BMTC: ಬಿಎಂಟಿಸಿಯಿಂದ 40 ಹೊಸ ಮಾರ್ಗ, ಶೇ 70ರಷ್ಟು ಬಸ್‌ಗಳು ಭರ್ತಿ
ಬೆಂಗಳೂರು, ಆಗಸ್ಟ್ 14: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಬೇಡಿಕೆಯಂತೆ ಹೊಸ ಹೊಸ ಮಾರ್ಗವನ್ನು ಪರಿಚಯಿಯಸುತ್ತಿದೆ. ಒಂದು ವರ್ಷದಲ್ಲಿ 40 ವಿವಿಧ ಪ್ರದೇಶಗಳಿಂದ ಹೊಸ ಬಸ್ ಮಾರ್ಗವನ್ನು ಪರಿಚಯಿಸಿದೆ. ಈ ಪ್ರಯೋಗ ಯಶಸ್ವಿಯಾಗಿದ್ದು, ಬಸ್‌ಗಳು ಶೇ 70ರಷ್ಟು ಭರ್ತಿಯಾಗಿ ಸಂಚಾರ ನಡೆಸುತ್ತಿವೆ.
ಹೊಸ ಬಡಾವಣೆಗಳು, ಮೆಟ್ರೋ ಫೀಡರ್ ಮತ್ತು ಪ್ರಯಾಣಿಕರ ಬೇಡಿಕೆ ಇರುವ ಕಡೆ ಹೊಸ ಮಾರ್ಗವನ್ನು ಪರಿಚಯಿಸಲಾಗಿದೆ. ಯಾವ ಮಾರ್ಗ ಲಾಭದಲ್ಲಿ ಇಲ್ಲವೋ?, ಪ್ರಯಾಣಿಕರ ಕೊರತೆ ಇದೆಯೋ ಅಲ್ಲಿ ಕೆಲವು ಬದಲಾವಣೆ ಮಾಡಲು ಸಂಸ್ಥೆ ಮುಂದಾಗಿದೆ.

40 ಹೊಸ ಮಾರ್ಗದಲ್ಲಿ ತುಮಕೂರು ರಸ್ತೆಯ ಮಾದವರ, ಎಲೆಕ್ಟ್ರಾನಿಕ್ ಸಿಟಿ-ಹೊಸೂರು ವಯಾ ನೈಸ್ ರೋಡ್ ಮಾರ್ಗ ಬಹಳ ಜನಪ್ರಿಯವಾಗಿದೆ. ಹೆಎಸ್‌ಆರ್ ಲೇಔಟ್ ನಮ್ಮ ಮೆಟ್ರೋ ಫೀಡರ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. ನಗರದಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಹೊಸ ಮಾರ್ಗವನ್ನು ಬಿಎಂಟಿಸಿ ಪರಿಚಯಿಸುತ್ತಿದೆ.
ಹೊಸ ಮಾರ್ಗ ಗುರುತಿಸುವುದು ಹೇಗೆ?: ಹೊಸ ಮಾರ್ಗವನ್ನು ಪರಿಚಯಿಸಲು ಬಿಎಂಟಿಸಿ ಹಲವು ಮಾನದಂಡಗಳನ್ನು ಇಟ್ಟುಕೊಂಡಿದೆ. ಪ್ರಮುಖವಾಗಿ ಜನರಿಂದ ಬಸ್ ಸಂಚಾರಕ್ಕೆ ಇರುವ ಬೇಡಿಕೆ ಕುರಿತು ವಿವರವಾದ ಪರಿಶೀಲನೆ ನಡೆಸಲಾಗುತ್ತದೆ. ಅಪಾರ್ಟ್‌ಮೆಂಟ್‌ಗಳ ಸಭೆ, ಲೇಔಟ್‌ಗಳ ಸಭೆಯಲ್ಲಿ ನಡೆಯುವ ಚರ್ಚೆಯ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.
ಬಸ್ ಚಾಲಕರು, ನಿರ್ವಾಹಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಮಾರ್ಗ, ಪೀಕ್ ಹವರ್‌ನಲ್ಲಿ ಸಂಚಾರ ದಟ್ಟಣೆ, ಹೊಸ ಬಸ್ ಓಡಿಸಿದರೆ ಆಗುವ ಲಾಭದ ಕುರಿತು ಮಾಹಿತಿ ಪಡೆದು ವಿವರವಾಗಿ ಚರ್ಚಿಸಿ, ಮಾರ್ಗ ಅಂತಿಮಗೊಳಿಸಲಾಗುತ್ತದೆ.
ಮಾದವರ ಮಾರ್ಗ ಪರಿಚಯಿಸುವ ಮೊದಲು ತುಮಕೂರು ರಸ್ತೆಯ ಪ್ರಯಾಣಿಕರು ಎಲೆಕ್ಟ್ರಾನಿಕ್ ಸಿಟಿ ತಲುಪಲು ಹರಸಾಹಸ ಪಡಬೇಕಿತ್ತು. ವ್ಯಾನ್, ಲಾರಿಗಳಲ್ಲಿ ಜನರು ಸಂಚಾರವನ್ನು ನಡೆಸುತ್ತಿದ್ದರು. ಆದ್ದರಿಂದ ಕಳೆದ ನವೆಂಬರ್‌ನಲ್ಲಿ ಹೊಸ ಮಾರ್ಗ ಪರಿಚಯಿಸಲಾಯಿತು. ಎರಡೂ ಕಡೆಯ ಟ್ರಿಪ್‌ಗಳಲ್ಲಿ ಬಸ್‌ಗಳು ಭರ್ತಿಯಾಗುತ್ತಿವೆ.
ಇದೇ ಮಾದರಿಯಲ್ಲಿ ನಮ್ಮ ಮೆಟ್ರೋ ಫೀಡರ್ ಬಸ್ ಸೇವೆಗೆ ಸಹ ಬಹಳ ಬೇಡಿಕೆ ಇದೆ. ಹೆಚ್‌ಎಸ್ಆರ್ ಲೇಔಟ್ ಮೆಟ್ರೋ ಫೀಡರ್ ಸೇವೆಯಲ್ಲಿ ಒಂದು ವರ್ಷದಲ್ಲಿ ಪ್ರತಿ ತಿಂಗಳು 1 ಲಕ್ಷಕ್ಕೂ ಅಧಿಕ ಜನರು ಸಂಚಾರವನ್ನು ನಡೆಸುತ್ತಿದ್ದಾರೆ.
ವಿಜಯನಗರ-ವಿಪ್ರೋ ಗೇಟ್ ಎಲೆಕ್ಟ್ರಾನಿಕ್ ಸಿಟಿ ನೈಸ್ ರೋಡ್, ಹೆಬ್ಬಾಳ-ತೂಗಬೆರೆ, ಶಿವಾಜಿನಗರ-ಹೆಸರಘಟ್ಟ, ಯಲಹಂಕ-ಹೆಸರಘಟ್ಟ, ಮಲ್ಲೇಶ್ವರ-ಬನಶಂಕರಿ ಬಿಂಟಿಸಿ ಇತ್ತೀಚೆಗೆ ಪರಿಚಯಿಸಿದ ಕೆಲವು ಹೊಸ ಮಾರ್ಗಗಳು.
ಹೊಸ ಹೊಸ ಮಾರ್ಗಕ್ಕೆ ಬರುತ್ತಿರುವ ಬೇಡಿಕೆಯನ್ನು ಗಮನಿಸಿದರೆ ಬಸ್‌ಗಳಿಗೆ ಬೇಡಿಕೆ ತಗ್ಗಿಲ್ಲ ಎಂಬುದು ತಿಳಿಯುತ್ತಿದೆ. ಜನರು ಬಸ್ ಸೇವೆ ಆರಂಭಿಸಲು ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಬಸ್, ಕ್ಯಾಬ್, ಆಟೋ, ನಮ್ಮ ಮೆಟ್ರೋ, ಖಾಸಗಿ ವಾಹನಗಳು ಸೇರಿ ಹಲವಾರು ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ಬಿಎಂಟಿಸಿ 6 ಸಾವಿರಕ್ಕೂ ಅಧಿಕ ಬಸ್‌ಗಳನ್ನು ಹೊಂದಿದ್ದು, ನಗರದಲ್ಲಿ ದೊಡ್ಡ ಸಂಪರ್ಕ ಜಾಲವನ್ನೇ ಹೊಂದಿದೆ. ನಮ್ಮ ಮೆಟ್ರೋ ಸಹ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿದ್ದು, ಪ್ರತಿ ದಿನ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುತ್ತಾರೆ.












Click it and Unblock the Notifications