ವಿದ್ಯಾರ್ಥಿನಿಗೆ ಅಪಘಾತ, ವಿವಿ ಆವರಣದಲ್ಲಿ ಬಿಎಂಟಿಸಿ ಸಂಚಾರ ನಿಷೇಧಿಸಿ
ಬೆಂಗಳೂರು, ಅ. 11: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಬಸ್ ಹತ್ತುವಾಗ ವಿದ್ಯಾರ್ಥಿನಿ ಆಯತಪ್ಪಿ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಿಎಂಟಿಸಿ ಬಸ್ ಚಾಲಕನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಸೋಮವಾರದಂದು ಶಿಲ್ಪಾ ಎಂಬ ವಿದ್ಯಾರ್ಥಿನಿ ಬಿಎಂಟಿಸಿ ಬಸ್(KA 57 FO 961) ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಕೆ ಸೊಂಟದ ಮೇಲೆ ಬಸ್ ಹರಿದಿದೆ. ಆದರೆ, ಬಸ್ ನಿಲ್ಲಿಸದೆ ಬಸ್ ಚಾಲಕ ನಿರ್ಲಕ್ಷ್ಯ ಮಾಡಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಶಿಲ್ಪಾ ಗೆಳತಿ ರಾಧಿಕಾ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡು ಚಾಲಕ ಸುರೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಪ್ರತಿಭಟನೆ ಮುಂದುವರೆಯಲಿದೆ
ವಿದ್ಯಾರ್ಥಿನಿ ಶಿಲ್ಪಶ್ರೀಗೆ ಅಪಘಾತವಾದ ಸುದ್ದಿ ತಿಳಿದ ವಿದ್ಯಾರ್ಥಿ ಸಮೂಹ ದಿಢೀರ್ ಪ್ರತಿಭಟನೆ ಕೈಗೊಂಡು, ರಸ್ತೆ ತಡೆದಿದ್ದರು. ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಪ್ರತಿಭಟನೆ ಮತ್ತೆ ಮುಂದುವರೆಯಲಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ರಸ್ತೆ ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಕರೆದೊಯ್ದರು. ಪ್ರತಿಭಟನೆ ಕೈಬಿಡುವಂತೆ ಉಪ ಕುಲಪತಿ ಡಾ. ಎಸ್ ಎಂ ಜಯಕರ್, ಬಿಎಂಟಿಸಿ ಅಧಿಕಾರಿಗಳು, ಪೊಲೀಸರು ಮನವಿ ಮಾಡಿಕೊಂಡರು ವಿದ್ಯಾರ್ಥಿಗಳು ಜಗ್ಗಲಿಲ್ಲ.

ಬಸ್ ಸಂಚಾರ ನಿಷೇಧಕ್ಕೆ ಆಗ್ರಹ
ರಸ್ತೆ ಅಪಘಾತದಿಂದ ವಿದ್ಯಾರ್ಥಿಗಳು ನೋವು ಅನುಭವಿಸುತ್ತಿರುವುದು ಇದೇ ಮೊದಲಲ್ಲ, ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕು, ಸರ್ಕಾರಿ ವಾಹನ ಸಂಚಾರಕ್ಕೂ ನಿರ್ಬಂಧವಿರಬೇಕು. ವಿವಿ ಆವರಣದಲ್ಲಿ ಆಂಬ್ಯುಲೆನ್ಸ್ ಸೇವೆ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ
ಕೋಲಾರ ಜಿಲ್ಲೆ ಬಂಗಾರಪೇಟೆ ಬಳಿಯ ಡಿಕೆ ಹಳ್ಳಿಯ ದಾಸರಹಳ್ಳಿ ನಿವಾಸಿ 22 ವರ್ಷ ವಯಸ್ಸಿನ ಶಿಲ್ಪಶ್ರೀ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಣಿತ ವಿಭಾಗದಲ್ಲಿ ಎಂಎಸ್ಸಿ ವಿದ್ಯಾರ್ಥಿನಿಯಾಗಿದ್ದಾರೆ.ವಿವಿ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಗಾಯಗೊಂಡ ಆಕೆಯನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಪರಿಸ್ಥಿತಿ ಇನ್ನು ಸುಧಾರಿಸಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications