ಉಪ ಚುನಾವಣೆ; ಬೆಂಗಳೂರು ಕ್ಷೇತ್ರದ ಅಂಕಿ-ಸಂಖ್ಯೆಗಳ ಲೆಕ್ಕ
ಬೆಂಗಳೂರು, ಡಿಸೆಂಬರ್ 02: ಬೆಂಗಳೂರು ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಪ ಚುನಾವಣೆ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿಸೆಂಬರ್ 5ರಂದು ಮತದಾನ ನಡೆಯುವ ದಿನ ಭದ್ರತೆಗಾಗಿ 2896 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕೆ. ಆರ್. ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಡಿಸೆಂಬರ್ 5ರ ಗುರುವಾರ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಡಿಸೆಂಬರ್ 3 ರಿಂದ 5ರ ಸಂಜೆ 6 ಗಂಟೆ ತನಕ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಡಿಸೆಂಬರ್ 3 ರಿಂದ 6ರ ತನಕ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಒಟ್ಟು 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಹೆಚ್ಚು ಎಂದರೆ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.

ಭದ್ರತೆಗಾಗಿ 2896 ಸಿಬ್ಬಂದಿ ನೇಮಕ
ಬೆಂಗಳೂರಿನ 4 ಕ್ಷೇತ್ರದಲ್ಲಿ ಭದ್ರತೆಗಾಗಿ 2896 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವರಲ್ಲಿ ಡಿಸಿಪಿ 7, ಎಸಿಪಿ 14, ಪಿಐ 30, ಪಿಎಸ್‌ಐ 68, ಎಎಸ್‌ಐ 160, ಎಚ್‌ಸಿ/ಪಿಸಿ 1666. ಹೋಂ ಗಾರ್ಡ್ 951. ಚುನಾವಣಾ ಭದ್ರತೆಗಾಗಿ ಆಗಮಿಸಿರುವ ಪಡೆಗಳು ಪಥ ಸಂಚಲನವನ್ನು ಸಹ ನಡೆಸಿವೆ.

ಯಾವ ಕ್ಷೇತ್ರ, ಎಲ್ಲಿ ಕೌಟಿಂಗ್?
* ಶಿವಾಜಿನಗರ ಕ್ಷೇತ್ರ : ಮೌಂಟ್ ಕಾರ್ಮೆಲ್ ಪಿಯು ಕಾಲೇಜು (ಮಹಿಳಾ). ವಸಂತನಗರ
* ಕೆ. ಆರ್. ಪುರ : ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್, ಅಶೋಕ ನಗರ
* ಮಹಾಲಕ್ಷ್ಮೀ ಲೇಔಟ್ : ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್, ಅಶೋಕ ನಗರ
* ಯಶವಂತಪುರ : ಆರ್. ವಿ. ಕಾಲೇಜ್ ಆಫ್ ಇಂಜಿನಿಯರಿಂಗ್. ಮೈಸೂರು ರಸ್ತೆ

1064 ಮತಗಟ್ಟೆಗಳು
ಡಿಸೆಂಬರ್ 5ರಂದು ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. 238 ಸೂಕ್ಷ್ಮ, 826 ಸಾಮಾನ್ಯ ಸೇರಿ ಒಟ್ಟು 1064 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.

ಸಿಕ್ಕ ಹಣ ಎಷ್ಟು?
ನಗರದ 4 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಅಬಕಾರಿ ಕಾಯ್ದೆಯಡಿ 11 ಕೇಸುಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಇದುವರೆಗೂ 15,75,335 ರೂ. ಹಣವನ್ನು ಚುನಾವಣಾ ಅಧಿಕಾರಿಗಳು, ಪೊಲೀಸರು 17,500 ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications