• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಯವಿಟ್ಟು ಭೂ ಶೋಷಣೆಯನ್ನು ಕಡಿಮೆ ಮಾಡಿ : ಕಂಬಾರ

By Prasad
|

ಬೆಂಗಳೂರು, ಏ. 22 : ಮಿತಿಮೀರಿ ಭೂಮಾತೆಯ ಶೋಷಣೆ ಮಾಡುತ್ತಿರುವ ಮಾನವ ಭೂಮಿಯ ರಕ್ಷಣೆಯ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಸಾಹಿತಿ ಹಾಗೂ ಚಿಂತಕ ಡಾ: ಚಂದ್ರಶೇಖರ ಕಂಬಾರರು ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ಹಾಗೂ ಪರಿಸರ-ನಿಸರ್ಗ ಸಂರಕ್ಷಣಾ ಸಂಸ್ಥೆ, ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿರಿಸಂಪಿಗೆ, ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ ಮುಂತಾದ ಕೃತಿಗಳನ್ನು ರಚಿಸಿರುವ ಅವರು ಮಾತಿನುದ್ದಕ್ಕೂ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಇಂದು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕೃತಿ ಸಂರಕ್ಷಣೆ ಬಗ್ಗೆ ಹೆಚ್ಚಿನ ಉದಾಸೀನತೆ ಕಂಡುಬರುತ್ತಿದೆ. ಗ್ರಾಮಗಳಲ್ಲಿ ಹೆಚ್ಚಿನ ಜಾಗ ಲಭ್ಯವಿರುವುದು ಬಿಟ್ಟರೆ ನೈಸರ್ಗಿಕ ಪರಿಸ್ಥಿತಿ ನಗರಗಳಿಗಿಂತ ದಾರುಣವಾಗಿದೆ ಎಂದು ಕಂಬಾರರು ಆತಂಕ ವ್ಯಕ್ತಪಡಿಸಿದರು. [ವಸುಂಧರೆಗೊಂದು ದಿನ]

ಕಡಿದ ಮರಗಳ ಜಾಗದಲ್ಲಿ ಮಾನವ ಮತ್ತೊಂದು ಗಿಡವನ್ನು ನೆಡುವ ಆಲೋಚನೆಯನ್ನೇ ಮಾಡದಿರುವುದು ಅಪಾಯಕಾರಿಯಾಗಲಿದೆ ಎಂದು ಅವರು ಎಚ್ಚರಿಸಿದರು. ಪ್ರಕೃತಿ ಸಂರಕ್ಷಣೆ ಹಾಗೂ ಸಮತೋಲನ ಕಾಪಾಡುವ ದೀಕ್ಷೆಯನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದವರಿಗೆ ಕಂಬಾರರು ಬೋಧಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪರಿಸರ ಹಾಗೂ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಅವರು ಮಾತನಾಡಿ, ಇಂದಿನ ಪೋಷಕರು ಪರಿಸರ ಪ್ರೇಮಿಗಳಾದಾಗ ಮಾತ್ರ ಮುಂದಿನ ಪೀಳಿಗೆ ಪರಿಸರ ರಕ್ಷಿಸಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷ ಭಾಷಣ ಮಾಡಿದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಪಿ ಎನ್ ಶ್ರೀನಿವಾಸಚಾರಿ, ತನ್ನ ಹುಟ್ಟುಗುಣಗಳಾದ ಸ್ವಾರ್ಥ, ದುರಾಸೆ ಹಾಗೂ ಶೋಷಣಾ ಮನೋಭಾವದಿಂದಾಗಿ ಜಗತ್ತು ವಿನಾಶದ ಅಂಚಿಗೆ ನಿಧಾನವಾಗಿ ಕರೆದೊಯ್ಯುತ್ತಿರುವ ಮಾನವನು ಜೀವಸಂಕುಲಕ್ಕೆ ಆಧುನಿಕ ರಾಕ್ಷಸನಂತೆ ಪರಿಣಮಿಸಿದ್ದಾನೆ ಎಂದರು. ಈಗಲಾದರೂ, ತನ್ನ ತಪ್ಪಿನ ಅರಿವಾಗಿ, ಕಣ್ತೆರದು ಇರುವ ಸಂಪತ್ತನ್ನು ಕಾಪಾಡಿಕೊಂಡರೆ ಈ ಭೂ ದಿನದ ಆಚರಣೆಯು ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.

English summary
Jnanpith award winning writer Chandrashekhar Kambar has urged youth to take more responsibility to save earth. Journalist Nagesh Hegde too said, parents should become nature lovers first and instil love in their children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X