Cauvery dispute: ಸಿಎಂ ಕರೆದ ತುರ್ತು ಸರ್ವಪಕ್ಷದ ಸಭೆಯ ಮಹತ್ವದ ನಿರ್ಧಾರಗಳು
ಬೆಂಗಳೂರು, ಸೆಪ್ಟೆಂಬರ್ 13: ತಮಿಳುನಾಡಿಗೆ ನೀರು ಬಿಡಬೇಕಾ ಬೇಡವಾ ಎನ್ನುವುದಕ್ಕಿಂತ ನಮ್ಮಲ್ಲಿ ನೀರೇ ಇಲ್ಲ. ಹೀಗಾಗಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತವನ್ನು ಎಲ್ಲರೂ ಒಟ್ಟಾಗಿ ಕಾಪಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸರ್ವ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿದ್ದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತುರ್ತಾಗಿ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದರು.

ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸಲಾಗಿದೆ. "ಇದುವರೆಗಿನ ಆದೇಶದ ಪ್ರಕಾರ ನಾವು 99 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಈವರೆಗೂ 37 ಟಿಎಂಸಿ ಮಾತ್ರ ಬಿಡಲಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ರಕ್ಷಣೆಗೆ ಬೇಕು. ಕುಡಿಯುವ ನೀರಿಗೆ 33 ಟಿಎಂಸಿ ನೀರು ಬೇಕು. ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಬೇಕು. ಆದರೆ ನಮ್ಮಲ್ಲಿ ಸಂಗ್ರಹ ಇರುವುದು 53 ಟಿಎಂಸಿ ಮಾತ್ರ, ನಮ್ಮಲ್ಲಿ ನೀರೇ ಇಲ್ಲ.
ನಮ್ಮ ಅಧಿಕಾರಿಗಳು ರಾಜ್ಯದ ವಾಸ್ತವಾಂಶವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ನಿತ್ಯ 5 ಟಿಎಂಸಿ ನೀರು ಬಿಡಲು ಸೂಚಿಸಲಾಗಿದೆ. ನಮ್ಮ ರೈತರ ಪ್ರಾಣವನ್ನು, ಹಿತವನ್ನು ಕಡೆಗಣಿಸಿ ನೀರು ಬಿಡಬೇಕು ಎಂದು ಯಾರೂ ಹೇಳಿಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದ್ದಾರೆ.
ಸಂಕಷ್ಟ ಹಂಚಿಕೆ ಸೂತ್ರವಿಲ್ಲದ್ದು ಸಮಸ್ಯೆಗೆ ಕಾರಣ
ಕಳೆದ 28 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಕಾವೇರಿ, ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಚರ್ಚಿಸಲಾಗಿತ್ತು. ಇಂದು ಕೇವಲ ಕಾವೇರಿ ನೀರಿನ ವಿಚಾರವಾಗಿ ಸಭೆ ನಡೆಸಲಾಗಿದೆ. ಅಂದು ಕೂಡ ಕಾವೇರಿ ನೀರು ನಿಯಂತ್ರಣ ಸಮಿತಿಯು 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿ ನಮ್ಮ ವಾದ ಆಲಿಸಿದ ನಂತರ ಐದು ಸಾವಿರ ಕ್ಯೂಸೆಕ್ಸ್ ಬಿಡಲು ಸೂಚಿಸಿತ್ತು. ಮತ್ತೆ ನಿನ್ನೆ ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಮಾಡಿದೆ.
ಸಾಮಾನ್ಯ ಮಳೆಯಾದಾಗ ನೀರು ಬಿಡಲು ತಕರಾರಿಲ್ಲ. ಕಳೆದ ವರ್ಷ 667 ಟಿಎಂಸಿ ಬಿಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ ದುರದೃಷ್ಟವಶಾತ್ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ ಎಂದು ವಾಸ್ತವ ಪರಿಸ್ಥಿತಿಯನ್ನು ತಿಳಿಸಿದರು.
ಮೇಕೆದಾಟು ಯೋಜನೆ ಒಂದೇ ಪರಿಹಾರ
ನಮ್ಮ ಮುಂದೆ ಎರಡು ದಾರಿ ಇದೆ- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮತ್ತೆ ಅರ್ಜಿ ಹಾಕುವುದು ಮೊದಲ ದಾರಿ. ಎರಡನೇ ಆಯ್ಕೆ ನೀರು ಇಲ್ಲ ನಮ್ಮ ಬಳಿ ಎಂದು ಸುಪ್ರೀಂ ಕೋರ್ಟಿನ ಮೊರೆ ಹೋಗಬೇಕು ಎಂದು ಹೇಳಿದರು. ಇಂದು ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಿ ಜಲಶಕ್ತಿ ಸಚಿವರನ್ನು ಭೇಟಿಯಾಗಲಿದ್ದಾರೆ. ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ. ನಾವು ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ನೀರು ಕೊಡುವುದು ಕಷ್ಟವಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರೈತರನ್ನು ಬಲಿಕೊಟ್ಟು ನೀರು ಕೊಡಲಾಗದು. ಈಗ ಸಂಕಷ್ಟದಲ್ಲಿದ್ದೇವೆ ನಾವು. ನಾವೆಲ್ಲರೂ ಒಟ್ಟಿಗೆ ಹೋಗಬೇಕು. ಈ ಸಂಕಷ್ಟಕ್ಕೆ ಮೇಕೆದಾಟು ಯೋಜನೆಯೇ ಪರಿಹಾರ ಎಂದರು. ಹೀಗಾಗಿ ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಮ್ಮ ರಾಜಕೀಯ ಒಲವು, ನಿಲುವುಗಳನ್ನು ಬದಿಗಿಟ್ಟು ,ನಮ್ಮ ರಾಜ್ಯದ ರೈತರ ಹಿತ ಮತ್ತು ಕುಡಿಯುವ ನೀರಿನ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.
123 ವರ್ಷಗಳಲ್ಲೇ ಕಡಿಮೆ ಮಳೆ
ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕಳೆದ 123 ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಅತಿ ಕಡಿಮೆ ಮಳೆಯಾಗಿದೆ. ಅತೀ ಕಡಿಮೆ ನೀರು ಸಂಗ್ರಹವಿದೆ. ಈ ಹಿನ್ನೆಲೆಯಲ್ಲಿ ನೀರಿನ ಕೊರತೆ ಇರುವುದರಿಂದ ಕೈಗೊಳ್ಳಬಹುದಾದ ಕಾನೂನು ಕ್ರಮಗಳು, ರಾಜಕೀಯ ಕ್ರಮಗಳು ಹಾಗೂ ಕೇಂದ್ರ ಸರ್ಕಾರದ ನೆರವು ಕೋರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ತಾಂತ್ರಿಕ ಪರಿಣತರು, ಕಾನೂನು ತಜ್ಞರು, ಆ ಭಾಗದ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಲವು ಸಚಿವರು ಭಾಗವಹಿಸಿದ್ದರು.












Click it and Unblock the Notifications