Karnataka: ಲೋಡ್ ಶೆಡ್ಡಿಂಗ್ ಬೇಡ: ನಿರಂತರ ವಿದ್ಯುತ್ ಪೂರೈಕೆಗೆ ಹೋಟೆಲ್ ಮಾಲೀಕರ ಆಗ್ರಹ
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದಲ್ಲಿ ಸದ್ಯ ಲೋಡ್ ಶೆಡ್ಡಿಂಗ್ ಸಮಸ್ಯೆ ಉದ್ಭವವಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಮುಖ್ಯಮಂತ್ರಿಗಳ ಸೂಚನೆ ಬೆನಲ್ಲೆ ಇದೀಗ ಹೋಟೆಲ್ ಉದ್ಯಮಿದಾರರು ಮುನ್ಸೂಚನೆ ಇಲ್ಲದೇ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ವಿರುದ್ಧ ಬೇಸರ ವ್ಯಕ್ತಪಡಿಸಿರುವ 'ಬೃಹತ್ ಬೆಂಗಳೂರು ಹೋಟೆಲುಗಳ ಸಂಘ' (BBHA) ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.

ಪತ್ರದಲ್ಲಿ ಹೋಟೆಲ್ ಉದ್ದಿಮೆದಾರರು, ಇತ್ತೀಚೆಗೆ ಯಾವುದೇ ಮುನ್ಸೂಚನೆಗಳು ಇಲ್ಲದೇ ವಿದ್ಯುತ್ ಲೊಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಲೋಡ್ ಶೆಡ್ಡಿಂಗ್ ಜೊತೆಗೆ ವಿದ್ಯುತ್ ವ್ಯತ್ಯಯವು ಉಂಟಾಗುತ್ತಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ತೊಂದರೆ ಆಗುತ್ತಿದೆ.
ಹೋಟೆಲ್‌ಗಳಲ್ಲಿ ವಿಶೇಷವಾಗಿ ಕೋಲ್ಡ್ ರೂಮ್, ರೆಫ್ರಿಜಿರೇಟರ್, ಗ್ರೈಂಡರ್ ಮುಂತಾದವುಗಳಿಗೆ ಸರಿಯಾದ ವಿದ್ಯುತ್ ಸರಬರಾಜಿನ ಅಗತ್ಯವಿರುತ್ತದೆ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ವಿವಿಧ ಕಾರಣಗಳಿಂದ ಅಂದಾಜು ಶೇಕಡಾ 50ರಷ್ಟು ಆಹಾರೋತ್ಪಾದನೆ ಕುಸಿತವಾಗಿದೆ. ಈ ರೀತಿಯ ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ಇನ್ನೂ ಹೆಚ್ಚಿನ ಆಹಾರೋತ್ಪಾದನೆಗೆ ಸಮಸ್ಯೆ ಉಂಟಾಗುತ್ತಿದೆ.
ಸರ್ಕಾರ ಕನಿಷ್ಠ ಮಟ್ಟಿಗೆ ಲೋಡ್ ಶೆಡ್ಡಿಂಗ್ ಮಾಡಲೇಬೆಕೆಂದಾಗ ಮುಂಚಿತವಾಗಿಯೇ ತಿಳಿಸಿ ನಿಯಮಿತ ವೇಳೆ ಮಾತ್ರ ವಿದ್ಯುತ್ ಕಡಿತ ಮಾಡಿ ಎಲ್ಲ ಉದ್ಯಮಿಗಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದಷ್ಟೇ ಮಾಡಿದರೆ ಸಾಲದು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸುವುದು ಹಾಗೂ ಇತರ ರಾಜ್ಯಗಳಿಂದ ಖರೀದಿಸುವಂತಹ ಕಾರ್ಯಕ್ಕೆ ತಕ್ಷಣ ಪ್ರಯತ್ನಿಸಬೇಕು. ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆಕ್ರೋಶ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ
ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಇತ್ತೀಚಿನ ವಾರಗಳಲ್ಲಿ ನಿರಂತರವಾಗಿ ಲೋಡ್ ಶೆಡ್ಡಿಂಗ್ ಆಗುತ್ತಿದೆ. ರೈತರಿಗೆ ಅಗತ್ಯವಾದ ಥ್ರೀಪೇಸ್ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕೇವಲ ಎರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇತ್ತ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರು ಸೇರಿದಂತೆ ರಾಜ್ಯದ ಜನರನ್ನು ಕತ್ತಲೆಗೆ ನೂಕಿದೆ ಎಂದು ವಾಗ್ದಾಳಿ ನಡೆಸಿತ್ತು.
ಈ ಮಧ್ಯೆ ರೈತರಿಗೆ ಅನಾನುಕೂಲವಾಗದಂತೆ ಮುಖ್ಯಮಂತ್ರಿಗಳು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಲೋಡ್ ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸಬೇಕು.
ಕೃಷಿ ಕ್ಷೇತ್ರದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ರೈತರಿಗೆ ಕನಿಷ್ಠ ಐದು ಗಂಟೆ ನಿರಂತರ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.












Click it and Unblock the Notifications