ಪರೀಕ್ಷೆ ಬರೆದು 17 ತಿಂಗಳಾದರೂ ಬಾರದ ಫಲಿತಾಂಶ: ಕೆಪಿಎಸ್‌ಸಿ ಮುಂದೆ ಅಭ್ಯರ್ಥಿಗಳ ಪ್ರತಿಭಟನೆ
ಬೆಂಗಳೂರು ಜುಲೈ 26: ಸರ್ಕಾರಿ ಖಾಲಿ ಹುದ್ದೆಗಳಿಗೆ ಪರೀಕ್ಷೆ ಬರೆದು ವರ್ಷ ಕಳೆದರೂ ಫಲಿತಾಂಶ ಬಾರದ ಹಿನ್ನೆಲೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಕೆಪಿಎಸ್‌ಸಿ ನೊಂದ ಅಭ್ಯರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಮಂಗಳವಾರ ಬೆಂಗಳೂರಿನ ಕೆಪಿಎಸ್‌ಸಿ ಕಚೇರಿ ಮುಂದೆ ನೊಂದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರು. ಅಭ್ಯರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿಗೆ ಮಾತು ಬೆಳೆಯಿತು. ಈ ವೇಳೆ ನೂಕು ನುಗ್ಗಲು ಉಂಟಾಗಿ ನಂತರ ಲಾಠಿಪ್ರಹಾರವು ನಡೆಯಿತು ಎಂದು ತಿಳಿದು ಬಂದಿದೆ.
ಅಭ್ಯರ್ಥಿಗಳು ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಬರೆದು ವರುಷ ಕಳೆದರೂ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಬೇಸತ್ತಿದ್ದಾರೆ. ಈ ಬಗ್ಗೆ ಮನವಿ ಮಾಡಿದರು ಸರ್ಕಾರದಿಂದ ಯಾವ ಸ್ಪಂದನೆ ದೊರೆತಿಲ್ಲ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ವಿಚಾರವಾಗಿ ಆಕ್ರೋಶಗೊಂಡಿದ್ದು, ಅನಿವಾರ್ಯ ಕಾರಣಗಳಿಂದ ಸುಮಾರು 200ಕ್ಕೂ ಹೆಚ್ಚು ಮಂದಿ ಹೋರಾಟದ ಹಾದಿ ತುಳಿದಿದ್ದಾರೆ.
ರಾಜ್ಯ ಸರ್ಕಾರದ ಮೂರು ಸಾವಿರ ಹುದ್ದೆಗಳಿಗೆ ನಡೆದಿದ್ದ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳು, ದ್ವಿತೀಯ ದರ್ಜೆಯ ಸಹಾಯಕ ಹುದ್ದೆ (ಎಸ್‌ಡಿಎ), ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಬ್ಲ್ಯೂಡಿ), ಕಿರಿಯ ಸಹಾಯಕ (ಜೆಇ), ಎಇ ಗ್ರೂಪ್ ಸಿ, ಎಸಿಎಫ್ ಸೇರಿದಂತೆ ವಿವಿಧ ಹಲವು ಹುದ್ದೆಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆದು ಸುಮಾರು 17ತಿಂಗಳಾದರೂ ಆಯಾ ಮಂಡಳಿ, ಪರೀಕ್ಷಾ ಪ್ರಾಧಿಕಾರಗಳು ಫಲಿತಾಂಶ ಪ್ರಕಟಿಸುವ ಮನಸ್ಸು ಮಾಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ನೆರೆ ರಾಜ್ಯಗಳಲ್ಲಿ ವಯಸ್ಸಿನ ಸಡಿಲಿಕೆ ಇದೆ
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತ ನೊಂದ ಅಭ್ಯರ್ಥಿಗಳು, ನರೆ ರಾಜ್ಯಗಳಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸಿ, ಸೂಕ್ತ ಸಮಯಕ್ಕೆ ಫಲಿತಾಂಶ ಪ್ರಕಟಿಸುತ್ತಾರೆ. ಅಲ್ಲಿ ಒಂದು ವೇಳೆ ಫಲಿತಾಂಶ ಪ್ರಕಟ ಮಾಡುವುದು ತಡವಾದರೆ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆಯನ್ನು ಪ್ರಕಟಿಸುತ್ತಾರೆ. ಆದರೆ ಕೆಪಿಸಿಎಸ್(ಕರ್ನಾಟಕ ಲೋಕಸೇವಾ ಆಯೋಗ) ಯಲ್ಲಿ ಹತ್ತು ವರ್ಷದಲ್ಲಿ ನಾಲ್ಕು ನೇಮಕಾತಿ ಆಗಿದೆ. ಆದರೆ ಅದರಲ್ಲೂ ಸಾಕಷ್ಟು ಸಮಸ್ಯೆ, ಲೋಪದೋಷಗಳು ಇವೆ ಎಂದು ತಾವು 2021ರಲ್ಲಿ ಪರೀಕ್ಷೆ ಬರೆದಿದ್ದರ ಬಗ್ಗೆ ಅವರು ವಿವರಿಸಿದರು.

ಅಧಿಸೂಚನೆ ಬಾರದ್ದಕ್ಕೆ ಆಕ್ರೋಶ
2021ರ ಅಕ್ಟೋಬರ್ ನಲ್ಲಿ ಎಸ್‌ಡಿಎ ನೇಮಕಾತಿ, 2021ರ ಡಿಸೆಂಬರ್‌ನಲ್ಲಿ ಪಿಡಬ್ಲ್ಯೂ ಡಿ, ಜೆ.ಇ ಮತ್ತು ಎ.ಇ ಹುದ್ದೆಗಳ ನೇಮಕಾತಿಗೆಂದು ಪರೀಕ್ಷೆ ನಡೆದು ಅದರ ಫಲಿತಾಂಶ ಬಂದಿದ್ದರೂ ಸಹ ಹಲವು ಹುದ್ದೆಗಳ ಭರ್ತಿಗೆ ಅಧಿಸೂಚನೆಯೇ ಇನ್ನು ಬಂದಿಲ್ಲ.
ಆರ್ಥಿಕವಾಗಿ ಹಿಂದುಳಿದ ಅನೇಕ ಅಭ್ಯರ್ಥಿಗಳು ಸರ್ಕಾರಿ ಹುದ್ದೆಗಳಿಗಾಗಿ ವರ್ಷಾನುಗಟ್ಟಲೇ ಕಷ್ಟಪಟ್ಟು ಪರೀಕ್ಷೆ ಎದುರಿಸಿದ್ದಾರೆ. ವಯಸ್ಸು ಮೀರುತ್ತಿದೆ. ಸರ್ಕಾರ ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡುವ ಕೆಲಸ ಮಾಡಬೇಕು. ತುರ್ತು ಅಗತ್ಯತೆ ಮೇರೆಗೆ ನೇರವಾಗಿಯೂ ಸಹ ನೇಮಕಾತಿ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಸರ್ಕಾರ ಅದ್ಯಾವುದರ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಲೋಕ ಸೇವೆ ಆಯೋಗದ (ಯುಪಿಎಸ್‌ಸಿ) ಮಾದರಿಯಲ್ಲಿ ಸಮಯ ನಿಗದಿ ಮಾಡಿ 60ದಿನದಲ್ಲಿ ಫಲಿತಾಂಶ ಪ್ರಕಟಗೊಳಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಬಳಿಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. ಇದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.

ಪ್ರತಿಭಟನೆಗೆ ಅವಕಾಶ ನಿರಾಕರಣೆ
ಮಂಗಳವಾರ ಬೆಳಬೆಳಗ್ಗೆಯೇ ಉದ್ಯೋಗ ಸೌಧದ ಮುಂದೆ ಜಮಾಯಿಸಿದ ಕೆಪಿಎಸ್‌ಸಿ ನೊಂದ ಅಭ್ಯರ್ಥಿಗಳು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟಿಸಲು ಮುಂದಾದರು. ಈ ಸಂದರ್ಭದಲ್ಲಿ ಉದ್ಯೋಗ ಸೌಧದ ಮುಂದೆ ಪ್ರತಿಭಟನೆ ನಡೆಸದಂತೆ ಪೊಲೀಸರು ಸೂಚಿಸಿದರು. ಪ್ರತಿಭಟನೆ ಅನುಮತಿ ನಿರಾಕರಿಸಿ ಇಲ್ಲಿ ನೂರಾರು ಮಂದಿ ಸೇರಿ ಪ್ರತಿಭಟಿಸುವಂತಿಲ್ಲ ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಅಭ್ಯರ್ಥಿಗಳು ಫಲಿತಾಂಶ ಪ್ರಕಟದ ನಿಗದಿತ ದಿನಾಂಕ ಕುರಿತು ಲಿಖಿತ ರೂಪದಲ್ಲಿ ಸ್ಪಂದನೆ ದೊರೆಯುವವರೆಗೂ ವಾಪಸ್ ಹೋಗಲ್ಲ ಎಂದರು. ಭಿತ್ತಿ ಪತ್ರ ಹಿಡಿದು ಧಿಕ್ಕಾರ ಘೋಷಣೆ ಮೊಳಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಕೆಪಿಎಸ್‌ಸಿಯ ಕಾರ್ಯದರ್ಶಿಗಳು ಸ್ಥಳಕ್ಕಾಗಮಿಸಿ ಭರವಸೆ ನೀಡಿದರು ಎನ್ನಲಾಗಿದೆ.
ಅಧಿಕಾರಿಗಳ ಭರವಸೆ ಒಪ್ಪದ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ವಾಗ್ವಾದ ಉಂಟಾಯಿತು. ಆಕ್ರೋಶಗೊಂಡಿದ್ದ ಅಭ್ಯರ್ಥಿಗಳು ಜೋರು ಧ್ವನಿಯಲ್ಲಿ ಕೂಗಾಡಿದರು. ಬೇಡಿಕೆ ಈಡೇರಿಸುವಂತೆ ಅಬ್ಬರಿಸಿದರು. ಉದ್ಯೋಗ ಸೌಧ ಮುತ್ತಿಗೆಗೆ ಮುಂದಾದರು. ತಕ್ಷಣವೇ ಪೋಲಿಸರು ತಡೆದು ನಿಲ್ಲಿಸಿದರು. ಈ ವೇಳೆ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಗದ್ದಲದಲ್ಲಿ ಮಹಿಳಾ ಅಭ್ಯರ್ಥಿಗಳು ಸಿಲುಕಿಕೊಂಡಿದ್ದರು, ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು.

ಸಬೂಬು ಹೇಳಿದ ಅಧಿಕಾರಿ
ಸ್ಥಳದಲ್ಲಿ ಪ್ರತಿಭಟನಾ ಕಾವು ಹೆಚ್ಚಾಗಿದ್ದನ್ನು ಕಂಡು ಕೆಪಿಎಸ್‌ಸಿ ಕಾರ್ಯದರ್ಶಿಗಳು ಅಭ್ಯರ್ಥಿಗಳನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಪ್ರತಿ ಪರೀಕ್ಷೆ ವಿಚಾರಗಳು ಪರಿಶೀಲನೆಗೆ ಒಳಪಡಿಸಲಾಗಿದೆ. ಅಲ್ಲದೇ ಸಿಬ್ಬಂದಿಯ ಆರೋಗ್ಯ ಸರಿಯಿಲ್ಲ. ಅವರು ಚೇತರಿಸಿಕೊಂಡು ಬಂದ ಕೂಡಲೇ ಫಲಿತಾಂಶ ದ ಲಿಸ್ಟ್ ಹೊರಡಿಸುತ್ತೇವೆ. ಸಿಬ್ಬಂದಿ ಕೊರತೆಯಿಂದಾಗಿ ಲಿಸ್ಟ್ ಬಿಡುವುದು ತಡವಾಗಿದೆ. ಇನ್ನೊಂದು ವಾರದಲ್ಲಿ ಗೆಜೆಟೆಡ್ ಪಟ್ಟಿ ಪ್ರಕಟಗೊಳಿಸಲಾಗುವುದು ಎಂದು ಸಬೂಬು ನೀಡಿದರು.
ಭರವಸೆಯಂತೆ ಮುಂದಿನ ವಾರವೂ ಗೆಜೆಟೆಡ್ ಪಟ್ಟಿ ಹೊರ ಬರದಿದ್ದರೆ ಅಭ್ಯರ್ಥಿಗಳ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications