ಕನಕಪುರ ರಸ್ತೆ: ಜಲಮಂಡಳಿಯ ತೆರೆದ ಪೈಪ್‌ಲೈನ್ ಚೇಂಬರ್‌ಗೆ ಬಿದ್ದು ವಿದ್ಯಾರ್ಥಿ ಸಾವು
ಬೆಂಗಳೂರು: ನಗರದ ಕನಕಪುರ ರಸ್ತೆಯಲ್ಲಿ ಜಲಮಂಡಳಿಯ ನಿರ್ಲಕ್ಷ್ಯದ ಪರಿಣಾಮವಾಗಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಪೈಪ್‌ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ತೆರೆದು ಬಿಟ್ಟಿದ್ದ ಕಾಂಕ್ರೀಟ್ ಚೇಂಬರ್‌ಗೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಮೃತ ಬಾಲಕನನ್ನು ಪ್ರೀತಮ್ ಎಂದು ಗುರುತಿಸಲಾಗಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಮಗ ಮನೆಗೆ ಮರಳದ ಕಾರಣ ಕುಟುಂಬಸ್ಥರು ಹಾಗೂ ಸ್ಥಳೀಯರು ಆತಂಕದಿಂದ ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಪೈಪ್‌ಲೈನ್ ಕಾಮಗಾರಿಯ ಸ್ಥಳದ ಬಳಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದಾಗ, ಚೇಂಬರ್ ಒಳಗೆ ಪ್ರೀತಮ್‌ನ ಶವ ತೇಲುತ್ತಿರುವುದು ಪತ್ತೆಯಾಗಿದೆ. ಈ ದೃಶ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಚೇಂಬರ್‌ಗೆ ಮುಚ್ಚಳ ಹಾಕಿರಲಿಲ್ಲ
ಜಲಮಂಡಳಿಯ ಪೈಪ್‌ಲೈನ್ ಕಾಮಗಾರಿ ಹಲವು ದಿನಗಳಿಂದ ವಿಳಂಬವಾಗಿದ್ದು, ಕಾಮಗಾರಿಯ ಭಾಗವಾಗಿ ನಿರ್ಮಿಸಲಾದ ಚೇಂಬರ್‌ಗೆ ಮುಚ್ಚಳವೇ ಹಾಕಲಾಗಿರಲಿಲ್ಲ. ಅಲ್ಲದೆ ಯಾವುದೇ ಎಚ್ಚರಿಕಾ ಫಲಕಗಳು, ತಡೆಗೋಡೆಗಳು ಅಥವಾ ಸುರಕ್ಷತಾ ಕ್ರಮಗಳಿಲ್ಲದಿರುವುದರಿಂದ ಈ ಪ್ರದೇಶ ಸಾರ್ವಜನಿಕರಿಗೆ ಅಪಾಯದ ತಾಣವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರೀತಮ್ ಈ ಮಾರ್ಗದಲ್ಲಿ ಹೋಗುವ ವೇಳೆ ಅನಿರೀಕ್ಷಿತವಾಗಿ ಕಾಲು ಜಾರಿ ಚೇಂಬರ್ ಒಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಅಥವಾ ಕಡಿಮೆ ಬೆಳಕಿನ ಸಮಯದಲ್ಲಿ ಈ ಚೇಂಬರ್ ಕಾಣಿಸದಿರುವುದೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ದುರಂತದ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಮೃತ ಬಾಲಕನ ಕುಟುಂಬಸ್ಥರು ಜಲಮಂಡಳಿ ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯವೇ ನಮ್ಮ ಮಗನ ಸಾವಿಗೆ ಕಾರಣ" ಎಂದು ಕುಟುಂಬಸ್ಥರು ಹಿಡಿಶಾಪ ಹಾಕಿದ್ದಾರೆ. ಅಲ್ಲದೆ ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ನಿವಾಸಿಗಳು, ಜಲಮಂಡಳಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುರಕ್ಷಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಕಾಮಗಾರಿಗೆ ಹೊಣೆಗಾರರಾಗಿದ್ದ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಕಾಮಗಾರಿ ನಿರ್ಲಕ್ಷ್ಯ ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಘಟನೆಯಿಂದಾಗಿ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಸುರಕ್ಷತೆ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಮಕ್ಕಳು ಹಾಗೂ ಸಾರ್ವಜನಿಕರ ಜೀವ ರಕ್ಷಿಸಲು ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳು ಅಗತ್ಯ ಎಂಬ ಬೇಡಿಕೆಯನ್ನು ಮುನ್ನೆಲೆಗೆ ತಂದಿದೆ.












Click it and Unblock the Notifications