ಚುನಾವಣೆ ಮೇಲೆ ಕಣ್ಣು, ನೀರಿನ ದರ ಹೆಚ್ಚಿಸಿದ ಸಿಎಂ

ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಂಜೆ ಜಲಮಂಡಳಿ ಅಧಿಕಾರಿಗಳು, ಬೆಂಗಳೂರಿನ ಶಾಸಕರು ಮತ್ತು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ನೀರಿನ ದರ ಪರಿಷ್ಕರಣೆ ನಿರ್ಧಾರವನ್ನು ಜಲಮಂಡಳಿ ಅಧಿಕಾರಿಗಳಿಗೆ ಸಿಎಂ ವಹಿಸಿದ್ದಾರೆ.
ಸಭೆಯಲ್ಲಿ ಜಲಮಂಡಳಿ ಅಧಿಕಾರಿಗಳಿಗೆ ನಗರದಲ್ಲಿ ನೀರಿನ ಸೋರಿಕೆ ತಡೆಗಟ್ಟಿ, ಅನಧಿಕೃತ ನೀರಿನ ಸಂಪರ್ಕಗಳಿಗೆ ಕಡಿವಾಣ ಹಾಕಿ, ಒಳಚಂರಂಡಿ ನಿರ್ವಹಣೆಯನ್ನು ಯಂತ್ರದ ಸಹಾಯದಿಂದಲೇ ಮಾಡಿ ಎಂದು ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಜಲಮಂಡಳಿಗೆ ಅಗತ್ಯವಿರುವ ಸಿಬ್ಭಂದಿಯನ್ನು 6 ತಿಂಗಳವೊಳಗೆ ನೇಮಕಾತಿ ಮಾಡಿಕೊಳ್ಳಲು ಸಿಎಂ ಅನುಮತಿ ನೀಡಿದ್ದಾರೆ.
ಸಭೆಯಲ್ಲಿ ಜಲಮಂಡಳಿ ಸಲ್ಲಿಸಿರುವ ನೀರಿದ ದರ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ನೀರಿನ ದರ ಪರಿಷ್ಕರಣೆ ಮಾಡಿ ಸಾರ್ವಜನಿಕರ ವಿರೋಧ ಎದುರಿಸುವುದು ಸರಿಯಲ್ಲ ಎಂದು ತೀರ್ಮಾನಿಸಿರುವ ಸಿದ್ದರಾಮಯ್ಯ, ಅದರ ಹೊಣೆಯನ್ನು ಜಲಮಂಡಳಿಗೆ ನೀಡಿದ್ದಾರೆ.
2006ರಿಂದ ಬೆಂಗಳೂರಿನಲ್ಲಿ ನೀರಿನ ದರದಲ್ಲಿ ಹೆಚ್ಚಳ ಮಾಡಿಲ್ಲ ಆದ್ದರಿಂದ ನೀರಿದ ದರ ಪರಿಷ್ಕರಿಸಿ ಶೇ 10ರಷ್ಟು ಹೆಚ್ಚಳ ಮಾಡಬೇಕೆಂದು ಜಲಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ದರ ಪರಿಷ್ಕರಣೆ ಬಗ್ಗೆ ನೀವು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅದನ್ನು ಜಲಮಂಡಳಿಗೆ ವಾಪಸ್ ಕಳಿಸಿದ್ದಾರೆ. ಜಲ ಮಂಡಳಿ ಅಧಿಕಾರಿಗಳ ಪ್ರಕಾರ ಮುಂದಿನ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಅಂತಿಮ ಆದೇಶ ಹೊರಬೀಳಲಿದೆ.
ನೀರಿನ ಸಂಪರ್ಕಕ್ಕೆ ಕನಿಷ್ಠ ಶುಲ್ಕವನ್ನು 83 ರೂ.ಗಳಿಂದ 250 ರೂ.ಗಳಿಗೆ ಹೆಚ್ಚಳ ಮಾಡುವಂತೆ ಜಲಮಂಡಳಿ ಪ್ರಸ್ತಾವನೆಯಲ್ಲಿ ಮನವಿ ಮಾಡಿತ್ತು. ಸದ್ಯ ಸಿದ್ದರಾಮಯ್ಯ ದರ ಪರಿಷ್ಕರಣೆ ಜವಾಬ್ದಾರಿಯನ್ನು ಮಂಡಳಿಗೆ ನೀಡಿರುವುದರಿಂದ ಎಷ್ಟು ದರ ಹೆಚ್ಚಳವಾಗುತ್ತದೆ ಎಂದು ಕಾದು ನೋಡಬೇಕು. (ನೀರಿನ ದರ ಶೇ 10 ರಷ್ಟು ಹೆಚ್ಚಳ)












Click it and Unblock the Notifications