ಬೆಂಗಳೂರು ಮಳೆ ಸಂತ್ರಸ್ತರಿಗೆ ಕಡಿಮೆ ದರದಲ್ಲಿ ಹೋಟೆಲ್ ರೂಮ್
ಬೆಂಗಳೂರು, ಸೆಪ್ಟೆಂಬರ್ 7: ಬೆಂಗಳೂರಿನಲ್ಲಿ ಮಳೆ ಹೊಡೆತಕ್ಕೆ ನೂರಾರು ಮಂದಿ ನೆತ್ತಿ ಮೇಲಿನ ಸೂರು ಕಳೆದುಕೊಂಡಿದ್ದಾರೆ. ಐಶಾರಾಮಿ ಕಟ್ಟಡ ಹಾಗೂ ವಿಲ್ಲಾಗಳನ್ನು ಹೊಂದಿರುವ ಪ್ರದೇಶಗಳೇ ಮುಳುಗಡೆ ಆಗಿವೆ. ಸುರಕ್ಷಿತ ಸ್ಥಳಕ್ಕಾಗಿ ಸಾರ್ವಜನಿಕರು ಹುಡುಕಾಟ ನಡೆಸುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಸೂರು ಹುಡುಕುತ್ತಿರುವ ಸಂತ್ರಸ್ತರಿಗೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಶನ್ ಬೆಸ್ಟ್ ಆಫರ್ ಅನ್ನು ಘೋಷಿಸಿದೆ. ಜಲ ಪ್ರಳಯದಿಂದ ನೆಲೆ ಕಳೆದುಕೊಂಡ ಮಂದಿಗೆ ಕಡಿಮೆ ದರದಲ್ಲಿ ಹೋಟೆಲ್ ರೂಮ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.
ಮಳೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೋಟೆಲ್ ಕೊಠಡಿಗಳನ್ನು ತಾತ್ಕಾಲಿಕವಾಗಿ ಕಡಿಮೆ ದರದಲ್ಲಿ ನೀಡಲಾಗುತ್ತದೆ. ಆ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಬೆಂಗಳೂರಿನಲ್ಲಿ ಮಳೆ ಹುಟ್ಟು ಹಾಕಿರುವ ಅವಾಂತರಗಳು ಹೇಗಿವೆ?, ತಾತ್ಕಾಲಿಕವಾಗಿ ಕಡಿಮೆ ದರದಲ್ಲಿ ಸಿಗುವ ಹೋಟೆಲ್ ಸೌಲಭ್ಯವನ್ನು ಪಡೆದುಕೊಳ್ಳುವುದು ಹೇಗೆ? ಕಡಿಮೆ ದರದ ರೂಮ್ ಪಡೆದುಕೊಳ್ಳಲು ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಬಿಬಿಎಚ್ಎ ಪ್ರಕಟಣೆ ಬಗ್ಗೆ ತಿಳಿಯಿರಿ
"ಬೆಂಗಳೂರಿನಲ್ಲಿ ಅತಿಯಾದ ಮಳೆಯಿಂದ ಬಹಳಷ್ಟು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ಕೆಲವೊಂದು ಮನೆಗಳಿಗೆ ಪ್ಲಾಟ್ ಗಳಿಗೆ ನೀರು ತುಂಬಿಕೊಂಡು ಬಹಳಷ್ಟು ನಿವಾಸಿಗಳಿಗೆ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಹೋಟೆಲ್ ರೂಮುಗಳನ್ನು ಕಡಿಮೆ ಬಾಡಿಗೆಗೆ ತಾತ್ಕಾಲಿಕವಾಗಿ ನೀಡಲು ನಾವು ಸಿದ್ಧರಿದ್ದೇವೆ. ಅಗತ್ಯವಿರುವವರು ಇದರ ಬಗ್ಗೆ ಹೆಚ್ಚಿನ ವಿವರಗಳಿಗೆ ನಮ್ಮ ಸಂಘವನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆದುಕೊಳ್ಳಿ," ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿನ ಈ ಪ್ರದೇಶಗಳು ಜಲಾವೃತ
ಬೆಂಗಳೂರಿನ ಸರ್ಜಾಪುರ, ಬೆಳ್ಳಂದೂರು, ವರ್ತೂರು, ವೈಟ್‌ಫೀಲ್ಡ್ ಮತ್ತು ಹೊರ ವರ್ತುಲ ರಸ್ತೆ ಸೇರಿದಂತೆ ಹಲವು ಪ್ರದೇಶಗಳ ಸ್ಥಿತಿ ವಿಕೋಪಕ್ಕೆ ಹೋಗಿದೆ. ಸಾರ್ವಜನಿಕರನ್ನು ಈಗಾಗಲೇ ಬೋಟ್ ಮತ್ತು ಟ್ರ್ಯಾಕ್ಟರ್ ನಲ್ಲಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅದಾಗ್ಯೂ, ನಗರದಲ್ಲಿ ಮಳೆಯ ಬಗ್ಗೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.

ಇನ್ನೂ ಮೂರು ದಿನ ಬೆಂಗಳೂರನ್ನು ಬಿಡಲ್ಲ ಮಳೆರಾಯ
ಕಳೆದೊಂದು ವಾರದಿಂದಲೂ ಎಡೆಬಿಡದೇ ಸುರಿಯುತ್ತಿರುವ ಮಳೆರಾಯ ಬೆಂಗಳೂರಿಗೆ ಭೂತದಂತೆ ಕಾಡುತ್ತಿದ್ದಾರೆ. ಸಂಜೆ ವೇಳೆಗೆ ಆಟ ಶುರುವಿಟ್ಟುಕೊಳ್ಳುವ ವರುಣದೇವನ ಅಬ್ಬರ ಇನ್ನೂ ಮೂರು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದು ಬೆಂಗಳೂರಿಗರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಮನೆಯಿಂದ ಹೊರ ಬರುವುದಕ್ಕೂ ಭಯಪಡುವಂತಾ ವಾತಾವರಣ ಸೃಷ್ಟಿಯಾಗಿದೆ.

ಐಟಿ ಕಂಪನಿಗಳಿಂದ ಮತ್ತೊಮ್ಮೆ ವರ್ಕ್ ಫ್ರಾಮ್ ಹೋಮ್
ಸಿಲಿಕಾನ್ ಸಿಟಿಯಲ್ಲಿ ಉದ್ಯೋಗಿಗಳ ಸುರಕ್ಷತೆ ಮತ್ತು ಕೆಲಸವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಐಟಿ ಕಂಪನಿಗಳು ಮತ್ತೊಮ್ಮೆ ವರ್ಕ್ ಫ್ರಾಮ್ ಹೋಮ್ ಅನ್ನು ಘೋಷಿಸಿವೆ. ಟಿಸಿಎಸ್ ಹಾಗೂ ವಿಪ್ರೋ ಕಂಪನಿಗಳು ತಮ್ಮ ಉದ್ಯೋಗಿಗಳ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿವೆ. ''ಬೆಂಗಳೂರಿನಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ವಿತರಣಾ ತಂಡಗಳಿಗೆ ಸರಿಯಾದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ,'' ಎಂದಿರುವ ಟೆಕ್ ವಕ್ತಾರರು ಮನೆಯಿಂದ ಕೆಲಸ ಮಾಡುವ ಯೋಜನೆ ಬಗ್ಗೆ ದೃಢೀಕರಿಸಿದ್ದಾರೆ.
ಬೆಂಗಳೂರಿನಲ್ಲಿ ವಿಪ್ರೋ ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. "ವಹಿವಾಟು ಮುಂದುವರಿಕೆ ಯೋಜನೆಗಳನ್ನು ಆಹ್ವಾನಿಸಲಾಗಿದ್ದು, ವ್ಯಾಪಾರಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ವಿಪ್ರೋ ವಕ್ತಾರರು ತಿಳಿಸಿದ್ದಾರೆ.












Click it and Unblock the Notifications