ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶ | Bollywood Actor
ಬಾಲಿವುಡ್ ನಟ ರಣವೀರ್ ಸಿಂಗ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದರು, ಒಂದು ಕಡೆ ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಸಿನಿಮಾ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇಂತಹ ಸಮಯದಲ್ಲೇ ನಟ ರಣವೀರ್ ಸಿಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ಲದೆ ಇದೇ ಆರೋಪದಲ್ಲಿ ರಣವೀರ್ ಸಿಂಗ್ ದೊಡ್ಡ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಈಗ ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ಆದೇಶ ರಿಲೀಫ್ ನೀಡಿದೆ.
ಕಾಂತಾರಾ ಸಿನಿಮಾದ ದೈವದ ಪಾತ್ರವನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಮಿಮಿಕ್ರಿ ಮಾಡಿದ್ದರು. ಈ ವಿಚಾರ ತೀವ್ರ ಆಕ್ರೋಶಕ್ಕೆ ಕಾರಣವಾಗುವ ಜೊತೆಗೆ, ನಟ ರಣವೀರ್ ಸಿಂಗ್ ವಿರುದ್ಧ ಕ್ರಮಕ್ಕೂ ಆಗ್ರಹ ಮಾಡಲಾಗಿತ್ತು. ಕೆಲವು ತಿಂಗಳ ಹಿಂದೆ ರಿಲೀಸ್ ಆಗಿದ್ದ ಕನ್ನಡದ ಇಂಡಸ್ಟ್ರಿ ಹಿಟ್ ಸಿನಿಮಾ ಕಾಂತಾರ ಚಾಪ್ಟರ್-1 ಚಿತ್ರದ, ದೈವಗಳ ಪಾತ್ರವನ್ನ ಕುರಿತು ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ನಟ ರಣವೀರ್ ಸಿಂಗ್ ವಿವಾದ ಎಬ್ಬಿಸಿದ್ದರು. ಕಾಂತಾರಾ ಸಿನಿಮಾದ ಹೀರೋ ಹಾಗೂ ನಿರ್ದೇಶಕರೂ ಆಗಿರುವ ರಿಷಬ್ ಶೆಟ್ಟಿ ಅವರ ಎದುರಲ್ಲೇ ಈ ರೀತಿಯಾಗಿ ರಣವೀರ್ ಸಿಂಗ್ ಮಿಮಿಕ್ರಿ ಮಾಡಿದ್ದರು. ಆಗ ಕೂಡಲೇ ಬೇಸರ ಹೊರಹಾಕಿದ ನಟ ರಿಷಬ್ ಶೆಟ್ಟಿ ಅವರು, ಆ ರೀತಿ ಮಾಡಬೇಡಿ ಎಂದು ಅಲ್ಲೇ ತಡೆದಿದ್ದರು.

ರಣವೀರ್ ಸಿಂಗ್‌ಗೆ ಹೈಕೋರ್ಟ್ ಹೇಳಿದ್ದೇನು?
2025ರ ನವೆಂಬರ್ 28ಕ್ಕೆ ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ನಟ ರಣವೀರ್ ಸಿಂಗ್, ಕರಾವಳಿ ಕರ್ನಾಟಕದ ಪಂಜುರ್ಲಿ, ಗುಳಿಗ ದೈವಗಳ ದೈವೀಕ ಅಭಿವ್ಯಕ್ತಿಯನ್ನ ಒರಟು, ಹಾಸ್ಯಮಯ & ಅವಹೇಳನಕಾರಿ ರೀತಿ ಅನುಕರಣೆ ಮಾಡಿ ಅಣಕ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ದೂರು ಕೂಡ ದಾಖಲಾಗಿದ್ದು, ಈಗ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನಟ ರಣವೀರ್ ಸಿಂಗ್‌ಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಅಲ್ಲದೇ ನಟನ ವರ್ತನೆ ಬಗ್ಗೆ ಬೇಸರ ಹೊರ ಹಾಕಿರುವ ಹೈಕೋರ್ಟ್ ಚಾಟಿ ಬೀಸಿದೆ.
ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ನಟ
ಜನರ ನಂಬಿಕೆಗೆ ಹಾಗೂ ಅವರ ಭಾವನೆಗಳಿಗೆ ಘಾಸಿ ಮಾಡಿರುವುದು ಮಾಸುವುದಿಲ್ಲ ಎಂದು ಹೇಳಿರುವ ಮಾನ್ಯ ಕರ್ನಾಟಕ ಹೈಕೋರ್ಟ್, ಮಾಡಿದ ತಪ್ಪಿಗೆ ಕ್ಷಮೆ ಕೇಳಿರುವ ನಟ ರಣವೀರ್ ಸಿಂಗ್‌ಗೆ ಚಾಟಿ ಬೀಸಿದೆ. ಈ ಬಗ್ಗೆ ಸಜನ್ ಪೂವಯ್ಯ ಪ್ರತಿಕ್ರಿಯಿಸುತ್ತಾ, ಅರ್ಜಿದಾರರು ಯಾರ ಭಾವನೆಗಳಿಗೂ ಧಕ್ಕೆ ಆಗದಂತೆ ನಡೆದುಕೊಳ್ಳಬೇಕಿತ್ತು. ಮುಂದೆ ಈ ಬಗ್ಗೆ ಎಚ್ಚರ ವಹಿಸುತ್ತಾರೆ ಎಂದು ಮನವಿ ಮಾಡಿದ್ದಾರೆ. ರಣವೀರ್ ಸಿಂಗ್ ಘಟನೆ ದೇಶಾದ್ಯಂತ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು, ಅಲ್ಲದೆ ನಟ ರಣವೀರ್ ಈ ರೀತಿ ವರ್ತಿಸಬಾರದಿತ್ತು ಎಂಬ ಆಗ್ರಹ ಕೂಡ ಕೇಳಿಬಂದಿತ್ತು.
ಇನ್ನು ಅಂತಿಮವಾಗಿ ನ್ಯಾಯಪೀಠವು, ಅರ್ಜಿದಾರರು ತಪ್ಪನ್ನ ಒಪ್ಪಿಕೊಂಡಿದ್ದು ಕ್ಷಮೆ ಯಾಚಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ, ಇನ್ನು ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ಹಾಗೂ ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ ಎಂಬುದಕ್ಕೆ ಒಳಪಟ್ಟು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ನಿರ್ದೇಶಿಸಿ, ಅಂತಿಮವಾಗಿ ಈ ಅರ್ಜಿಯ ವಿಚಾರಣೆ ಮಾರ್ಚ್ 2ಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ಮೂಲಕ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಂತಾಗಿದೆ.












Click it and Unblock the Notifications