ಸಿಬಿಐನಿಂದ ಆನಂದ್ ಸಿಂಗ್ ಬಂಟರ ಬಂಧನ
ಬೆಂಗಳೂರು, ಸೆ. 24: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧಿಸಿದಂತೆ ಶಾಸಕ ಆನಂದಸಿಂಗ್ ಆಪ್ತ ಅದಿರು ವ್ಯಾಪಾರಿ ಅಸ್ಗರ್ ಖಾನ್ ಹಾಗೂ ಮುತ್ಯಾಲ ಶಿವಕುಮಾರ ಅವರನ್ನು ಸಿಬಿಐ ಪೊಲೀಸರು ಬಂಧಿಸಿ ನಗರದ ಅಜ್ಞಾತ ಸ್ಥಳವೊಂದರಲ್ಲಿ ವಿಚಾರಣೆಗೆ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಬೇಲೆಕೇರಿ ಬಂದರಿನಿಂದ ಅಪಾರ ಪ್ರಮಾಣದ ಅದಿರು ನಾಪತ್ತೆಯಾಗಿತ್ತು. ಸಿಬಿಐ ಅಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಹೊಸಪೇಟೆ ಶಾಸಕ ಆನಂದಸಿಂಗ್ ಅವರ ಆಪ್ತ ಅದಿರು ವ್ಯಾಪಾರಿ ಅಸ್ಗರ್ ಖಾನ್ ಹಾಗೂ ಮುತ್ಯಾಲ ಶಿವಕುಮಾರ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆನಂದ್ ಸಿಂಗ್ ಗೆ ಸೇರಿರುವ ವೈಷ್ಣವಿ ಮಿನರಲ್ಸ್ ಕಂಪನಿ ಮೂಲಕ ಇವರಿಬ್ಬರು ಅದಿರು ನಾಪತ್ತೆಗೆ ಸಹಕರಿಸಿದ್ದರು ಎಂಬ ಆರೋಪವಿದೆ. ಧನ ಭೀತಿಗೆ ಒಳಗಾಗಿರುವ ಕೂಡ್ಲಿಗಿ ಪಕ್ಷೇತರ ಶಾಸಕ ನಾಗೇಂದ್ರ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಅವರು 239 ಕೋಟಿ ರುಗೂ ಅಧಿಕ ಆಸ್ತಿ ಘೋಷಿಸಿದ್ದು, ಮೈನಿಂಗ್ ಉದ್ಯಮವಲ್ಲದೆ ಪ್ರವಾಸೋದ್ಯಮ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆನಂದ್ ಸಿಂಗ್ ಅವರಿಗೆ ಸೇರಿದ ಕಂಪನಿಗಳು ಗಾಲಿ ಜನಾರ್ದನ ರೆಡ್ಡಿ ಅಣತಿಯಂತೆ ಅದಿರು ನಾಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಲಾಗಿದೆ.
ಇಬ್ಬರು ಬಂಧಿತರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಸೆ.30ರ ತನಕ ಸಿಬಿಐ ಕಸ್ಟಡಿಗೆ ವಹಿಸಲಾಗಿದೆ. ಆನಂದ್ ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ನಿರೀಕ್ಷಿತ ಜಾಮೀನು ಅರ್ಜಿ ಹಾಕಿ ನಾಪತ್ತೆಯಾಗಿದ್ದಾರೆ. ಅರ್ಜಿ ವಿಚಾರಣೆ ಇನ್ನೂ ನಡೆಯಬೇಕಿದೆ.
ಈ ಮಧ್ಯೆ ಕಂಪ್ಲಿ ಶಾಸಕ ಸುರೇಶ್ ಬಾಬು ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಸೆ.27ರವರೆಗೆ ಸಿಬಿಐ ವಶಕ್ಕೆ ನೀಡಿದೆ. ಸುರೇಶ್ ಬಾಬು, ಸತೀಶ್ ಸೈಲ್‌ರನ್ನು ಸಿಬಿಐ ಅಧಿಕಾರಿಗಳು ನಗರದ ಅಜ್ಞಾತ ಸ್ಥಳದಲ್ಲಿ ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ಆನಂದ್ ಸಿಂಗ್ ಎಲ್ಲಿ?: ನನ್ನ ಕಕ್ಷಿದಾರರು ಕೋರ್ಟ್ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಅವರು ಅನಾರೋಗ್ಯಪೀಡಿತರಾಗಿದ್ದು ವಿದೇಶಕ್ಕೆ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ಆನಂದ್ ಸಿಂಗ್ ಪರ ವಕೀಲರು ಹೇಳಿದ್ದಾರೆ. ಮೂಲಗಳ ಪ್ರಕಾರ ಆನಂದ್ ಸಿಂಗ್ ಅವರು ಸಿಂಗಪುರದಲ್ಲಿ ನೆಲೆಸಿದ್ದಾರೆ. ಸಿಂಗಪುರ ಕೂಡಾ ಗಾಲಿ ರೆಡ್ಡಿ ಅವರ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು ಸಿಬಿಐ ಕಣ್ಣು ಬಿದ್ದಿದೆ. ಆನಂದ್ ಸಿಂಗ್ ಸಿಂಗಪುರದಲ್ಲೇ ಇರುವುದು ಖಾತ್ರಿಯಾದರೆ ಇನ್ನಷ್ಟು ತನಿಖೆ ಕುತೂಹಲಕಾರಿ ಘಟ್ಟ ತಲುಪುತ್ತದೆ. ಈ ನಡುವೆ ಅಕ್ರಮ ಗಣಿಗಾರಿಕೆ, ಅದಿರು ನಾಪತ್ತೆ ಪ್ರಕರಣದಲ್ಲಿ ಜೈಲು ಸೇರಿರುವ ಗಾಲಿ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆ ಸೆ.30ರ ನಂತರ ವಿಚಾರಣೆಗೆ ಬರಲಿದೆ.












Click it and Unblock the Notifications