BWSSB: ಜನರೇ ಗಮನಿಸಿ, ಪೂರ್ಣ ಬೆಂಗಳೂರು ನಗರದಲ್ಲಿ ಕಾವೇರಿ ನೀರು ಪೂರೈಕೆ ವ್ಯತ್ಯಯ
ಬೆಂಗಳೂರು, ಅಕ್ಟೋಬರ್ 21: ಕಳೆದ ವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಕಾವೇರಿ-5ನೇ ಹಂತದ ಯೋಜನೆಯ ಲೋಕಾರ್ಪಣೆ ನಡೆದಿದೆ. ಈಗ ಇಡೀ ಬೆಂಗಳೂರು ನಗರದಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಪ್ರಕಟಣೆ ಬಂದಿದೆ. ಜನರು ಸಹಕಾರ ನೀಡಬೇಕು ಎಂದು ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.
ಈ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರರು (ಕಾವೇರಿ-ಕಾರ್ಯಾಚರಣೆ ಮತ್ತುನಿರ್ವಹಣೆ) ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಪ್ರಕಟಣೆ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯ ಚಾಲನೆಯ ನಂತರದ (Post Commissioning) ಎಲೆಕ್ಟ್ರಿಕಲ್ ಸಂಬಂಧಿತ ಕೆಪಿಟಿಸಿಎಲ್ ಕಾಮಗಾರಿಗಳನ್ನು ಕೈಗೊಳ್ಳಲು ತಾತಗುಣಿ ಮತ್ತು ಹಾರೋಹಳ್ಳಿಯಲ್ಲಿರುವ 220 ಕೆವಿ ವಿದ್ಯುತ್ ಉಪ ಕೇಂದ್ರಗಳನ್ನು ದಿನಾಂಕ 23-10-2024ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಅಂದರೆ ಒಟ್ಟು 6 ಗಂಟೆಗಳ ಕಾಲ ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ ಹಂತಗಳ ನೀರು ಸರಬರಾಜು 6 ಗಂಟೆಗಳ ಕಾಲ ಸ್ಥಗಿತಗೊಳ್ಳುವ (Shutdown) ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಇಡೀ ನಗರದಲ್ಲಿ ನೀರಿನ ವ್ಯತ್ಯಯ: ಈ ವಿಷಯಕ್ಕೆ ಸಂಬಂಧಿಸಿದಂತೆ, ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯ ಚಾಲನೆಯ ನಂತರದ (Post Commissioning) ಎಲೆಕ್ಟ್ರಿಕಲ್ ಸಂಬಂಧಿತ ಕೆಪಿಟಿಸಿಎಲ್ ಕಾಮಗಾರಿಗಳನ್ನು ಕೈಗೊಳ್ಳಲು ತಾತಗುಣಿ ಮತ್ತು ಹಾರೋಹಳ್ಳಿಯಲ್ಲಿರುವ 220 ಕೆವಿ ವಿದ್ಯುತ್ ಉಪ ಕೇಂದ್ರಗಳನ್ನು ದಿನಾಂಕ 23-10-2024 ರಂದು (ಬುಧವಾರ) ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಅಂದರೆ ಒಟ್ಟು 6 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ.
ಈ ಕುರಿತು ಕಛೇರಿ ಟಿಪ್ಪಣಿಗೆ ಮಾನ್ಯ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ. ಸಕ್ಷಮ ಪ್ರಾಧಿಕಾರದವರಯ ಅನುಮೋದನೆ ನೀಡಿರುತ್ತಾರೆ. ಇದರಿಂದ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ ಹಂತಗಳ ನೀರು ಸರಬರಾಜು ಸಹ 6 ಗಂಟೆಗಳ ಕಾಲ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆದುದರಿಂದ ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ಸ್ಥಗಿತಗೊಳಿಸಲಾಗುತ್ತದೆ. ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಪ್ರದೇಶಗಳಲ್ಲಿನ ಬೆಂಗಳೂರಿನ ನಾಗರಿಕರಿಗೆ, ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಅರಿವು ಮೂಡಿಸಲು ಮನವಿ ಮಾಡಲಾಗಿದೆ.
ಯೋಜನೆ ಲೋಕಾರ್ಪಣೆ: ಕರ್ನಾಟಕ ಸರ್ಕಾರ ಕಳೆದ ವಾರದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಕಳೆದ ವಾರ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಕಾವೇರಿ-5ನೇ ಹಂತದ ಯೋಜನೆಯನ್ನು ಲೋಕಾರ್ಪಣೆ ಮಾಡಿದೆ.
ಯೋಜನೆ ಲೋಕಾರ್ಪಣೆ ಮಾಡಿ ಮಾತನಾಡಿದ್ದ ಜಲಸಂಪನ್ಮೂಲ ಸಚಿವ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, "ನಮ್ಮ ಸರ್ಕಾರ ಮಾತು ಕೊಟ್ಟಂತೆ ಕಾವೇರಿ ಐದನೇ ಹಂತದ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದು, ದಶಕದ ಕನಸು ಕೊನೆಗೂ ನನಸಾಗಿದೆ. ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯು ಭಾರತದಲ್ಲೇ ಅತ್ಯಂತ ದೊಡ್ಡದಾಗಿದ್ದು, 50 ಲಕ್ಷ ಜನರಿಗೆ ನೀರು ಸಿಗಲಿದೆ" ಎಂದು ಹೇಳಿದ್ದರು.
"ಈ ಯೋಜನೆಯು 775 ಎಂಎಲ್‌ಡಿ ಸಾಮರ್ಥ್ಯ ಹೊಂದಿರುವ ಭಾರತದ ಅತಿದೊಡ್ಡ ನೀರು ಸಂಸ್ಕರಣಾ ಘಟಕದ ನಿರ್ಮಾಣವನ್ನು ಒಳಗೊಂಡಿದೆ. ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ಪೂರೈಸಲು ಅತ್ಯಾಧುನಿಕ ಪ್ರವಾಹ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದ ಬೆಂಗಳೂರಿನ ನೀರಿನ ಸಮಸ್ಯೆ ದೂರಾಗಲಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಈ ಯೋಜನೆ ಸಾಕಾರಗೊಂಡಿರುವುದೇ ಸಾಕ್ಷಿ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದರು.
"ಕಾವೇರಿ ಕಣಿವೆಯಲ್ಲಿ ಹಂಚಿಕೆಯಾಗದೇ ಉಳಿದಿದ್ದ 6 ಟಿಎಂಸಿ ಅಡಿ ನೀರನ್ನು ಬೆಂಗಳೂರು ನಗರಕ್ಕೆ ಹಂಚಿಕೆ ಮಾಡಲಾಗಿದ್ದು, ಅದೂ ಸೇರಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಕಾವೇರಿ-6ನೇ ಹಂತದ ಯೋಜನೆಯನ್ನು ರೂಪಿಸಲಾಗುತ್ತಿದೆ" ಎಂದು ಡಿ. ಕೆ. ಶಿವಕುಮಾರ್ ಭವಿಷ್ಯದ ಯೋಜನೆಯ ಮಾಹಿತಿ ನೀಡಿದ್ದರು.
"ಈಗಾಗಲೇ ಅಳವಡಿಸಿರುವ ಕೊಳವೆಗಳ ಪಕ್ಕದಲ್ಲೇ ಹೊಸ ಕೊಳವೆ ಅಳವಡಿಸುವುದೂ ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ. ಇದಲ್ಲದೆ ಇಡೀ ರಾಜ್ಯದಲ್ಲಿ ಕೆರೆಗಳನ್ನು ತುಂಬಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಹಂತ ಹಂತವಾಗಿ ರಾಜ್ಯದ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ದಿಟ್ಟ ಹೆಜ್ಜೆಗಳನ್ನು ಇಡಲಿದೆ" ಎಂದು ಸಚಿವರು ಭರವಸೆ ನೀಡಿದ್ದರು.












Click it and Unblock the Notifications