BMTC: ಬಿಎಂಟಿಸಿಯಲ್ಲಿನ ಅವ್ಯವಹಾರದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ನ್ಯಾಯ ಕೇಳಿದ ಚಾಲಕ ಅಮಾನತು!
ನ್ಯಾಯ ಸಿಕ್ಕಿಲ್ಲ ಎಂದು ರಾಜ್ಯಪಾಲರು ಮತ್ತು ಅಧಿಕಾರಿಗಳ ಬಳಿಗೆ ಹೋದ ಬಿಎಂಟಿಸಿ ಬಸ್ ಚಾಲಕರೊಬ್ಬರನ್ನು ಕೆಲಸದಿಂದಲೇ ಅಮಾನತು ಮಾಡಿರುವ ಅಮಾನವಿಯ ಘಟನೆ ನಡೆದಿದೆ.
ಬೆಂಗಳೂರು, ಫೆಬ್ರವರಿ. 09: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಹಾಗೂ ಸಾರಿಗೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಬಸ್ ಚಾಲಕನನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಮಾನತು ಮಾಡಿದೆ.
15 ವರ್ಷಗಳಿಂದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ 53 ವರ್ಷದ ಚಾಲಕ ಎಂ ಕೆ ತ್ಯಾಗರಾಜು, ಅವ್ಯವಹಾರ, ಭ್ರಷ್ಟಾಚಾರದ ಬಗ್ಗೆ ನ್ಯಾಯ ಕೇಳಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ನ್ಯಾಯ ಕೇಳಿದವರನ್ನೇ ಮನೆಗೆ ಕಳುಹಿಸಿದೆ ಬಿಎಂಟಿಸಿ.
ಬಿಎಂಟಿಸಿಯ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ವೈಯಕ್ತಿಕ ಲಾಭಕ್ಕಾಗಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ ತ್ಯಾಗರಾಜು, ಹಲವಾರು ಬಾರಿ ದಾಖಲೆಗಳ ಸಮೇತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಕ್ರಮ ಕೈಗೊಳ್ಳದ ಬಿಎಂಟಿಸಿ ಎಂಡಿ ಸತ್ಯವತಿ
ಜನವರಿ 20 ರಂದು ರಾಜ್ಯಪಾಲರಿಗೆ ಚಾಲಕ ತ್ಯಾಗರಾಜು ಬರೆದ ಪತ್ರದಲ್ಲಿ, "ಬಿಎಂಟಿಸಿ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇದಕ್ಕೆ ಮುಖ್ಯ ಕಾರಣ ಕೆಲ ಉನ್ನತ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿ ತಮ್ಮ ಸ್ವಾರ್ಥಕ್ಕಾಗಿ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವುದು. ಆದರೆ, ಆರ್‌ಟಿಐ ಮೂಲಕ ಪಡೆದ ಮಾನ್ಯ ದಾಖಲೆಗಳೊಂದಿಗೆ ಅಧಿಕಾರಿಗಳ ವಿರುದ್ಧ ಹಲವಾರು ದೂರುಗಳನ್ನು ಸಲ್ಲಿಸಿದರೂ, ಬಿಎಂಟಿಸಿ ಎಂಡಿ ಸತ್ಯವತಿ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಆರೋಪಿಸಿದ್ದಾರೆ.
ಇಲಾಖೆಯಲ್ಲಿನ ವಿವಿಧ ಅಕ್ರಮಗಳ ಬಗ್ಗೆ ವಿವರಿಸಿರುವ ತ್ಯಾಗರಾಜು ಅವರು, ಕಳೆದ ವರ್ಷ ಆಗಸ್ಟ್ 5 ರಂದು ಎಂಡಿ ಸತ್ಯವತಿ ಅವರ ಪಿಎ ಅಜಯ್ ವಿರುದ್ಧ ಮೊದಲ ದೂರು ಸಲ್ಲಿಸಿದ್ದರು.
ನೌಕರರು ಮತ್ತು ವ್ಯವಸ್ಥಾಪಕ ನಿರ್ದೇಶಕರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾದ ಪಿಎ, ನೌಕರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕೇಂದ್ರ ಕಚೇರಿಗೆ ಬಂದರೆ ಇಬ್ಬರ ನಡುವೆ ಮನಸ್ತಾಪ ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಎಂಟಿಸಿ ಎಂಡಿ ಸತ್ಯವತಿಗೆ ಭೇಟಿಗೆ ಅವಕಾಶ ನೀಡದ ಪಿಎ!
"ಇಲಾಖೆಯ ಸುತ್ತೋಲೆ ಪ್ರಕಾರ, ಬಿಎಂಟಿಸಿ ಎಂಡಿ ತಮ್ಮ ಪಿಎಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಬದಲಾಯಿಸಬೇಕು. ಆದರೆ, ಅಜಯ್ 24 ವರ್ಷಗಳಿಂದ ಇಲ್ಲಿದ್ದಾರೆ. ಎಂಡಿಯೊಂದಿಗೆ ಉದ್ಯೋಗಿಗಳು ಸಭೇ ನಡೆಸಲು ಬಿಡುವುದಿಲ್ಲ. ಅವರನ್ನು ಭೇಟಿಯಾಗಲು ಪಿಎ ಯಾರಿಗೂ ಅವಕಾಶ ನೀಡುವುದಿಲ್ಲ. ತಾನೇ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೆಳಹಂತದಲ್ಲಿ ಸಮಸ್ಯೆಗಳು ಬಗೆಹರಿದರೆ, ನಾವು ಏಕೆ ಅವರನ್ನು ಭೇಟಿಯಾಗುತ್ತೇವೆ. ಈ ಬಗ್ಗೆ ಎಂಡಿಗೆ ಪತ್ರ ಬರೆದರೂ ಏನೂ ಕ್ರಮ ಕೈಗೊಂಡಿಲ್ಲ" ಎಂದು ತ್ಯಾಗರಾಜು ದೂರಿದ್ದಾರೆ.
ಸುಮಾರು 26 ವರ್ಷಗಳಿಂದ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎ ಅಜಯ್, ಲಂಚವಿಲ್ಲದೆ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಅನುಮತಿ ಪತ್ರವಿಲ್ಲದೆ ಬಾಹ್ಯ ಸಂಸ್ಥೆಗಳ ಇತರ ಚುನಾವಣೆಗಳಲ್ಲಿ ಸ್ಪರ್ಧಿಸಲು ನಮಗೆ ಅವಕಾಶವಿಲ್ಲ. ಆದರೆ ಬಸವರಾಜು ಸಂಸ್ಥೆಯಿಂದ ಅನುಮತಿ ಪತ್ರ ಪಡೆಯದೇ ಸ್ಪರ್ಧಿಸಿದ್ದರು. ಈ ಬಗ್ಗೆ ದಾಖಲೆಗಳ ಸಮೇತ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಹೇಳಿದ್ದಾರೆ.

ಫೆಬ್ರವರಿ 4 ರಂದು ಚಾಲಕ ತ್ಯಾಗರಾಜು ಅಮಾನತು
ಯಾವುದೇ ಸಮಸ್ಯೆ ಬಗೆಹರಿಯದ ಕಾರಣ ಜ.20ರಂದು ಎಲ್ಲ ದಾಖಲೆಗಳ ಸಮೇತ ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದೇ ದಿನ ಸಾರಿಗೆ ಮತ್ತು ಕಾರ್ಮಿಕ ಇಲಾಖೆಗಳಿಗೂ ಮನವಿ ಸಲ್ಲಿಸಿದ್ದಾರೆ.
ದೂರು ಸಲ್ಲಿಸಿದ ನಂತರ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು. ಬಳಿಕ ಫೆಬ್ರವರಿ 4 ರಂದು ಚಾಲಕ ತ್ಯಾಗರಾಜು ಅವರನ್ನು ಅಮಾನತು ಮಾಡಿರುವುದಾಗಿ ಬಿಎಂಟಿಸಿ ಎಂಟಿ ಸತ್ಯವತಿ ಆದೇಶಿಸಿದ್ದಾರೆ.
"ನೌಕರನಾಗಿ ನಾನು ಕೆಲವು ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದೇನೆ. ನನ್ನ ದೂರು ಪತ್ರಗಳು ವಿವಿಧ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗಿನಿಂದ ಅದು ಇಲಾಖೆಯ ಘನತೆಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಭಾನುವಾರ ರಜೆ ಇದ್ದಾಗ ನನ್ನನ್ನು ಅಮಾನತು ಮಾಡಲಾಗಿತ್ತು. ಅಮಾನತು ಮಾಡುವ ಮುನ್ನ ಮಾಧ್ಯಮಗಳಲ್ಲಿ ಬಂದಿರುವ ದೂರುಗಳ ಬಗ್ಗೆ ಮಾತುಕತೆ ನಡೆಸಬೇಕಿತ್ತು. ಅವರು ಏನನ್ನೂ ಮಾಡಲಿಲ್ಲ. ಅವರನ್ನು ವಿಚಾರಿಸಿದಾಗ ತಮಗೆ ಇಷ್ಟ ಬಂದಂತೆ ಮಾಡುವುದಾಗಿ ಹೇಳಿದ್ದಾರೆ" ಎಂದು ತ್ಯಾಗರಾಜು ತಿಳಿಸಿದ್ದಾರೆ.
"ನಾನು ಹಲವಾರು ಬಾರಿ ಎಂಡಿಯವರ ಜೊತೆಗೆ ಮಾತನಾಡಲು ಪ್ರಯತ್ನಿಸಿದೆ . ಅದು ಸಾಧ್ಯವಾಗಲಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನ ಪ್ರತಿಭಟನೆಯು ಮುಂದಿನ ದಿನಗಳಲ್ಲಿ ಇತರ ಕಾರ್ಮಿಕರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ನಕಲಿ ಸಹಿ ಮಾಡಿದವರಿಗೆ ವರ್ಗಾವಣೆ, ನ್ಯಾಯ ಕೇಳಿದವರಿಗೆ ಅಮಾನತು!
ಇನ್ನ, ನಕಲಿ ಸಹಿ ಮಾಡಿದ ಆರೋಪದ ಮೇಲೆ ಕೇಂದ್ರ ಕಚೇರಿಯಲ್ಲಿದ್ದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬಸ್‌ಗಳಲ್ಲಿನ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನಕಲಿ ಸಹಿಗಳನ್ನು ಮಾಡಲಾಗಿದೆ. 5 ರಿಂದ 6 ವರ್ಷಗಳ ಗುತ್ತಿಗೆಗೆ ನೀಡಿರುವ ಬಸ್ ಡಿಪೋಗಳಲ್ಲಿನ ಇಲಾಖೆ ಕಟ್ಟಡಗಳ ನವೀಕರಣದ ವಿಷಯದಲ್ಲೂ ಅಧಿಕಾರಿಗಳು ನಕಲಿ ಸಹಿ ಮಾಡಿದ್ದಾರೆ. 18 ಅಧಿಕಾರಿಗಳನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ ಆದರೆ ನಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ನನ್ನನ್ನು ಅಮಾನತುಗೊಳಿಸಲಾಗಿದೆ ಎಂದು ತ್ಯಾಗರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಕಾರ್ಮಿಕರು ತಮ್ಮ ಸಮಸ್ಯೆಗಳ ಬಗ್ಗೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುವ ವಾತಾವರಣವಿಲ್ಲ. ಇದರಿಂದ ಕೆಳಸ್ತರದಲ್ಲಿರುವ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ. ಉದಾಹರಣೆಗೆ, ರಜೆಗಾಗಿ ಅರ್ಜಿ ಸಲ್ಲಿಸುವಾಗ ಲಂಚ ನೀಡಬೇಕು. ನೌಕರರು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ರಡು ಡಿಪೋಗಳಲ್ಲಿ ಚಾಲಕರು ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಇದೆಲ್ಲಾ ಅರ್ಥ ಮಾಡಿಕೊಲ್ಳುವ ಪ್ರಯತ್ನ ನಡೆಯುತ್ತಿಲ್ಲ" ಎಂದು ಹೆಸರು ಹೇಳಲು ಇಚ್ಚಿಸದ ಚಾಲಕರೊಬ್ಬರು ಹೇಳಿದ್ದಾರೆ.












Click it and Unblock the Notifications