ವಿರಳ ಸಂಚಾರ ದಿನ : ಸಾರಿಗೆ ಪ್ರಯಾಣ ದರ ಕಡಿತ
ಬೆಂಗಳೂರು, ಡಿಸೆಂಬರ್ 14 : ಪ್ರತಿ ತಿಂಗಳ ಎರಡನೇ ಭಾನುವಾರ ಬೆಂಗಳೂರಿನಲ್ಲಿ ವಾಹನ ವಿರಳ ಸಂಚಾರ ದಿನವಾಗಿ (ಲೆಸ್ ಟ್ರಾಫಿಕ್ ಡೇ) ಆಚರಿಸಲಾಗುವುದು. ಅಂದು ಬಿಎಂಟಿಸಿ ಮತ್ತು ಮೆಟ್ರೊ ಪ್ರಯಾಣ ದರ ಕಡಿಮೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದರು.
ವಾಹನ ಸಂಚಾರ ದಟ್ಟಣೆ, ವಾಯು ಮಾಲಿನ್ಯ ನಿಯಂತ್ರಣದ ಜತೆಗೆ ಸ್ವಂತ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಫೆಬ್ರವರಿಯಿಂದ ತಿಂಗಳ ಎರಡನೇ ಭಾನುವಾರ ವಿರಳ ಸಂಚಾರ ಅಭಿಯಾನವನ್ನು ರಾಜ್ಯ ಸರ್ಕಾರ ಆಯೋಜಿಸದೆ.
ಪ್ರತಿ ತಿಂಗಳ ಎರಡನೇ ಭಾನುವಾರದಂದು ಬಿಎಂಟಿಸಿ ವೋಲ್ವೊ ಮತ್ತು ಸಾಮಾನ್ಯ ಬಸ್‌ಗಳ ಟಿಕೆಟ್ ಮತ್ತು ದೈನಂದಿನ ಪಾಸ್ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಎಷ್ಟು ಕಡಿಮೆ ಮಾಡಬೇಕು ಎಂಬುದನ್ನು ಚರ್ಚಿಸಲಾಗುತ್ತದೆ. ಅದೇ ರೀತಿ ಮೆಟ್ರೊ ರೈಲು ಪ್ರಯಾಣ ದರವನ್ನೂ ಇಳಿಸುವಂತೆ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ ಎಂದು ರೇವಣ್ಣ ವಿವರಿಸಿದರು.

ಕಾನೂನು ಮಾಡುವುದಿಲ್ಲ: ಸಾರ್ವಜನಿಕರು ಎರಡನೇ ಭಾನುವಾರ ಸ್ವಂತ ವಾಹನ ಹೊರಗೆ ತೆಗೆಯಬಾರದು ಎಂದು ಕಾನೂನು ಮಾಡಲು ಸಾಧ್ಯವಿಲ್ಲ. ಇಂತಹ ಕಾನೂನು ತಂದರೆ ಅದು ನ್ಯಾಯಾಲಯಗಳಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಜಾಗೃತಿಯ ಮೂಲಕವೇ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ತಾರೆಗಳು ರಾಯಭಾರಿಗಳು: ವಿರಳ ಸಂಚಾರ ಅಭಿಯಾನಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಸಿನಿಮಾ ತಾರೆಯರನ್ನು ರಾಯಭಾರಿಗಳಾಗಿ ನಿಯೋಜಿಸಿಕೊಳ್ಳಲಾಗುತ್ತದೆ. ಕನ್ನಡ ಚಿತ್ರನಟರಾದ ಪುನೀತ್ ರಾಜ್ ಕುಮಾರ್, ಯಶ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ವಿರಳ ಸಂಚಾರ ದಿನ ಆಟೋ, ಆಪ್ ಆಧಾರಿತ ಬಾಡಿಗೆ ವಾಹನ ಸಂಚಾರಕ್ಕೆ ನಿರ್ಭಂದ ಇರುವುದಿಲ್ಲ. ಒಟ್ಟಾರೆಯಾಗಿ ಸಂಚಾರ ಒತ್ತಡ ನಿಯಂತ್ರಿಸಲು ಐಟಿ, ಬಿಟಿ ಸಂಸ್ಥೆ ಮುಖ್ಯಸ್ಥರೊಂದಿಗೆ ಮಾಡತುಕತೆ ನಡೆಸಲಾಗುತ್ತದೆ ಎಂದರು.












Click it and Unblock the Notifications