BTM Layout: ಕಾಂಗ್ರೆಸ್ ಮುಖಂಡರಿಂದ ಹಲ್ಲೆ, ಬಿಜೆಪಿ ಕಾರ್ಯಕರ್ತನಿಗೆ ಐಸಿಯು ನಲ್ಲಿ ಚಿಕಿತ್ಸೆ
ಬೆಂಗಳೂರು, ಮೇ 08: ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಎರಡೇ ದಿನ ಬಾಕಿ ಇದೆ. ಈ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಮಾಡುತ್ತಿದ್ದ ಪ್ರಮುಖ ರಾಜಕೀಯ ಪಕ್ಷಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿವೆ. ಬಿಜೆಪಿ ಕಾರ್ಯಕರ್ತರೊಬ್ಬರು ಕಾಂಗ್ರೆಸ್ ಮುಖಂಡರಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ಕಾರ್ಯಕರ್ತನ ಮೇಲೆ ಭಾನುವಾರ ಸಂಜೆ 7 ಗಂಟೆ ಆಸುಪಾಸಿಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೆ ತುತ್ತಾದ ಬಿಜೆಪಿ ಕಾರ್ಯಕರ್ತ ಹರಿನಾಥ್ ಅವರಿಗೆ ತೀವ್ರ ನಿಗಾ ಘಟಕ (ICU)ದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕಾಂಗ್ರೆಸ್ ಮುಖಂಡರು ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನೆ ಸಂಬಂಧ ಮಾಜಿ ಮೇಯರ್ ಮಂಜುನಾಥ್ ಪುತ್ರ ಲಿತೇಶ್ ಸೇರಿದಂತೆ ಒಟ್ಟು ಮೂವರ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರು ಮಡಿವಾಳ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಪೊಲೀಸರು ಗಾಯಾಳು ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ವಿಷಯ ತಿಳಿದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಂತ್ರಸ್ತ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತ ಫೋಟೊಗಳನ್ನು ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಹರಿನಾಥ್‌ಗೆ ಮನಬಂದಂತೆ ಥಳಿತ
ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಎರಡು ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದವು. ಎಂದಿನಂತೆ ಭಾನುವಾರವು ಕ್ಯಾನ್ವಾಸ್ ನಡೆಸುತ್ತಿದ್ದ ವೇಳೆ ಮಂಡಲದ ಅಧ್ಯಕ್ಷರ ಮನೆಗೆ ತೆರಳಿ ಕರೆದುಕೊಂಡು ಬರಲು ತೆರಳುತ್ತಿದ್ದಾಗ ಕಾಂಗ್ರೆಸ್ ನಾಯಕರು ದಾಳಿ ನಡೆಸಿದ್ದಾರೆ. ಹರಿನಾಥ್‌ನನ್ನು ಮನಬಂದಂತೆ ಥಳಿಸಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹರಿನಾಥ್‌ಗೆ ಎಂಟು ಹೊಲಿಗೆ ಹಾಕಿ ಐಸಿಯುನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಹಲ್ಲೆಯ ಹಿಂದೆ ಪ್ರಮುಖ ವ್ಯಕ್ತಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಇದ್ದಾರೆಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಆರೋಪಿಸಿದರು.

ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಆತನ ಪುತ್ರ ಲಿತೇಶ್ ರೆಡ್ಡಿ ಸೇರಿದಂತೆ ಒಂದಿಷ್ಟು ಕಾರ್ಯಕರ್ತರು ಹರಿನಾಥ್ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ಎಲೆಕ್ಷನ್ ನ ಕೊನೆ ಟೈಂನಲ್ಲಿ ಕೀಳು ಮಟ್ಟದ ರಾಜಕೀಯ ಮುಖಾಂತರ ಹೆದರಿಸುವ ಯತ್ನ ಮಾಡುತಿದ್ದಾರೆ. ಬಿಜೆಪಿ ಕಾರ್ಯಕರ್ತ ಹರಿನಾಥ್ ಮೇಲೆ ಹಲ್ಲೆ, ಇದರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಗಿ ಬಿಟಿಎಂ ಲೇಔಟ್ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಆರೋಪಿಸಿದ್ದಾರೆ.
ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ತೇಜಸ್ವಿ ಸೂರ್ಯ
ಘಟನೆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್‌ನವರ ಹಲ್ಲೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಅವರು ಖಂಡಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದರೆ ಬಿಟಿಎಂ ಲೇಔಟ್ ಮತ್ತು ಜಯನಗರ ಕ್ಷೇತ್ರದಲ್ಲಿ ಪ್ರತಿಭಟಿಸಲಾಗುವುದು ಎಂದು ಹೇಳಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮಲಿಂಗಾರೆಡ್ಡಿಗೆ ಸೋಲಿನ ಭಯ-ಗೂಂಡಾಗಿರಿ?: ರೆಡ್ಡಿ ಆಕ್ರೋಶ
ಘಟನೆ ಕುರಿತು ಬಿಟಿಎಂ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಆರ್. ಶ್ರೀಧರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಲಿಂಗ ರೆಡ್ಡಿಯವರೇ ನೀವು ಕ್ಷೇತ್ರದಲ್ಲಿ ಸೋಲುವ ಭಯದಿಂದಾಗಿ ಗೂಂಡಾಗಿರಿ ಶುರು ಮಾಡ್ಕೊಂಡಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ.
ರೌಡಿಗಳನ್ನು ಕಳುಹಿಸಿ ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆ ಪ್ರಯತ್ನ ಮಾಡಿಸಿದ್ದೀರಿ. ಒಬ್ಬ ಜನ ಪ್ರತಿನಿಧಿಯಾಗಿ ನೀವೇ ಗೂಂಡಾಗಿರಿ ಮಾಡಿಸಿದರೆ ಇನ್ನೂ ಕ್ಷೇತ್ರದ ಜನರ ರಕ್ಷಣೆ ಹೇಗೆ ಸಾಧ್ಯವಾಗುತ್ತದೆ?. ಬಿಟಿಎಂ ಲೇಔಟ್ ಕ್ಷೇತ್ರದ ಜನರು ನಿಮ್ಮ ಈ ಗುಂಡಾಗಿರಿಗೆ ನಾಡಿದ್ದು ಬುಧವಾರ ಮೇ 10 ರಂದು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications