ಬೆಂಗಳೂರಲ್ಲಿ ರೌಡಿ ಶೀಟರ್ ಮೇಲೆ ಗುಂಡು ಹಾರಿಸಿದ ಪೊಲೀಸರು
ಬೆಂಗಳೂರು, ಅಕ್ಟೋಬರ್ 17 : ಬೆಂಗಳೂರಿನಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದರು. ರೌಡಿ ವಾಸು ಮೇಲೆ ದಾಳಿ ನಡೆಸಲಾಗಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಗಳವಾರ ರಾತ್ರಿ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನಪಾಳ್ಯದಲ್ಲಿ ರೌಡಿ ಶೀಟರ್ ವಾಸು ಅಲಿಯಾಸ್ ಅಂದ್ರಹಳ್ಳಿ ವಾಸು ಮೇಲೆ ಸಿಸಿಬಿ ಇನ್‌ಸ್ಪೆಕ್ಟರ್ ಮಂಜುನಾಥ್ ಗುಂಡು ಹಾರಿಸಿದರು.

ಬ್ಯಾಡರಹಳ್ಳಿ, ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ವಾಸು ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕೊಲೆ, ಕೊಲೆಯತ್ನ, ದರೋಡೆ, ಹಲ್ಲೆ ಸೇರಿದಂತೆ 10 ಪ್ರಕರಣಗಳಲ್ಲಿ ವಾಸು ಪೊಲೀಸರಿಗೆ ಬೇಕಾಗಿದ್ದ. ಒಂದೂವರೆ ವರ್ಷದಿಂದ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ.
ಮಂಗಳವಾರ ರಾತ್ರಿ ಮರಿಯಪ್ಪನಪಾಳ್ಯದಲ್ಲಿ ವಾಸು ಇರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮಂಜುನಾಥ್ ನೇತೃತ್ವದ ತಂಡವು ಸ್ಥಳಕ್ಕೆ ತೆರಳಿ, ವಾಸುವನ್ನು ಬಂಧಿಸಲು ಮುಂದಾಯಿತು.
ಪೊಲೀಸರನ್ನು ಕಂಡ ತಕ್ಷಣ ವಾಸು ಪರಾರಿಯಾಗಲು ಯತ್ನಿಸಿದ. ಈ ವೇಳೆ ಆತನನ್ನು ಸುತ್ತುವರೆದು ಶರಣಾಗಲು ಸೂಚಿಸಲಾಯಿತು. ಆಗ ಆರೋಪಿ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ. ಆಗ ಆತ್ಮರಕ್ಷಣೆಗಾಗಿ ಮಂಜುನಾಥ್ ವಾಸು ಕಾಲಿಗೆ ಗುಂಡು ಹಾರಿಸಿದರು.












Click it and Unblock the Notifications