ಚನ್ನಪಟ್ಟಣ ಕ್ಷೇತ್ರದಲ್ಲಿ ‘ಬೊಂಬೆ’ಯ ಸೂತ್ರ ಯಾರ ಕೈಯಲ್ಲಿ?
ಬೆಂಗಳೂರು: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕೂಡ ಒಂದಾಗಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಕುಮಾರಸ್ವಾಮಿ & ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದು. ಇಬ್ಬರ ಗೆಲುವಿಗಾಗಿ ರಣಕಾಳಗ ಚನ್ನಪಟ್ಟಣ ಕ್ಷೇತ್ರದಲ್ಲಿ ಶುರುವಾಗಿದೆ. ಹಾಗಾದರೆ ಹೇಗಿದೆ ಅಭ್ಯರ್ಥಿಗಳ ಹವಾ? ತಿಳಿಯೋಣ ಬನ್ನಿ.
'ಬೊಂಬೆ' ನಾಡು ಅಥವಾ 'ಗೊಂಬೆ' ನಾಡು ಎಂದು ಕರೆಸಿಕೊಳ್ಳುವ ಚನ್ನಪಟ್ಟಣ ಇದೀಗ ರಾಜ್ಯದ ಕೇಂದ್ರಬಿಂದು. ಯಾಕಂದ್ರೆ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ರೀತಿ ಚನ್ನಪಟ್ಟಣದಲ್ಲೂ ಎಚ್‌ಡಿಕೆಗೂ ಸೋಲು ಕಾಣಿಸಲು ಬಿಜೆಪಿ ನಾಯಕರು ಪಣತೊಟ್ಟಿದ್ದಾರೆ. ಕನಕಪುರದಲ್ಲಿ ಡಿಕೆಶಿ ವಿರುದ್ಧ ಆರ್.ಅಶೋಕ್ ಮತ್ತು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ನಿಂತಿದ್ದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿ ಗೇಮ್ ಪ್ಲ್ಯಾನ್ ಶುರುಮಾಡಿದೆ ಬಿಜೆಪಿ.

ಚನ್ನಪಟ್ಟಣಕ್ಕೆ ಕೇಸರಿ ಪಡೆ ಮುತ್ತಿಗೆ
ಮಾಜಿ ಸಿಎಂ ಕುಮಾರಸ್ವಾಮಿಗೆ ಈ ಚುನಾವಣೆ ಅಗ್ನಿಪರೀಕ್ಷೆ. ಅದ್ರಲ್ಲೂ ಸ್ವತಃ HDK ಸ್ಪರ್ಧೆ ಮಾಡ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಶುರುವಾಗಿದೆ. ಹೇಗಾದರೂ ಹೆಚ್‌ಡಿಕೆಗೆ ಸೋಲಿನ ರುಚಿ ತೋರಿಸಬೇಕು ಅಂತಾ ಬಿಜೆಪಿ ಪಣತೊಟ್ಟಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ ಬಿರುಸಿನ ಪ್ರಚಾರ ಶುರುವಾಗಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಇನ್ನೂ ಹಲವು ಘಟಾನುಘಟಿ ನಾಯಕರು ಯೋಗೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ಜೊತೆಗೆ ಸಿನಿಮಾ ತಾರೆಯರ ಅಬ್ಬರ ಕೂಡ ಜೋರಾಗಿದೆ.
ಜೆಡಿಎಸ್‌ಗೆ ಶಾಕ್ ನೀಡಲು ಸಿದ್ಧತೆ?
ಜೆಡಿಎಸ್ ಪಕ್ಷದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಿಟ್ಟರೆ ಸದ್ಯದ ಪರಿಸ್ಥಿತಿಯಲ್ಲಿ ಭಾರಿ ವರ್ಚಸ್ಸು ಇರುವ ನಾಯಕ ಮತ್ತೊಬ್ಬರಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಕೂಡ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರೂ ಅಷ್ಟೊಂದು ಪ್ರಬಲವಾಗಿ ಕ್ಯಾಂಪೇನ್ ಸಾಧ್ಯ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ಕ್ಷೇತ್ರದಲ್ಲಿ ಶಾಕ್ ಕೊಟ್ಟರೆ, ಅನಿವಾರ್ಯ ಸ್ಥಿತಿ ಎದುರಾಗಿ ಹೆಚ್‌ಡಿಕೆ ತಮ್ಮ ಕ್ಷೇತ್ರದಲ್ಲೇ ಉಳಿದು ಪ್ರಚಾರ ನಡೆಸಬೇಕಾಗಿ ಬರುತ್ತದೆ. ಹೀಗಾಗಿ ಎಚ್‌ಡಿಕೆ ಕೂಡ ತಮ್ಮ ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರ ಮುಗಿಸಿದ್ದಾರೆ.
ಚನ್ನಪಟ್ಟಣದ ಜಾತಿ ಸಮೀಕರಣವೇನು?
ಚನ್ನಪಟ್ಟಣ ಕ್ಷೇತ್ರದ ಜಾತಿ ಲೆಕ್ಕಾಚಾರ ನೋಡುವುದಾದರೆ ಈ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ ಎನ್ನಬಹುದು. ಹೀಗಾಗಿ, ಒಕ್ಕಲಿಗ ಸಮುದಾಯದ ಸಿ.ಪಿ.ಯೋಗೇಶ್ವರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ಧಾರೆ. ಒಕ್ಕಲಿಗರು ಯಾರ ಪರ ಮತ ಚಲಾಯಿಸುತ್ತಾರೋ ಅವರದ್ದೇ ಗೆಲುವು ಗ್ಯಾರಂಟಿ. ಇನ್ನುಳಿದಂತೆ ಮುಸ್ಲಿಂ ಮತದಾರರು 2ನೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ದಲಿತರ ಮತಗಳು ಕೂಡ ನಿರ್ಣಾಯಕ. ಹೀಗಾಗಿ ಮತಗಳನ್ನ ಕ್ರೂಢಿಕರಿಸುವ ಕಾರ್ಯಕ್ಕೂ ಬಿಜೆಪಿ ಮತ್ತು ಜೆಡಿಎಸ್ ಚನ್ನಪಟ್ಟಣದಲ್ಲಿ ತಂತ್ರ ಹೆಣೆಯುತ್ತಿದೆ.

ನಟನಾಗಿ ಸಾಕಷ್ಟು ಹೆಸರು ಗಳಿಸಿದ್ದ ಸಿ.ಪಿ.ಯೋಗೇಶ್ವರ್ ಮೊದಲ ಬಾರಿಗೆ 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. 2004, 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್‌ನ ಎಂ.ಸಿ.ಅಶ್ವಥ್ ಅವರನ್ನು 2 ಬಾರಿ ಮಣಿಸಿದ್ದರು. 2009ರಲ್ಲಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರಿದ ಹಿನ್ನೆಲೆ ಉಪ ಚುನಾವಣೆ ನಡೆಯಿತು. ಜೆಡಿಎಸ್ ಅಭ್ಯರ್ಥಿ ಎಂ.ಸಿ. ಅಶ್ವಥ್ ಗೆದ್ದರು ಕೂಡ ಮುಂದಿನ ದಿನಗಳಲ್ಲಿ ಅವರೂ ಬಿಜೆಪಿ ಸೇರಿದರು. 2011ರಲ್ಲಿ ಚನ್ನಪಟ್ಟಣ ಕ್ಷೇತ್ರ ಮತ್ತೊಂದು ಉಪ ಚುನಾವಣೆ ಎದುರಿಸಿತು. ಆಗ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ನಾಗರಾಜ್ ಅವರನ್ನು ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಣಿಸಿದರು.
2013ರ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಎಸ್‌ಪಿಗೆ ಹಾರಿದ್ರು. ಆಗ 2013ರ ಚುನಾವಣೆಯಲ್ಲಿ ಜಯ ಸಾಧಿಸಿದರು. ನಂತರ 2018ರ ಚುನಾವಣೆ ವೇಳೆಗೆ ಬಿಜೆಪಿಗೆ ಮರಳಿದ ಸಿ.ಪಿ. ಯೋಗೇಶ್ವರ್‌ಗೆ ಶಾಕ್ ಕಾದಿತ್ತು. ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಎದುರು ಸಿ.ಪಿ.ಯೋಗೇಶ್ವರ್ 2018ರಲ್ಲಿ ಸೋಲು ಕಂಡರು. ಆ ಕ್ಷಣದಿಂದಲೂ ಇಬ್ಬರ ನಡುವೆ ಭಾರಿ ಕಾದಾಟ ಶುರುವಾಗಿದ್ದು, 2023ರಲ್ಲಿ ಗೆಲುವು ಯಾರಿಗೆ? ಎಂಬುದನ್ನ ಕಾದು ನೋಡಬೇಕು.












Click it and Unblock the Notifications