ಹಳೆ ಕೇಸಿನಲ್ಲಿ ಹಿಂದು ಕಾರ್ಯಕರ್ತರ ಬಂಧನ: ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಬೆಂಗಳೂರು, ಜನವರಿ 02: ರಾಮಮಂದಿರ ಉದ್ಘಾಟನೆ ವಿಚಾರ ಕರ್ನಾಟಕದಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬಂದಿದೆ. ರಾಮ ಮಂದಿರ ಲೋಕಾರ್ಪಣೆಗೆ ಸಿದ್ದವಾಗಿರುವ ಈ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 30 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ಹಿಂದೂ ಕರಸೇವಕರ ಬಂಧನ ಮಾಡಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುತ್ತಿರುವುದು ಕಾಂಗ್ರೆಸ್ ನವರಿಗೆ ಸಹಿಸಲು ಆಗುತ್ತಿಲ್ಲ. ಇಡೀ ದೇಶದ ಜನ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು? ಎದು ಅವರು ಮಂಗಳವಾರ ಸರಣಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಇಡೀ ದೇಶವೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಪಾಲನೆ ಮಾಡುವವರೇ ಕಾನೂನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಇದು ಸ್ಪಷ್ಪ ನಿದರ್ಶನ.
ದ್ವೇಷ ರಾಜಕಾರಣದ ಕಾಂಗ್ರೆಸ್
ಈಗಾಗಲೇ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿರುವುದಕ್ಕೆ ಕಾಂಗ್ರೆಸ್ ಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನವೂ ಇಲ್ಲದಂತಾಗಿದೆ. ಈ ರೀತಿಯ ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದೂ ನಿಶ್ಚಿತ ಎಂದು ಅವರು ಎಚ್ಚರಿಸಿದರು.
ಹುಬ್ಬಳ್ಳಿಯಲ್ಲಿ ಒಟ್ಟು 32 ಪ್ರಕರಣಗಳು ಬಾಕಿ ಇವೆ. ಇವುಗಳನ್ನು ವಿಲೇವಾರಿ ಮಾಡುವಂತೆ ಸರ್ಕಾರದ ಸೂಚನೆ ಇದೆ. ಇದರಲ್ಲಿ ಒಂದು ರಾಮಮಂದಿರದ ಸಲುವಾಗಿ ನಡೆದ ಹೋರಾಟ ಪ್ರಕರಣ. ಇದನ್ನು ನಾವು ದುರುದ್ದೇಶದಿಂದ ಟಾರ್ಗೆಟ್ ಮಾಡಿಲ್ಲ ಎಂದು ಇತ್ತೀಚೆಗೆ ಡಾ.ಜಿ.ಪರಮೇಶ್ವರ್ ತಿಳಿಸಿದ್ದರು.

ಸರ್ಕಾರದ ವಿರುದ್ಧ ಆಕ್ರೋಶ
ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಇದೊಂದು ಪೊಲೀಸ್ ಇಲಾಖೆ ವ್ಯಾಪ್ತಿಯ ಸಾಮಾನ್ಯ ಪ್ರಕ್ರಿಯೆ ಎಂದು ಹೇಳುತ್ತಿದ್ದಾರೆ. ರಾಮಜನ್ಮಭೂಮಿಗಾಗಿ 1992 ರಲ್ಲಿ ಹೋರಾಟ ನಡೆದಿದ್ದವು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲನೆಗೆ ಒಳಪಡಿಸುವ ಜೊತೆಗೆ ಅಂದು ಭಾಗಿಯಾಗಿದ್ದ ಹಿಂದು ಕಾರ್ಯಕರ್ತರನ್ನು ಬಂಧಿಸುತ್ತಿದೆ. ಈ ಸಂಬಂಧ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಾವು ರಾಮಮಂದಿರ ಪರವಾಗಿದ್ದು, ಸಂಪೂರ್ಣ ಬೆಂಬಲವಿದೆ. ಕೇಂದ್ರ ಬಿಜೆಪಿಯೇ ರಾಮಮಂದಿರ ಉದ್ಘಾಟನೆ ಚುನಾವಣೆಗಾಗಿ ಬಳಸಿಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು, ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರಲ್ಲಿ ಭಯ ಹುಟ್ಟಿಸಲು ಸರ್ಕಾರ ಯತ್ನಿಸುತ್ತಿದೆ. ದೇವಸ್ಥಾನ ನಿರ್ಮಾಣವಾದರೆ ನಿಮಗೇಕೆ ಹೊಟ್ಟೆ ಕಿಚ್ಚು ಎಂದೆಲ್ಲ ಗುಡುಗಿದ್ದಾರೆ.












Click it and Unblock the Notifications