Namma Metro: ಹೆಬ್ಬಾಳ ಬಳಿ ನಮ್ಮ ಮೆಟ್ರೋಗೆ 45 ಎಕರೆ ಜಮೀನು ಹಸ್ತಾಂತರ, ಇಲ್ಲಿದೆ ಅಪ್‌ಡೇಟ್
ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಏರಿಯಾ ಹೆಬ್ಬಾಳ ಫ್ಲೈಓವರ್. ಈ ಮಾರ್ಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಈಗ ದಿನವಿಡೀ ಇಲ್ಲಿ ಟ್ರಾಫಿಕ್ ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಹೆಬ್ಬಾಳ ಮಾರ್ಗವಾಗಿ ಏರ್‌ಪೋರ್ಟ್‌ವರೆಗೆ ನಮ್ಮ ಮೆಟ್ರೋ ಕಾಮಗಾರಿ ಈಗಾಗಲೇ ವೇಗವಾಗಿ ಸಾಗುತ್ತಿದೆ. ಹೆಬ್ಬಾಳ ಬಳಿ 45 ಎಕರೆ ಜಮೀನಿಗಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಸಲ್ಲಿಸಿದ್ದ ಪ್ರಸ್ತಾಪದ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ನಿನ್ನೆ ಇದೇ ವಿಚಾರವಾಗಿ ಸಭೆ ನಡೆಸಿ ಚರ್ಚೆಯೂ ನಡೆಸಿದ್ದಾರೆ. ಹೆಬ್ಬಾಳದ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 45 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ. ಇದನ್ನು ತಮಗೆ ಹಸ್ತಾಂತರಿಸುವಂತೆ ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾಗಿ ನಿನ್ನೆ ನಡೆದಿರುವ ಸಭೆಯಲ್ಲಿ ನಮ್ಮ ಮೆಟ್ರೋಗೆ ಈ ಜಮೀನು ಹಸ್ತಾಂತರಿಸುವ ಬಗ್ಗೆ ಭಾರಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಈ ಹಿಂದೆ ಹೆಬ್ಬಾಳದ ಬಳಿ ಇದ್ದ 45 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಸ್ವತ್ತನ್ನು ವಿಶೇಷ ಯೋಜನೆಗಾಗಿ ಒಂದು ಸಂಸ್ಥೆಗೆ ಹಂಚಿಕೆ ಕೂಡ ಮಾಡಿತ್ತು. ಈಗ ನಮ್ಮ ಮೆಟ್ರೋ ಆ ಜಾಗವನ್ನು ಏರ್‌ಪೋರ್ಟ್ ಮೆಟ್ರೋ ಸಂಪರ್ಕಿಸುವ ಉದ್ದೇಶಕ್ಕೆ ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಅಲ್ಲದೆ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭವಾಗುವುದು ನಿರ್ಣಾಯಕವಾಗಿದ್ದು, ಇದರಿಂದ ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸಬಹುದು ಎಂಬ ಕಾರಣವನ್ನೂ ನೀಡಿದೆ.
ಹಾಗಾಗಿ ಕೆಐಎಡಿಬಿ ಅಧೀನದಲ್ಲಿರುವ 45 ಎಕರೆ ಜಮೀನಿನಲ್ಲಿ ಬಹು ಮಾದರಿಯ ಸಾರಿಗೆ ಕೇಂದ್ರ ನಿರ್ಮಾಣ ಮಾಡಲು ಮೆಟ್ರೋ ಯೋಜನೆ ರೂಪಿಸಿದೆ. ಹಾಗಾಗಿ ಆ ಜಮೀನು ನೀಡುವಂತೆ ಮೆಟ್ರೊ ನಿಗಮ ರಾಜ್ಯ ಸರ್ಕಾರದ ಬೆನ್ನುಬಿದ್ದಿದೆ. ಈ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಬೆಂಗಳೂರು ಅಭಿವೃದ್ಧಿಯ ಉದ್ದೇಶದೊಂದಿಗೆ ಈ ಬೇಡಿಕೆ ಸಂಬಂಧ ವಿಶೇಷ ಕಾಳಜಿ ತೋರಿದ್ದಾರೆ ಎನ್ನಲಾಗಿದೆ. ಮೆಟ್ರೋ ಬೇಡಿಕೆಯಂತೆ ಈ 45 ಎಕರೆ ಜಮೀನನ್ನು ಯಾವ ರೀತಿ ಹಂಚಿಕೆ ಮಾಡಬಹುದು ಎಂಬ ಕುರಿತು ನಿನ್ನೆ ಸಚಿವ ಎಂಬಿ ಪಾಟೀಲ್ ಅವರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ ಇಲ್ಲಿ ಎದುರಾಗುವ ಕಾನೂನು ಅಂಶಗಳು ಮತ್ತು ಪರಿಹಾರದ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅತಿ ಉದ್ದದ ಮೆಟ್ರೋ ಮಾರ್ಗವು ಈಗಾಗಲೇ ನಿರ್ಮಾಣ ಹಂತದಲ್ಲಿದೆ. ಇನ್ನು ಹೆಬ್ಬಾಳದಿಂದ ಏರ್‌ಪೋರ್ಟ್ ಟರ್ಮಿನಲ್‌ವರೆಗೆ ಹಾದುಹೋಗಿರುವ ರಸ್ತೆ ಮಾರ್ಗದ ಪಕ್ಕದಲ್ಲೇ ಮೆಟ್ರೋ ಮಾರ್ಗವನ್ನೂ ನಿರ್ಮಿಸುತ್ತಿರುವುದರಿಂದ ಕೆಲವ ಕೂಡ ವೇಗವಾಗಿ ಸಾಗಿದೆ. ಬೇರೆ ಮಾರ್ಗಗಳಿಗೆ ಹೋಲಿಸಿದರೆ ಈ ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೂಡ ಅಷ್ಟೊಂದು ತಲೆಬಿಸಿ ನೀಡಿಲ್ಲ. ಈ ಹಿನ್ನೆಲೆ ಆದಷ್ಟು ಬೇಗನೆ ಏರ್‌ಪೋರ್ಟ್‌ಗೆ ಮೆಟ್ರೋ ರೈಲು ಸೇವೆ ಕಲ್ಪಿಸಲು ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ತುದಿಗಾಲಲ್ಲಿ ನಿಂತಿದೆ.












Click it and Unblock the Notifications