ಖಾಸಗಿ ಮ್ಯಾನ್‌ಹೋಲ್, ಎಸ್‌ಟಿಪಿ ಕ್ಲೀನಿಂಗ್ ಏಜೆನ್ಸಿಗಳ ನೋಂದಣಿ ಕಡ್ಡಾಯ
ಬೆಂಗಳೂರು: ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳು, ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಹಾಗೂ ಖಾಸಗಿ ಬಡಾವಣೆಗಳ ಮಾಲೀಕರಿಗೆ ಬೆಂಗಳೂರು ಜಲಮಂಡಳಿ (BWSSB) ಕಟ್ಟುನಿಟ್ಟಿನ ಎಚ್ಚರಿಕೆಯೊಂದನ್ನು ರವಾನಿಸಿದೆ. ಖಾಸಗಿ ಮ್ಯಾನ್‌ಹೋಲ್ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (STP - Sewage Treatment Plant) ಸ್ವಚ್ಛಗೊಳಿಸುವ ವಿಚಾರದಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸುವ ಖಾಸಗಿ ಏಜೆನ್ಸಿಗಳು ಮತ್ತು ವಾಹನಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ.
ಸಫಾಯಿ ಕರ್ಮಚಾರಿಗಳ ಸುರಕ್ಷತೆ ಮತ್ತು ಮ್ಯಾನ್‌ಹೋಲ್ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ 1964ರ ಸೆಕ್ಷನ್ 84 ಮತ್ತು 88ರ ಅಡಿಯಲ್ಲಿ ಈ ಹಿಂದೆ ನೀಡಲಾಗಿದ್ದ ಅಧಿಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಲಮಂಡಳಿ ಅಧ್ಯಕ್ಷರು ಎಲ್ಲಾ ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಮಾರ್ಚ್ 7ರೊಳಗೆ ನೋಂದಣಿ ಕಡ್ಡಾಯ
ನಗರದಾದ್ಯಂತ ಖಾಸಗಿ ಒಳಚರಂಡಿ ವ್ಯವಸ್ಥೆಯ ಮ್ಯಾನ್‌ಹೋಲ್ ಹಾಗೂ ಎಸ್‌ಟಿಪಿ ಘಟಕಗಳನ್ನು ಸ್ವಚ್ಛಗೊಳಿಸುವ ಹಲವಾರು ಖಾಸಗಿ ಏಜೆನ್ಸಿಗಳು ಕಾರ್ಯಾಚರಿಸುತ್ತಿವೆ. ಈ ವಾಹನಗಳ ಮಾಲೀಕರು ಮತ್ತು ಏಜೆನ್ಸಿಗಳನ್ನು ಗುರುತಿಸಿ, ಮುಂಬರುವ ಮಾರ್ಚ್ 07, 2026 ರೊಳಗೆ ಕಡ್ಡಾಯವಾಗಿ ವಿಭಾಗ ಮಟ್ಟದಲ್ಲಿ ನೋಂದಾಯಿಸಿಕೊಳ್ಳಲು ಜಲಮಂಡಳಿ ಗಡುವು ನೀಡಿದೆ. ನಿಗದಿತ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳದ ವಾಹನಗಳು ಅಥವಾ ಏಜೆನ್ಸಿಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ ಹಾಗೂ ಅಂತಹವರ ಸೇವೆಯನ್ನು ಬಳಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹೊಸ ನಿಯಮಾವಳಿಯ ಪ್ರಕಾರ, ವಾಣಿಜ್ಯ ಕಟ್ಟಡಗಳು, ವಸತಿ ಸಮುಚ್ಚಯಗಳು ಮತ್ತು ಖಾಸಗಿ ಬಡಾವಣೆಗಳಲ್ಲಿರುವ ಎಸ್‌ಟಿಪಿ ಹಾಗೂ ಮ್ಯಾನ್‌ಹೋಲ್‌ಗಳ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಇನ್ನು ಮುಂದೆ ಕಡ್ಡಾಯವಾಗಿ ಜಲಮಂಡಳಿಯಲ್ಲಿ ನೋಂದಾಯಿತವಾಗಿರುವ (Registered) ಅಧಿಕೃತ ಏಜೆನ್ಸಿಗಳ ಮುಖಾಂತರವೇ ಮಾಡಿಸಬೇಕು.
ಒಂದು ವೇಳೆ, ಜಲಮಂಡಳಿಯಲ್ಲಿ ನೋಂದಾಯಿಸಲ್ಪಡದ ಅಥವಾ ಅನಧಿಕೃತ ವ್ಯಕ್ತಿಗಳ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡಾಗ ವಿಷಾನಿಲ ಸೇವನೆ ಅಥವಾ ಬೇರೆ ಕಾರಣದಿಂದ ದುರಂತಗಳು ಸಂಭವಿಸಿದರೆ, ಅದಕ್ಕೆ ಸಂಬಂಧಪಟ್ಟ ಆಯಾ ವಾಣಿಜ್ಯ ಕಟ್ಟಡ, ವಸತಿ ಸಮುಚ್ಚಯ, ಖಾಸಗಿ ಬಡಾವಣೆಗಳ ಮಾಲೀಕರು ಅಥವಾ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ (RWA) ಪದಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಖಡಕ್ ಎಚ್ಚರಿಕೆ ನೀಡಿದೆ. ಅಂತಹ ಸಂದರ್ಭಗಳಲ್ಲಿ ಮಾಲೀಕರ ವಿರುದ್ಧವೇ ನೇರ ಕಾನೂನು ಕ್ರಮ ಜರುಗಿಸುವ ಸಾಧ್ಯತೆಗಳಿವೆ.
ಈ ಹೊಸ ನಿಯಮಾವಳಿಗಳ ಕುರಿತು ಜಾಗೃತಿ ಮೂಡಿಸಲು, ನಗರದ ಎಲ್ಲ ವಾಣಿಜ್ಯ ಕಟ್ಟಡಗಳು ಮತ್ತು ವಸತಿ ಸಮುಚ್ಚಯಗಳ ಮಾಲೀಕರು ಹಾಗೂ ಅಸೋಸಿಯೇಷನ್‌ಗಳಿಗೆ ಕೂಡಲೇ ಅಧಿಕೃತ ಸೂಚನಾ ಪತ್ರವನ್ನು ನೀಡುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಒಟ್ಟಿನಲ್ಲಿ, ಸಿಲಿಕಾನ್ ಸಿಟಿಯಲ್ಲಿ ಮ್ಯಾನ್‌ಹೋಲ್ ಅವಘಡಗಳಿಗೆ ಶಾಶ್ವತ ಬ್ರೇಕ್ ಹಾಕಲು ಜಲಮಂಡಳಿ ಮುಂದಾಗಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ನಿರ್ವಹಣಾ ಮಂಡಳಿಗಳು ಈ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.












Click it and Unblock the Notifications