ಬೆಂಗಳೂರು ವಿವಿ ಪಿಜಿ ಪ್ರವೇಶ ಆನ್‌ಲೈನ್ ಮೂಲಕ ಪಡೆಯಬಹುದು
ಬೆಂಗಳೂರು, ಜೂನ್ 30: ಇನ್ನುಮುಂದೆ ಆನ್‌ಲೈನ್‌ನಲ್ಲಿಯೇ ಬೆಂಗಳೂರು ವಿವಿ ಪಿಜಿ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳು ಮೌಲ್ಯಮಾಪನ ಪ್ರಕ್ರಿಯೆಯಲ್ಲಿದ್ದು ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗಲಿದೆ ನಂತರ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಪ್ರವೇಶವನ್ನು ಆನ್‌ಲೈನ್ ಮೂಲಕವೇ ಪಡೆಯಬಹುದಾಗಿದೆ.
ಈ ಹಿಂದೆ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶದ ವೇಳೆ ಕಡಿಮೆ ಅಂಕಗಳಿಸಿದವರಿಗೂ ಬೆಂವಿವಿ ಪ್ರವೇಶ ಕಲ್ಪಿಸಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವೇಶ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಶಿಕ್ಷಣ ಇಲಾಖೆ ಆನ್‌ಲೈನ್‌ನಲ್ಲಿ ಸೀಟು ಹಂಚಿಕೆಗೆ ಮುಂದಾಗಿದೆ.

ಈ ವರ್ಷ ಕಾನೂನು ಕೋರ್ಸ್‌ಗಳ ಪ್ರವೇಶವನ್ನು ಆನ್‌ಲೈನ್‌ನಲ್ಲಿ ನಡೆಸಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹಾಗಾಗಿ ಪಿಜಿ ಕೋರ್ಸ್‌ಗಳನ್ನು ಆನ್‌ಲೈನ್ ಮಾಡಲಿದೆ. ವಿದ್ಯಾರ್ಥಿಗಳು ವಿವಿಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬಹುದು. ಅಂತಿಮ ಹಂತದಲ್ಲಿ ದಾಖಲಾತಿ ಪರಿಶೀಲನೆ ಮಾತ್ರ ಕೌನ್ಸೆಲಿಂಗ್ ಮೂಲಕ ನಡೆಯಲಿದೆ.
ವಿಶ್ವವಿದ್ಯಾಲಯಗಳ ತ್ರಿಭಜನೆಯಿಂದಾಗಿ ಜ್ಞಾನಭಾರತಿಯಲ್ಲಿರುವ ಮೂಲ ಬೆಂಗಳೂರು ವಿವಿಗೆ ಕಾಲೇಜುಗಳ ಸಂಖ್ಯೆ 245 ಇರುವುದರಿಂದ ಆನ್‌ಲೈನ್‌ನಲ್ಲಿ ಪ್ರವೇಶ ಪ್ರಕ್ರಿಯೆ ನಡೆಸುವುದು ಸುಲಭವಾಗಿದೆ.












Click it and Unblock the Notifications