Bengaluru Airport: ಟರ್ಮಿನಲ್ 2ಗೆ ಬಿಎಂಟಿಸಿ ಬಸ್‌ನಲ್ಲೇ ಓಡಾಡಿ, ಜು.1ರಿಂದಲೇ ಸೇವೆ ಆರಂಭ
ಬೆಂಗಳೂರು, ಜುಲೈ 03: ವಾರ್ಷಿಕವಾಗಿ ಲಕ್ಷಾಂತರ ಪ್ರಯಾಣಿಕರ ಓಡಾಟಕ್ಕೆ ಸಾಕ್ಷಿಯಾಗಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಅನ್ನು ಬೆಂಗಳೂರು ಉದ್ಯಾನ ನಗರಿ ಥೀಮ್ ಆಧಾರದಲ್ಲಿ ವಿಶೇಷ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ ಈಗಾಗಲೇ ವಿಮಾನ ಕಾರ್ಯಾಚರಣೆ ಆರಂಭವಾಗಿದ್ದು, ಇದೀಗ ಬಿಎಂಟಿಸಿ ಟಿ2ಗೆ ಬಸ್ ಸೇವೆ ಆರಂಭಿಸಿದೆ.
ಹಲವು ವಿಶೇಷತೆಗಳಿಂದ ಕೂಡಿರುವ ಈ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ (ಟಿ2) ಇತ್ತೀಚೆಗಷ್ಟೇ ವಿಮಾನಯಾನ ಆರಂಭವಾಗಿದೆ. ಈ ಮೊದಲು ಟರ್ಮಿನಲ್ 1ರಿಂದ (ಟಿ1) ಮಾತ್ರ ವಿಮಾನಗಳು ಸಂಚರಿಸುತ್ತಿದ್ದವು. ಹೀಗಾಗಿ ಈವರೆಗೆ ಟಿ-1ಗೆ ಮಾತ್ರವೇ ಪ್ರಯಾಣಿಕರನ್ನು ಬಿಎಂಟಿಸಿ ಬಸ್‌ಗಳು ಕರೆದೊಯ್ಯುತ್ತಿದ್ದವು.

ಇದೀಗ ಜುಲೈ 1ರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಟಿ 2ಗೂ ಬಸ್ ಸೇವೆ ಆರಂಭಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಿಎಂಟಿಸಿ ಬಸ್‌ಗಳು ಟರ್ಮಿನಲ್ 1ರ ಜೊತೆಗೆ ಟರ್ಮಿನಲ್ 2ರವರೆಗೂ ತೆರಳುವಂತೆ ನಿಗಮ ಸೂಚಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಐಎಗೆ ನಿತ್ಯ 950 ಬಸ್ ಟ್ರಿಪ್
ರಾಜಧಾನಿಯ ಮೆಜೆಸ್ಟಿಕ್ ಶಾಂತಿನಗರ, ಸ್ಯಾಟ್‌ಲೈಟ್, ವಿಜಯನಗರ ಸೇರಿದಂತೆ ವಿವಿಧ ಭಾಗಗಳಿಂದ ಜನರು ನಿತ್ಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಏರ್‌ಪೋರ್ಟ್‌ಗೆ ಪ್ರತಿದಿನ ಬಿಎಂಟಿಸಿ ನಿಗಮದ ವೊಲ್ವೋ ಬಸ್‌ಗಳು 950 ಟ್ರಿಪ್‌ಗಳನ್ನು ಹೊಡೆಯುತ್ತವೆ.

ಪ್ರಯಾಣಿಕರು ಇದುವರೆಗೆ ಟಮಿರ್ನಲ್ 1ಕ್ಕೆ ತೆರಳುವಾಗ ನೀಡುತ್ತಿದ್ದ, ದರದಲ್ಲೇ ನೀವು ಟರ್ಮಿನಲ್ 2ಗೂ ತೆರಳಬಹುದು. ಒಂದನೇ ಟರ್ಮಿನಲ್‌ಗೆ ತೆಗೆದುಕೊಳ್ಳುವ ದರವನ್ನೇ ಎರಡನೇ ಟರ್ಮಿನಲ್‌ಗೂ ಅದೇ ದರ ತೆಗೆದುಕೊಳ್ಳುತ್ತಿದ್ದೇವೆ. ಇದಕ್ಕೆ ಪ್ರತ್ಯೇಕ ದರ ನಿಗದಿ ಮಾಡಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದರು.
KIA ನಲ್ಲಿ ಬಹುಮಾದರಿ ಸಾರಿಗೆ ಸೌಲಭ್ಯ
ಪ್ರತಿ ವರ್ಷ ಅತ್ಯಧಿಕ ಗರಿಷ್ಠ ಸಂಖ್ಯೆ ಯ ಪ್ರಯಾಣಿಕರಿಗೆ ವಿಮಾನಯಾನ ಸೇವೆ ನೀಡುತ್ತಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಭವಿಷ್ಯದಲ್ಲಿ ದೇಶದಲ್ಲೇ ಬಹುಮಾದರಿ ಸಾರಿಗೆ ಸೌಲಭ್ಯ ಹೊಂದಿದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣವು ಇಲ್ಲಿ ಒಂದೇ ಸೂರಿನಡಿ ಬರಲಿದೆ. ಇದು ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲದ ಹಾಗೂ ತಡೆರಹಿತ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಕುರಿತ ಯೋಜನೆ ಆದಷ್ಟು ಶೀಗ್ರವೇ ಜಾರಿಯಾಗಲಿದೆ. ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ. ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ.
ವಿಮಾನ ನಿಲ್ದಾಣದಲ್ಲಿ ಕೇವಲ ಸರ್ಕಾರಿ ಸಾರಿಗೆ ಮತ್ತು ಮೆಟ್ರೋಗೆ ಮಾತ್ರ ಆದ್ಯತೆ ನೀಡಿಲ್ಲ. ಬದಲಾಗಿ ಖಾಸಗಿ ಕಾರು- ಟ್ಯಾಕ್ಸಿಯಂತಹ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಚಿಂತನೆ ಈ ಯೋಜನೆಯಲ್ಲಿದೆ. ಪ್ರಯಾಣಿಕರು ಜೊತೆಗೆ ಸಾಮಗ್ರಿಗಳ ವಿಂಗಡನಾ ಪ್ರತ್ಯೇಕ ಸ್ಥಳ ಸಹ ಇರಲಿದೆ ಎಂದು ಈ ಹಿಂದೆ ಕೆಐಎ ಅಧಿಕಾರಿಗಳು ಮಾಹಿತಿ ನೀಡಿದ್ದರು.












Click it and Unblock the Notifications