Darshan: ಸುಮಲತಾ ಮನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ; ಮಂಡ್ಯ ಟಿಕೆಟ್ ವಿಚಾರ ಚರ್ಚೆ?
ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಭಾರಿ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರ ಸದ್ಯ ಕುತೂಹಲದ ಕೇಂದ್ರ ಬಿಂದುವಾಗಿದೆ.
ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಸೀಟು ಯಾರ ಪಾಲಾಗಲಿದೆ ಎನ್ನುವ ಕುತೂಹಲ ಇದೆ. ಒಂದು ವೇಳೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ಹಾಲಿ ಸಂಸದೆ ಸುಮಲತಾ ಅವರ ಸ್ಪರ್ಧೆ ಅತಂತ್ರವಾಗಲಿದೆ.

ಯಾವುದೇ ಕಾರಣಕ್ಕೂ ಮಂಡ್ಯ ಬಿಡುವುದಿಲ್ಲ ಎಂದಿರುವ ಸುಮಲತಾ, ಭಾನುವಾರ ತಮ್ಮ ನಿವಾಸದಲ್ಲಿ ಆಪ್ತರ ಜೊತೆ ಸರಣಿ ಚರ್ಚೆ ಮಾಡಿದ್ದಾರೆ. ತಮ್ಮ ಬೆಂಬಲಿಗರು, ಆಪ್ತರ ಜೊತೆ ಚರ್ಚೆ ಮಾಡುತ್ತಿರುವ ಸುಮಲತಾ, ಅಕಸ್ಮಾತ್ ಮಂಡ್ಯ ಜೆಡಿಎಸ್ ಪಾಲಾದರೆ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಸುಮಲತಾ ಮನೆಗೆ ದರ್ಶನ್ ಭೇಟಿ
ಇನ್ನು ಭಾನುವಾರ ಸರಣಿ ಚರ್ಚೆಯ ನಡುವೆಯೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೆಪಿ ನಗರದಲ್ಲಿರುವ ಸುಮಲತಾ ಅವರ ಮನೆಗೆ ಭೇಟಿ ನೀಡಿದ್ದು ಭಾರಿ ಕುತೂಹಲ ಮೂಡಿಸಿದೆ. ಅಭಿಷೇಕ್ ಅಂಬರೀಶ್ ಅವರ ಜೊತೆಗೂಡಿ ದರ್ಶನ್ ಸುಮಲತಾ ಮನೆಗೆ ಭೇಟಿ ನೀಡಿದ್ದಾರೆ. ಮಂಡ್ಯದಲ್ಲಿರುವ ಸುಮಲತಾ ಬೆಂಬಲಿಗರೂ ಕೂಡ ಜೆಪಿ ನಗರದ ನಿವಾಸಕ್ಕೆ ಆಗಮಿಸಿದ್ದು ಚರ್ಚೆ ಮಾಡಿದ್ದಾರೆ.
ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್ ಪಟ್ಟು ಹಿಡಿದಿದೆ ಎನ್ನಲಾಗಿದೆ. ಸುಮಲತಾ ಕೂಡ ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ, ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡು, ತನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸುಮಲತಾ ಬಿಜೆಪಿಗೆ ಸೇರ್ಪಡೆಯಾಗಿಲ್ಲವಾದರೂ, ಬಿಜೆಪಿಗೆ ಬೆಂಬಲ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದರು.
ಒಂದು ವೇಳೆ ಬಿಜೆಪಿ ಏನಾದರೂ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಸುಮಲತಾ ಚರ್ಚೆ ಮಾಡುತ್ತಿದ್ದಾರೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿನಲ್ಲಿ ನಟ ದರ್ಶನ್ ಮತ್ತು ಯಶ್ ಪಾತ್ರ ಪ್ರಮುಖವಾಗಿತ್ತು. ಈ ಇಬ್ಬರೂ ಕ್ಷೇತ್ರದ ಹಳ್ಳಿ ಹಳ್ಳಿಗೆ ತೆರಳಿ ಸುಮಲತಾ ಪರವಾಗಿ ಮತ ಯಾಚನೆ ಮಾಡಿದ್ದರು. ಆದರೆ ಈಗ ಯಶ್ ರಾಜಕೀಯದಿಂದ ದೂರ ದೂರ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ದರ್ಶನ್ ಅಂಬರೀಶ್ ಕುಟುಂಬದ ಅತ್ಯಾಪ್ತರಾಗಿದ್ದು ಅವರು ಈ ಬಾರಿ ಕೂಡ ಸುಮಲತಾ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಒಂದು ವೇಳೆ ಬಿಜೆಪಿಯಿಂದ ಸುಮಲತಾ ಸ್ಪರ್ಧೆಗೆ ಅವಕಾಶ ಸಿಗದೇ ಇದ್ದರೆ ಕಾಂಗ್ರೆಸ್ ಸೇರುವ ಆಯ್ಕೆ ಕೂಡ ಅವರ ಮುಂದಿದೆ ಎನ್ನಲಾಗಿದೆ. ಅಥವಾ ಕಳೆದ ಬಾರಿಯಂತೆ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಅವಕಾಶ ಇದ್ದು, ಸುಮಲತಾ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.












Click it and Unblock the Notifications