ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ವೇಗ ಮಿತಿ ಮೀರಿದ 44 ವಾಹನಗಳ ಮೇಲೆ ಕೇಸ್
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಪೊಲೀಸರು ರಸ್ತೆಗೆ ಇಳಿದಿದ್ದಾರೆ. ಅತಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ಕಣ್ಣಿಟ್ಟಿದ್ದು, ಜುಲೈ 4ರಂದು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿದ್ದ 44 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿದೆ.
ರಾಮನಗರ ಪೊಲೀಸರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು ಕ್ರಮ ತೆಗೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಸ್ಪೀಡ್ ರಾಡಾರ್ ಗನ್ ಮೂಲಕ ವಾಹನಗಳ ವೇಗವನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಸೋಮವಾರ ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿ ದಂಡ ವಿಧಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಟ್ವೀಟ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ವೇಗಮಿತಿ 90 ಕಿಲೋ ಮೀಟರ್ ಎಂದು ಹೇಳಲಾಗಿತ್ತು, ಈ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ನಂತರ, ವೇಗಮಿತಿಯನ್ನು 100 ಕಿಲೋ ಮೀಟರ್ ಗೆ ಹೆಚ್ಚಿಸಲಾಗಿದೆ.

100 ಕಿ.ಮೀ ವೇಗ ಮೀರಿದರೆ ಬೀಳುತ್ತೆ ದಂಡ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ವೇಗಮಿತಿಯನ್ನು 100 ಗಂಟೆಗೆ ನಿಗದಿ ಮಾಡಲಾಗಿದೆ. ಸ್ಪೀಡ್ ರಡಾರ್ ಗನ್, ನಂಬರ್ ಪ್ಲೇಟ್ ರೆಕಗ್ನಿಷನ್(ANPR) ಕ್ಯಾಮರಾಗಳನ್ನು ಅಳವಡಿಸಲಾಗಿದೆ. 100 ಕಿ.ಮೀ. ಗಿಂತ ಅಧಿಕ ವೇಗದಲ್ಲಿ ವಾಹನ ಚಲಾಯಿಸಿದರೆ ಅಂತಹ ವಾಹನಗಳ ಮೇಲೆ ಪ್ರಕರಣ ದಾಖಲಿಸಲಿದ್ದು, ದಂಡ ವಿಧಿಸಲಾಗುತ್ತದೆ.
ಮಂಗಳವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅಲೋಕ್ ಕುಮಾರ್, ಸಂಚಾರ ನಿಯಮಗಳನ್ನು ಪಾಲಿಸುವಂತೆ ವಾಹನ ಚಾಲಕರಿಗೆ ಮನವಿ ಮಾಡಿದ್ದಾರೆ. ಅತಿ ವೇಗದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಗದಿಪಡಿಸಿರುವ ವೇಗದ ಮಿತಿಯಲ್ಲಿ ವಾಹನಗಳಲ್ಲಿ ಚಲಾಯಿಸಿದರೆ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಂಸದ ಪ್ರತಾಪ್ ಸಿಂಹ, "ವಾಹನಗಳು ಗಂಟೆಗೆ ಗರಿಷ್ಠ 120 ಕಿಮೀ ವೇಗದಲ್ಲಿ ಚಲಿಸಲು ಸಾಧ್ಯವಾಗುವಂತೆ ಹೆದ್ದಾರಿಯನ್ನು ವಿನ್ಯಾಸ ಮಾಡಲಾಗಿದೆ. ಗಂಟೆಗೆ 80-100 ಕಿಮೀ ವೇಗದಲ್ಲಿ ವಾಹನ ಚಲಾಯಿಸಿದರೆ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡಬಹುದು. ಆದರೆ ಕೆಲವರು ಕಾರಿನಲ್ಲಿ 140-150 ಕಿ.ಮೀ. ವೇಗದಲ್ಲಿ ಚಾಲನೆ ಮಾಡುತ್ತಿದ್ದರೆ, ವಾಹನಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ" ಎಂದು ಹೇಳಿದ್ದರು.
ಹೆದ್ದಾರಿಯಲ್ಲಿ ಹಲವು ದೋಷಗಳಿರುವುದನ್ನು ಈಗಾಗಲೇ ಗುರುತಿಸಲಾಗಿದ್ದು, ಸಮಸ್ಯೆಗಳನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆಗಳನ್ನು ರೂಪಿಸುತ್ತಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಕೈವಾಕರ್ ನಿರ್ಮಾಣ, ಅಂಡರ್ ಪಾಸ್ ಮತ್ತು ಚನ್ನಪಟ್ಟಣ ಬಳಿ ಐಲ್ಯಾಂಡ್ ರೆಸ್ಟ್ ಏರಿಯಾ ನಿರ್ಮಿಸಲು ನಿರ್ಧರಿಸಲಾಗಿದೆ.
ಜನವರಿಯಿಂದ ಈವರೆಗೆ ಈ ಹೆದ್ದಾರಿಯಲ್ಲಿ 500ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು 60ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 52 ಜನರು ತೀವ್ರವಾಗಿ ಗಾಯಗೊಂಡಿದ್ದು, 279 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.












Click it and Unblock the Notifications