ಬಿಎಂಎಸ್ ಸಂಜೆ ಇಂಜಿನಿಯರಿಂಗ್ ಕಾಲೇಜು ಬಂದ್
ಬೆಂಗಳೂರು, ಜುಲೈ 06; ಬೆಂಗಳೂರಿನ ಬಿಎಂಎಸ್ ಸಂಜೆ ಇಂಜಿನಿಯರಿಂಗ್ ಕಾಲೇಜು ಬಂದ್ ಆಗಿದೆ. ಈ ಶೈಕ್ಷಣಿಕ ವರ್ಷದಿಂದಲೇ ಸಂಜೆ ಕಾಲೇಜು ನಡೆಸಲು ಎಐಸಿಟಿಇ ಒಪ್ಪಿಗೆ ನೀಡಿಲ್ಲ. ಬೆಂಗಳೂರಿನಲ್ಲಿರುವ ಒಂದೇ ಒಂದು ಸಂಜೆ ಇಂಜಿನಿಯರಿಂಗ್ ಕಾಲೇಜು ಈ ಮೂಲಕ ಬಾಗಿಲು ಮುಚ್ಚಿದೆ.
ಸಂಜೆ ಇಂಜಿನಿಯರಿಂಗ್ ಕಾಲೇಜು ನಡೆಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮತಿ ನೀಡಲು ನಿರಾಕರಿಸಿದೆ. ಕರ್ನಾಟಕ ಸರ್ಕಾರ ಸಹ ಎಐಸಿಟಿಇ ಆದೇಶ ಪಾಲನೆ ಮಾಡಲು ಸೂಚನೆ ಕೊಟ್ಟಿದ್ದು, ಕಾಲೇಜು ಬಂದ್ ಆಗಿದೆ.

ಕರ್ನಾಟಕದಲ್ಲಿ 12 ಸಂಜೆ ಇಂಜಿನಿಯರಿಂಗ್ ಕಾಲೇಜುಗಳಿದ್ದವು. ಆದರೆ 2021-22ರಲ್ಲಿ 11 ಕಾಲೇಜುಗಳನ್ನು ಮುಚ್ಚಲಾಗಿತ್ತು. ಆದರೆ ಬೆಂಗಳೂರಿನ ಬಿಎಂಎಸ್ ಸಂಜೆ ಕಾಲೇಜು ನಡೆಯುತ್ತಲಿತ್ತು. ಈ ಶೈಕ್ಷಣಿಕ ವರ್ಷದಿಂದ ಈ ಕಾಲೇಜು ಸಹ ಬಾಗಿಲು ಹಾಕಿದೆ.
ಎಐಸಿಟಿಇ ಆದೇಶದಂತೆ ಸಂಜೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಪ್ಲೊಮಾ ಪದವಿ ಹೊಂದಿದವರಿಗೆ ಮೂರು ವರ್ಷದ ಇಂಜಿನಿಯರಿಂಗ್ ಕೋರ್ಸ್ ನಡೆಸಲಾಗುತ್ತಿತ್ತು. ಆದರೆ ಈಗ ಅದನ್ನು ನಾಲ್ಕು ವರ್ಷದ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ವಿಲೀನಗೊಳಿಸಲಾಗಿದೆ.
196 ಸೀಟುಗಳ ಹಂಚಿಕೆ; ಈ ವರ್ಷ ಸಂಜೆ ಇಂಜಿನಿಯರಿಂಗ್ ಕಾಲೇಜು ನಡೆಸಲು ಅನುಮತಿ ಇಲ್ಲ. ಆದರೆ ಕೆಇಎ 2022-23ರ ಶೈಕ್ಷಣಿಕ ವರ್ಷಕ್ಕೆ 196 ಸೀಟುಗಳನ್ನು ಹಂಚಿಕ ಮಾಡಿತ್ತು. ಸಿವಿಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಕಂಪ್ಯೂಟರ್ ಸೈನ್ಸ್ ಸೇರಿ ವಿವಿಧ ವಿಷಯಕ್ಕೆ ವಿದ್ಯಾರ್ಥಿಗಳು ಸೇರಿದ್ದರು. ಪ್ರವೇಶ ಪ್ರಕ್ರಿಯೆ ಮುಗಿದು 45 ದಿನಗಳು ಕಳೆದರೂ ಸಹ ತರಗತಿಗಳು ಆರಂಭವಾಗಿಲ್ಲ.
ಮಾಧ್ಯಮಗಳ ಜೊತೆ ಮಾತನಾಡಿರುವ ಕಾಲೇಜಿನ ಪ್ರಾಂಶುಪಾಲ ಎಸ್. ಮುರುಳೀಧರ್, "ನಾವು ಸಂಜೆ ಇಂಜಿನಿಯರಿಂಗ್ ಕಾಲೇಜು ಮುಂದುವರೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಎಐಸಿಟಿಇ ಆದೇಶದ ಹಿನ್ನಲೆಯಲ್ಲಿ ಸರ್ಕಾರ ಅನುಮತಿ ನೀಡಿಲ್ಲ" ಎಂದರು.
"1970ರಲ್ಲಿ ಉದ್ಯೋಗಿಗಳಿಗೆ ಉನ್ನತ ಶಿಕ್ಷಣ ನೀಡುವ ಗುರಿಯೊಂದಿಗೆ ಸಂಜೆ ಇಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಕಾರಣ ಈ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಮುಚ್ಚಿದ್ದೇವೆ" ಎಂದು ಹೇಳಿದ್ದಾರೆ.
ಸಂಜೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಾವಿರಾರು ಡಿಪ್ಲೊಮಾ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಕೆಇಬಿ, ಬಿಬಿಎಂಪಿ ಮುಂತಾದ ಕಡೆ ಕೆಲಸಕ್ಕೆ ಸೇರಿದ್ದ ಅಭ್ಯರ್ಥಿಗಳಿಗೆ ಸಂಜೆ ಇಂಜಿನಿಯರಿಂಗ್ ಕಾಲೇಜು ವರದಾನವಾಗಿತ್ತು. ಅವರು ಕೆಲಸ ಮಾಡುತ್ತಲೇ ತಮ್ಮ ಇಂಜಿನಿಯರಿಂಗ್ ಪದವಿ ಮುಗಿಸಿ, ಉನ್ನತ ಶಿಕ್ಷಣ ಪಡೆದಿದ್ದರು. ಇದು ಅವರು ಕೆಲಸದಲ್ಲಿಯೂ ಬಡ್ತಿ ಪಡೆಯಲು ಸಹಾಯಕವಾಗಿತ್ತು. ಸಂಜೆ ಕಾಲೇಜು ಮುಂದುವರೆಸಲು ಇಚ್ಛೆ ಹೊಂದಿದ್ದರೂ ಸಹ ಆದೇಶದ ಕಾರಣ ಅನಿವಾರ್ಯವಾಗಿ ಬಂದ್ ಮಾಡಬೇಕಾಗಿದೆ.
ಇನ್ನು ಈ ವರ್ಷ ಸಂಜೆ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ತರಗತಿ ಆರಂಭಿಸಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಈಗ ಕಾಲೇಜಿಗೆ ಬೀಗ ಬಿದ್ದಿದೆ. ರಾಜ್ಯ ಸರ್ಕಾರ ಮುಧ್ಯ ಪ್ರವೇಶ ಮಾಡಿ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಲಿದೆಯೇ? ಎಂದು ಕಾದು ನೋಡಬೇಕಿದೆ.
ಡಿಪ್ಲೊಮಾ ಪದವಿ ಪಡೆದಿರುವ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಾಲೇಜಿಗೆ ಸೇರಿದರೆ ಅವರು ಪ್ರಾಕ್ಟಿಕಲ್ ತರಗತಿಗಳಲ್ಲಿ ಭಾಗವಹಿಸಲು ಸಮಯಾವಕಾಶವನ್ನು ನೀಡಲಾಗುತ್ತದೆ ಎಂದು ಎಐಸಿಟಿಇ ಹೇಳಿದೆ. ಆದರೆ ಸಂಜೆ ಕಾಲೇಜು ಮುಂದುವರೆಸುವ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ.












Click it and Unblock the Notifications