕಾರಣ ರಾಣಿಖೇತ್ ಅಥವಾ ನ್ಯೂಕ್ಯಾಸಲ್ ಕಾಯಿಲೆ. ಇದು ವೈರಲ್ ಮತ್ತು ಹೆಚ್ಚು ಪರಿಣಾಮ ಬೀರುವ ಕಾಯಿಲೆ. ಈ ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಕೋಳಿಗಳು ಸೋಂಕಿಗೆ ಒಳಗಾಗಿದ್ದರೆ, ತಮಿಳುನಾಡು ಮತ್ತು ಕೇರಳದಂತಹ ನೆರೆಯ ರಾಜ್ಯಗಳಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯ ಕೋಳಿಗಳು ಮೃತಪಟ್ಟಿವೆ" ಎಂದಿದ್ದಾರೆ.
ಇನ್ನು, ಕೋಳಿ ತಿನ್ನುವ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ. ಕೋಳಿ ಆಹಾರದಲ್ಲಿ ಪ್ರಮುಖ ಅಂಶವಾಗಿರುವ ಮೆಕ್ಕೆಜೋಳದ ಬೆಲೆ ಟನ್‌ಗೆ 26,500 ರೂ., ಸೋಯಾ ಟನ್‌ಗೆ 46,000 ರೂಪಾಯಿಯಾಗಿದೆ. ಕೋಳಿ ಆಹಾರ ಉತ್ಪಾದನೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಅಕ್ಕಿಯ ಪೂರೈಕೆಯು ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ದೊಡ್ಡ ಪ್ರಮಾಣದ ಒಡೆದ ಅಕ್ಕಿಯನ್ನು ಈಗ ಎಥೆನಾಲ್ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತದೆ.












Click it and Unblock the Notifications