Bengaluru: ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಉಪನಗರ ರೈಲು ಯೋಜನೆ- ಕಾರ್ಯಾರಂಭ ಯಾವಾಗ? ಎಷ್ಟು ನಿಲ್ದಾಣ? ಅಂಕಿಅಂಶ, ವರದಿ, ವಿವರ
ಬೆಂಗಳೂರು, ಆಗಸ್ಟ್ 12: ಅಕ್ಟೋಬರ್ 2025 ರ ವೇಳೆಗೆ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಮೊದಲ ಕಾರಿಡಾರ್ ಕಾರ್ಯನಿರ್ವಹಿಸಲಿದೆ. ಈ ಕಾರಿಡಾರ್ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದ ನಡುವೆ ರೈಲು ಸಂಪರ್ಕ ಕಲ್ಪಿಸಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
2020 ರಲ್ಲಿ ಬಿಎಸ್‌ಆರ್‌ಪಿ ಅನ್ನು ಅನುಮೋದಿಸುವಾಗ, ಅಧಿಕಾರಿಗಳು 2026 ರ ವೇಳೆಗೆ 148 ಕಿಮೀ ರೈಲು ಮಾರ್ಗ ಕಾರ್ಯನಿರ್ವಹಿಸಲಿದೆ ಎಂದು ಘೋಷಿಸಿದ್ದರು.
ಜೂನ್ 2022 ರಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ ನಂತರ, 40 ತಿಂಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಬೆಂಗಳೂರಿಗರಿಗೆ ಭರವಸೆ ನೀಡಿದ್ದರು.

ಶುಕ್ರವಾರ ಹಲವು ಸ್ಥಳಗಳಲ್ಲಿ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಸಚಿವ ಎಂಬಿ ಪಾಟೀಲ್ ನಡೆಸಿದ್ದಾರೆ. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಂಪೂರ್ಣ ನೆಟ್‌ವರ್ಕ್ ಅನ್ನು ಕಾರ್ಯಗತಗೊಳಿಸಲು 2026 ಗಡುವನ್ನು ನೀಡಲಾಗಿದೆ. ಅನಿರೀಕ್ಷಿತ ಕಾರಣಗಳಿಂದ ಸ್ವಲ್ಪ ವಿಳಂಬವಾದರೂ ಸಹ, 2028 ರ ಹೊತ್ತಿಗೆ ಇದು ಸಂಪೂರ್ಣವಾಗಿ ಸಿದ್ಧವಾಗಲಿದೆ' ಎಂದು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ, ರೈಲ್ವೆಯೊಂದಿಗಿನ ಸಮಸ್ಯೆಗಳ ಪರಿಹಾರ, ಗುತ್ತಿಗೆ ನೀಡುವಲ್ಲಿ ವಿಳಂಬ ಮತ್ತು ಭೂಮಿ ವರ್ಗಾವಣೆಯಂತಹ ವಿವಿಧ ಅಂಶಗಳಿಂದ ಯೋಜನೆಯು ಹೆಚ್ಚಿನ ವಿಳಂಬವನ್ನು ಕಂಡಿದೆ.
ಪ್ರಸ್ತುತ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಸಂಸ್ಥೆಯು ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ (ಕಾರಿಡಾರ್ 2) ವರೆಗಿನ ಸಂಪಿಗೆ ಮಾರ್ಗದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಗುತ್ತಿಗೆಯನ್ನು ಆಗಸ್ಟ್ 26, 2022 ರಂದು ನೀಡಲಾಯಿತು. ಕೆಲಸವು ಉತ್ತಮವಾಗಿ ಪ್ರಗತಿಯಲ್ಲಿದೆ ಎಂದು ಏಜೆನ್ಸಿ ಹೇಳಿಕೊಂಡಿದೆ.

26 ತಿಂಗಳಲ್ಲಿ 25 ಕಿಮೀ ಮಾರ್ಗ ಕಾರ್ಯಾರಂಭ ಮಾಡಲಿದ್ದು, ಶೇ10 ರಿಂದ 15ರಷ್ಟು ಕಾಮಗಾರಿ ಮುಗಿದಿದೆ ಎಂದು ಸಚಿವರು ತಿಳಿಸಿದ್ದಾರೆ.
'ಇದು ತುಂಬಾ ಸಂಕೀರ್ಣವಾದ ಯೋಜನೆಯಾಗಿದೆ. ಹೊಸ ನೆಟ್‌ವರ್ಕ್ ಅನ್ನು ಈಗಿರುವ ಲೈವ್ ಟ್ರ್ಯಾಕ್ ಪಕ್ಕದಲ್ಲಿ ನಿರ್ಮಿಸಲಾಗುತ್ತಿದೆ. ಯೋಜನೆಯನ್ನು ಕಾರ್ಯಗತಗೊಳಿಸುವಾಗ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು. ನಗರದಲ್ಲಿ ರಸ್ತೆ ನಡುವೆ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಆದರೆ ಸಂಚಾರಕ್ಕೆ ಕಷ್ಟವಾಗಿರುವ ಪ್ರದೇಶಗಳಲ್ಲಿ ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ' ಎಂದು ಪಾಟೀಲ್ ಹೇಳಿದರು.
ಸೆಪ್ಟೆಂಬರ್ ವೇಳೆಗೆ ಏರ್‌ಪೋರ್ಟ್ ಲೈನ್ ಟೆಂಡರ್
ಇನ್ನುಳಿದ ಕಾರಿಡಾರ್‌ಗಳ ಸ್ಥಿತಿಗತಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮುಂದಿನ ಹಂತದಲ್ಲಿ ಕಾರಿಡಾರ್ 4 ಅನ್ನು (ಹೀಲಲಿಗೆಯಿಂದ ರಾಜನಕುಂಟೆ) ಜಾರಿಗೆ ತರಲಾಗುವುದು. ಜುಲೈ 4, 2023 ರಂದು ಸಿವಿಲ್ ಕಾಮಗಾರಿಗೆ ಟೆಂಡರ್ ತೆರೆಯಲಾಗಿದೆ. ಬಿಡ್‌ಗಳು ಮೌಲ್ಯಮಾಪನ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ನಗರವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಕಾರಿಡಾರ್ 1 ರ ಕುರಿತು ಮಾತನಾಡಿದ ಸಚಿವರು, 'ಸೆಪ್ಟೆಂಬರ್ ವೇಳೆಗೆ ಟೆಂಡರ್ ಅನ್ನು ಕರೆಯಲಾಗುತ್ತದೆ' ಎಂದು ಹೇಳಿದರು.
'ಬಿಎಂಆರ್‌ಸಿಎಲ್ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗವನ್ನು ನಿರ್ಮಿಸುತ್ತಿದೆ. ನಂತರದ ಹಂತದಲ್ಲಿ ಉಪನಗರ ರೈಲು ವಿಮಾನ ನಿಲ್ದಾಣ ಕಾರಿಡಾರ್ ಅನ್ನು ಕಾರ್ಯಗತಗೊಳಿಸಲು ಮೊದಲೇ ನಿರ್ಧರಿಸಲಾಗಿತ್ತು. ಜೋಡಣೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಟೆಂಡರ್ ಅನ್ನು ಕರೆಯಲಾಗುತ್ತದೆ' ಎಂದು ತಿಳಿಸಿದರು.
ನೆರೆಯ ಜಿಲ್ಲೆಗಳ ನಗರಗಳು ಮತ್ತು ಪಟ್ಟಣಗಳಿಗೆ ರೈಲು ನೆಟ್‌ವರ್ಕ್ ವಿಸ್ತರಿಸುವ ಕುರಿತು ಮಾತನಾಡಿದ ಅವರು ಕಾರ್ಯಸಾಧ್ಯತೆಯ ಅಧ್ಯಯನ ಸಿದ್ಧವಾದ ನಂತರ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ ಎಂದು ಹೇಳಿದರು.
'ಮೆಟ್ರೋ ಜಾಲವನ್ನು ನಿರ್ಮಿಸುವುದಕ್ಕಿಂತ ಉಪನಗರ ರೈಲು ಕಾರಿಡಾರ್‌ಗಳನ್ನು ನಿರ್ಮಿಸುವುದು ಅಗ್ಗವಾಗಿದೆ. ನಗರ ವ್ಯಾಪ್ತಿಯಲ್ಲಿ 1 ಕಿ.ಮೀ ಉದ್ದದ ಉಪನಗರ ರೈಲು ಜಾಲ ನಿರ್ಮಿಸಲು 100 ಕೋಟಿ ರೂ. ಬೇಕಿದೆ. ಮೆಟ್ರೋಗೆ 200 ಕೋಟಿ ರೂ. ಬೇಕಾಗುತ್ತದೆ. ನಗರ ವ್ಯಾಪ್ತಿಯನ್ನು ಮೀರಿ, ಉಪನಗರ ರೈಲು ಜಾಲವನ್ನು ನಿರ್ಮಿಸಲು ಪ್ರತಿ ಕಿ.ಮೀ.ಗೆ 30ರಿಂದ 40 ಕೋಟಿ ರೂ. ಬೇಕು. ಕೆ-ರೈಡ್ ನೆಟ್‌ವರ್ಕ್ ಅನ್ನು ಮೈಸೂರು, ಹೊಸೂರು, ತುಮಕೂರು ಮತ್ತು ಇತರ ಸ್ಥಳಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ' ಎಂದು ಎಂಬಿ ಪಾಟೀಲ್ ಹೇಳಿದರು.












Click it and Unblock the Notifications