ಮತ್ತೆ ಬಿಎಂಟಿಸಿ ಬಸ್ ದರ ಇಳಿಕೆ ಜಪ
ಬೆಂಗಳೂರು, ಡಿ.3 : ಡೀಸೆಲ್ ದರ ಕಡಿಮೆಯಾದರೂ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ದರ ಇಳಿಕೆ ಮಾಡುವುದಿಲ್ಲ ಎಂದು ಕಳೆದ ತಿಂಗಳು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಿಸಿದ್ದರು. ಆದರೆ, ಈಗ ಬಿಎಂಟಿಸಿ ದರ ಇಳಿಕೆ ಮಾಡಲು ಚಿಂತನೆ ನಡೆದಿದ್ದು, ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.
ಕಳೆದ ಮೂರು ತಿಂಗಳಿನಿಂದ ಹಂತ ಹಂತವಾಗಿ ಡೀಸೆಲ್ ದರದಲ್ಲಿ ಇಳಿಕೆಯಾಗುತ್ತಿದೆ. ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ 7.09 ರೂ. ಕಡಿಮೆಯಾಗಿದೆ. ಆದರೂ, ಪ್ರಯಾಣ ದರ ಕಡಿಮೆ ಮಾಡದ ಸಾರಿಗೆ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ದರ ಕಡಿತದ ಬಗ್ಗೆ ಚರ್ಚೆ ಆರಂಭವಾಗಿದೆ. [ಬಸ್ ದರ ಇಳಿಕೆ ಅಸಾಧ್ಯ, ಸಚಿವರು ನೀಡಿದ ಕಾರಣಗಳು]

ಹೊಸ ವರ್ಷಕ್ಕೆ ಜನರಿಗೆ ದರ ಇಳಿಕೆ ಉಡುಗೊರೆ ನೀಡಲು ಬಿಎಂಟಿಸಿ ಚಿಂತನೆ ನಡೆಸಿದ್ದು, ಡಿ.26ರಂದು ಬಿಎಂಟಿಸಿ ಆಡಳಿತ ಮಂಡಳಿ ಸಭೆ ಕರೆಯಲು ಉದ್ದೇಶಿಸಲಾಗಿದೆ. ದರ ಇಳಿಕೆಯ ಸಾಧ್ಯತೆಗಳ ಈ ಸಭೆಯಲ್ಲಿ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. [ಬಸ್ ಪ್ರಯಾಣ ದರː ಲೋಕಸತ್ತಾ ಪಕ್ಷದಿಂದ ಪ್ರತಿಭಟನೆ]
ಡೀಸೆಲ್ ದರ ಇಳಿಕೆಯಿಂದಾಗಿ ಬಿಎಂಟಿಸಿ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ. ಮೊದಲು ಸಂಸ್ಥೆಯನ್ನು ಲಾಭದ ಉದ್ದೇಶಕ್ಕೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ನಂತರ. ಪ್ರಯಾಣ ದರ ಕಡಿತ ಮಾಡಲು ಸಾಧ್ಯವೆ? ಎಂಬ ಬಗ್ಗೆ ಪರೀಶಿಲನೆ ನಡೆಸಲಾಗುತ್ತದೆ. ಅಂತೂ ಹೊಸ ವರ್ಷಕ್ಕೆ ಪ್ರಯಾಣ ದರ ಕಡಿಮೆಯಾಗುವ ಸೂಚನೆ ಸದ್ಯಕ್ಕೆ ಸಿಕ್ಕಿದೆ. ಮುಂದೇನಾಗುತ್ತದೋ?












Click it and Unblock the Notifications