Bengaluru: ಪೀಣ್ಯ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರು ಪೂರೈಕೆ, ಕಾವೇರಿ ನೀರು ಉಳಿಸಲು ಹೊಸ ಯೋಜನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 'ಮನೆಗಳಿಗೆ ಕಾವೇರಿ, ಕೈಗಾರಿಕೆಗಳಿಗೆ ಅಲ್ಟ್ರಾ ಪ್ಯೂರ್ ಸಂಸ್ಕರಿಸಿದ ನೀರು" ಧ್ಯೇಯವಾಕ್ಯದೊಂದಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಡೆತಡೆ ಇಲ್ಲದೇ ನೀರು ಪೂರೈಕೆಗೆ ಪ್ಲಾನ್ ಮಾಡಿಕೊಂಡಿದೆ. ನೀರಿನ ಶುದ್ಧತೆ ಕಾಪಾಡಲು 27 ಕಿ.ಮೀ ಉದ್ದದ ಪ್ರತ್ಯೇಕ ಪೈಪ್‌ಲೈನ್ ಜಾಲ ನಿರ್ಮಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
ಅಧಿಕೃತ ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷರು, ಕೈಗಾರಿಕೆಗಳಿಗೆ ನೀರು ಪೂರೈಸುವ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದರು. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಅಲ್ಟ್ರಾ ಪ್ಯೂರ್ ವಾಟರ್ ಸಂಸ್ಕರಿಸಿದ ನೀರನ್ನು ಪೂರೈಸಲು ಬೆಂಗಳೂರು ಜಲಮಂಡಳಿ (BWSSB) ಟೆಂಡರ್ ಕರೆದಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಅಡೆತಡೆಯಿಲ್ಲದೆ ಉತ್ತಮ ಗುಣಮಟ್ಟದ ಸಂಸ್ಕರಿಸಿದ ಅಲ್ಟ್ರಾ ಪ್ಯೂರ್ ನೀರು ಪೂರೈಸಲಾಗುವುದು. ಈ ಸಂಬಂಧ ಯೋಜನೆ ಆರಂಭಿಸಲಿದ್ದೇವೆ. ಸಣ್ಣ ಕೈಗಾರಿಕೆಗಳ ಅಭಿವೃದ್ದಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಡಿಮೆ ದರದಲ್ಲಿ ಉತ್ತಮ ನೀರು ಒದಗಿಸುವುದು ಜಲಮಂಡಳಿ ಗುರಿ ಇಟ್ಟುಕೊಂಡಿದೆ ಎಂದರು.

ಅಲ್ಟ್ರಾ ಪ್ಯೂರ್ ವಾಟರ್ ಸಂಸ್ಕರಿದ ನೀರು
ಈ ಯೋಜನೆಯ ಪ್ರಮುಖ ವಿಶೇಷತೆಯೆಂದರೆ ಪೂರೈಕೆಯಾಗುವ ನೀರಿನ ಗುಣಮಟ್ಟ. ನಾಗಸಂದ್ರ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ (STP) ಪಡೆಯಲಾಗುವ 4 ಎಂಎಲ್‌ಡಿ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸಂಸ್ಕರಿಸಲಾಗುತ್ತದೆ. ಅಲ್ಲದೇ ಈ ತ್ಯಾಜ್ಯ ನೀರನ್ನು ಅಲ್ಟ್ರಾ ಪ್ಯೂರ್ ವಾಟರ್ ಗುಣಮಟ್ಟಕ್ಕೆ ಶುದ್ದೀಕರಿಸಿ ಬಳಿಕ ಪೂರೈಕೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ.
ಈ ಯೋಜನೆಯಿಂದ ಬೆಂಗಳೂರು ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷಾಂತರ ಕಾರ್ಮಿಕರ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಬಳಸುವ (ಫ್ಲಶಿಂಗ್ ಮತ್ತು ಇತರೆ ಸ್ವಚ್ಛತಾ ಕಾರ್ಯಗಳಿಗೆ) ಕುಡಿಯುವ ನೀರನ್ನು ಉಳಿಸಲಿದ್ದೇವೆ. ಉತ್ಪಾದನಾ ಪ್ರಕ್ರಿಯೆ ಹೊರತುಪಡಿಸಿ, ಇತರೆ ಉದ್ದೇಶಗಳಿಗೆ ಈ ಉನ್ನತ ಗುಣಮಟ್ಟದ ಅಲ್ಟ್ರಾ ಪ್ಯೂರ್ ಸಂಸ್ಕರಿಸಿದ ನೀರನ್ನು ಬಳಸುವುದರಿಂದ, ಲಕ್ಷಾಂತರ ಲೀಟರ್ ಶುದ್ಧ ಕಾವೇರಿ ನೀರನ್ನು ಉಳಿಸಬಹುದಾಗಿದೆ. ಅದನ್ನು ಬೆಂಗಳೂರಿನ ಮನೆಗಳಿಗೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಜಲಮಂಡಳಿಯಿಂದ ಟೆಂಡರ್ ಆಹ್ವಾನ
ಸಂಸ್ಕರಿಸಿದ ನೀರು ಕಲುಷಿತಗೊಳ್ಳದಂತೆ ಮತ್ತು ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮಂಡಳಿಯು ಪ್ರತ್ಯೇಕ ಮೂಲ ಸೌಕರ್ಯ ನಿರ್ಮಿಸಲಿದ್ದು, ಯೋಜನೆಗಾಗಿ ಟೆಂಡರ್ ಕರೆಯಾಗಲಿದೆ. ಅದರನ್ವಯ ಈ ಕೆಳಗಿನ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಯೋಜನೆಗೆ 'ಪ್ರತ್ಯೇಕ ವಿತರಣಾ ಪೈಪ್ ಜಾಲ' ನಿರ್ಮಿಸಲಾಗುವುದು. ಕೈಗಾರಿಕೆಗಳಿಗೆ ನೀರು ತಲುಪಿಸಲು 27 ಕಿ.ಮೀ ಉದ್ದದ ಪ್ರತ್ಯೇಕ ಎಚ್‌ಡಿಪಿಇ (HDPE) ಕೊಳವೆ ಜಾಲ ಸ್ಥಾಪಿಸಲಾಗುವುದು. 'ಶೇಖರಣೆ ಮತ್ತು ಪಂಪಿಂಗ್' ಗಾಗಿ ಸಂಪ್ ಮತ್ತು ಪಂಪ್ ಹೌಸ್ ನಿರ್ಮಾಣ ಮಾಡಿ ಪಂಪಿಂಗ್ ಯಂತ್ರೋಪಕರಣಗಳು, ಡಿಐ ರೈಸಿಂಗ್ ಮೇನ್ ಮತ್ತು 5 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ (OHT) ನಿರ್ಮಿಸಲಾಗುವುದು.
ಬೆಂಗಳೂರು ಜಲಮಂಡಳಿಯು ನಗರದ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನೀರಿನ ಬದಲಿಗೆ ಉನ್ನತ ಗುಣಮಟ್ಟದ ಸಂಸ್ಕರಿಸಿದ ನೀರಿನ ಬಳಸುವುದಕ್ಕೆ ಒತ್ತು ನೀಡುತ್ತಿದೆ. ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಫ್ಲಶಿಂಗ್ ಮತ್ತು ಇತರೆ ಅಗತ್ಯಗಳಿಗೆ ಅಲ್ಟ್ರಾ ಪ್ಯೂರ್ ವಾಟರ್ ಗುಣಮಟ್ಟದ ನೀರನ್ನು ಪ್ರತ್ಯೇಕ ಪೈಪ್‌ಗಳ ಮೂಲಕ ಒದಗಿಸುವ ಮೂಲಕ, ಅಮೂಲ್ಯವಾದ ನದಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಮೀಸಲಿಡಲು ಬದ್ಧರಾಗಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications