• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ಕೆಲಸ ಆಯ್ತು, ಇನ್ನೊಂದು ಮಾಡಿಯೇ ಸಿದ್ಧ: ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್

|

ಬೆಂಗಳೂರು, ಆಗಸ್ಟ್ 24: ಗಡಿನಿಯಂತ್ರಣ ಆಚೆ ಇರುವ ಕಾಶ್ಮೀರದ ಭಾಗವೂ ಮುಂದೊಂದು ದಿನ ಭಾರತಕ್ಕೆ ಸೇರುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 'ಭಾರತಾಂಬೆಯ ಕಿರೀಟ ಕಾಶ್ಮೀರ-370ನೇ ವಿಧಿ ರದ್ದತಿ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ರಾಮಮಂದಿರ ನಿರ್ಮಾಣದ ಕುರಿತು ಒತ್ತು ನೀಡಿ ಮಾತನಾಡಿದರು.

ಪರಿಚ್ಛೇದ 370 ಕುರಿತು ಬಿಜೆಪಿಯಿಂದ ರಾಷ್ಟ್ರಾದ್ಯಂತ ಜಾಗೃತಿ ಅಭಿಯಾನ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 1ರಷ್ಟು ಜನಸಂಖ್ಯೆ ಮಾತ್ರ ಕಾಶ್ಮೀರದಲ್ಲಿದೆ. ಆದರೆ, ಪ್ರತಿ ಬಾರಿಯೂ ಬಜೆಟ್‌ನಲ್ಲಿ ಆ ಭಾಗಕ್ಕೆ ಶೇ 11.25ರಷ್ಟು ಅನುದಾನವನ್ನು ಕಳೆದ 60 ವರ್ಷಗಳಿಂದ ವ್ಯಯಿಸಲಾಗುತ್ತಿತ್ತು. ಹಾಗೆ ನೀಡುವ ಹಣಕ್ಕೆ ಲೆಕ್ಕವೂ ಇರುತ್ತಿರಲಿಲ್ಲ. ಅಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಕೂಡ ಆಗುತ್ತಿರಲಿಲ್ಲ. ಇದಕ್ಕೆಲ್ಲ ಮೋದಿ ಮತ್ತು ಅಮಿತ್ ಶಾ ಅವರು ಆಗಸ್ಟ್ 5ರಂದು ಅಂತಿಮ ವಿರಾಮ ಹಾಕಿದ್ದಾರೆ ಎಂದರು.

ರಾಮಮಂದಿರ ನಿರ್ಮಾಣ ಖಚಿತ

ರಾಮಮಂದಿರ ನಿರ್ಮಾಣ ಖಚಿತ

ಬಿಜೆಪಿ ಹುಟ್ಟಿದ್ದೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ಮತ್ತು ಪಕ್ಷ ಬೆಳೆದಿದ್ದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು. ರಾಮಮಂದಿರ ನಿರ್ಮಾಣ ಮಾಡಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆಯೇ ಇಲ್ಲ. ಯಾವಾಗ ಎಂಬುದಷ್ಟೇ ನಮ್ಮ ಮುಂದಿರುವ ಪ್ರಶ್ನೆ. ಇದರಲ್ಲಿ ಯಾವ ಮುಚ್ಚುಮರೆ ಯಾವುದೂ ಇಲ್ಲ ಎಂದು ಹೇಳಿದರು.

ದೇಶದ ಮೊದಲ ಪ್ರಧಾನಮಂತ್ರಿ ಮಾಡಿದ ಅತಿ ದೊಡ್ಡ ಪ್ರಮಾದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸರಿಪಡಿಸಿದ್ದಾರೆ. ಮೊದಲ ಪ್ರಧಾನಿಯಿಂದ ಆದ ಹಲವಾರು ತಪ್ಪುಗಳನ್ನು ಅಡೆತಡೆಗಳನ್ನು ಮೀರಿ ಸರಿಪಡಿಸುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ.

ಕಾಶ್ಮೀರ ಸಂಪೂರ್ಣ ಸೇರಿಕೊಳ್ಳಲಿದೆ

ಕಾಶ್ಮೀರ ಸಂಪೂರ್ಣ ಸೇರಿಕೊಳ್ಳಲಿದೆ

ಮನೆಗೆದ್ದು ಮಾರುಗೆಲ್ಲು ಎಂಬ ಗಾದೆಯನ್ನು ನೆಹರೂ ಅವರ ತಾಯಿ ಅವರಿಗೆ ಹೇಳಿಕೊಟ್ಟಿರಲಿಲ್ಲ ಎನಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ಸಲುವಾಗಿ ನೆಹರೂ ಕಾಶ್ಮೀರದ ವಿಚಾರದಲ್ಲಿ ತಪ್ಪು ಮಾಡಿದರು. ಈಗ ಅದನ್ನು ಸರಿಪಡಿಸಲಾಗಿದೆ. ಮುಂದೊಂದು ದಿನ ಸಾಮಾನ್ಯ ಗಡಿ ನಿಯಂತ್ರಣ ರೇಖೆಯಾಚೆ ಇರುವ ಕಾಶ್ಮೀರದ ಭಾಗ ಕೂಡ ಭಾರತಕ್ಕೆ ಸೇರಲಿದೆ. ಅದು ಗೊತ್ತಿರುವುದರಿಂದಲೇ ಕಾಂಗ್ರೆಸ್ ಹೊರತುಪಡಿಸಿ ಉಳಿದ ಎಲ್ಲ ರಾಜಕೀಯ ಪಕ್ಷಗಳು ಬಿಜೆಪಿಯ ತೀರ್ಮಾನವನ್ನು ಬೆಂಬಲಿಸಿದವು ಎಂದು ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ಇನ್ನೆಷ್ಟು ದಿನ ಬಿಗಿ ಭದ್ರತೆ , ಕೇಂದ್ರ ಹೇಳಿದ್ದೇನು?

ಈ ಹೋರಾಟ ಇಂದಿನದ್ದಲ್ಲ

ಈ ಹೋರಾಟ ಇಂದಿನದ್ದಲ್ಲ

ದೇಶದಲ್ಲಿ ಒಂದೇ ಸಂವಿಧಾನ, ಒಂದೇ ಧ್ವಜ, ಒಂದೇ ಪ್ರಧಾನಿ ಇರಬೇಕು ಎಂಬುದನ್ನು ನಾವು 1951ರಿಂದಲೂ ಪ್ರತಿಪಾದಿಸುತ್ತಿದ್ದೇವೆ. 370ನೇ ವಿಧಿ ರದ್ದು, ರಾಮಮಂದಿರ ನಿರ್ಮಾಣ ಮತ್ತು ಏಕರೂಪ ನಾಗರಿಕ ಸಂಹಿತೆ ಕುರಿತು ಅಂದಿನಿಂದ ಇಲ್ಲಿಯವರೆಗೂ ಜನಸಂಘದ ವಿವಿಧ ಸಭೆಗಳಲ್ಲಿ 73 ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಎಲ್ಲ ಚುನಾವಣೆ ಪ್ರಣಾಳಿಕೆಗಳಲ್ಲಿಯೂ ಪ್ರಸ್ತಾಪಿಸಿದ್ದೇವೆ. ಯಾವ ವಿಚಾರವನ್ನೂ ಇದ್ದಕ್ಕಿದ್ದಂತೆ ಮುನ್ನೆಲೆಗೆ ತಂದಿಲ್ಲ ಎಂದರು.

ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಹುಟ್ಟಲಿಲ್ಲ

ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಹುಟ್ಟಲಿಲ್ಲ

ನೆಹರೂ ಅವರ ಅರ್ಥಹೀನ ರಾಜಕೀಯದಿಂದ ಬೇಸೆತ್ತು ಶ್ಯಾಮಪ್ರಸಾದ್ ಮುಖರ್ಜಿ ಅವರು ಕಾಂಗ್ರೆಸ್‌ನಿಂದ ಹೊರಬಂದು ಜನಸಂಘ ಸ್ಥಾಪಿಸಿದರು. ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಹೋರಾಟವನ್ನು ಆರಂಭಿಸಿದ್ದರು. ಕರ್ನಾಟಕ, ಗುಜರಾತ್, ಮಧ್ಯಪ್ರದೇಶ ಇಲ್ಲೆಲ್ಲ ಅಧಿಕಾರಕ್ಕೆ ಬರಬೇಕು ಎಂಬ ಕಾರಣದಿಂದ ಅಥವಾ ದೇಶಕ್ಕೆ ಪ್ರಧಾನಿ ನೀಡಬೇಕು ಎಂಬ ಉದ್ದೇಶಕ್ಕೆ ಬಿಜೆಪಿ ಜನಿಸಿರಲಿಲ್ಲ.

ಲಾಭವಾಗಿದ್ದು ಮೂರು ಪರಿವಾರಕ್ಕೆ ಮಾತ್ರ

ಲಾಭವಾಗಿದ್ದು ಮೂರು ಪರಿವಾರಕ್ಕೆ ಮಾತ್ರ

ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರಾಶ್ರಿತರಾಗಿ ಭಾರತಕ್ಕೆ ವಾಪಸಾದ ಮೂಲ ಕಾಶ್ಮೀರಿಗರಿಗೆ 35ಎ ವಿಧಿಯಡಿ ಪೌರತ್ವವನ್ನೇ ನೀಡಲಿಲ್ಲ. 370ನೇ ವಿಧಿಯ ವಿಶೇಷ ಸ್ಥಾನಮಾನದಿಂದ ಅಬ್ದುಲ್ಲಾ ಪರಿವಾರ, ಸಯೀದ್ ಪರಿವಾರ ಮತ್ತು ನೆಹರೂ-ಗಾಂಧಿ ಪರಿವಾರಕ್ಕೆ ಮಾತ್ರ ಅನುಕೂಲ ಆಗುತ್ತಿತ್ತು. ವಿಶೇಷ ಸ್ಥಾನಮಾನದ ನಿಯಮದಿಂದಾಗಿ ಅಲ್ಲಿನ ಮುಸ್ಲಿಮರಿಗೂ ಅನುಕೂಲವಾಗಿಲ್ಲ. ಶೇ 17ರಷ್ಟು ಜನರಿಗೆ ಮಾತ್ರ ಉನ್ನತ ಶಿಕ್ಷಣದ ಲಾಭ ಸಿಕ್ಕಿದೆ. ಇವರೆನ್ನೆಲ್ಲಾ ಗಾಂಧಿ ಕುಟುಂಬ ದಾರಿತಪ್ಪಿಸಿತ್ತು. ಇಷ್ಟು ದಿನ ತಾವು ಕಳೆದುಕೊಂಡಿದ್ದೇನು ಎಂಬುದು ಈಗ ಅಲ್ಲಿನ ಜನರಿಗೆ ಅರ್ಥವಾಗುತ್ತಿದೆ ಎಂದರು ಹೇಳಿದರು.

ಪ್ರತಿಪಕ್ಷಗಳ ನಿಯೋಗ ಶನಿವಾರ ಜಮ್ಮು ಕಾಶ್ಮೀರಕ್ಕೆ ಭೇಟಿ

ಅಂಬೇಡ್ಕರ್ ಸಂವಿಧಾನ ಅಲ್ಲಿ ಇರಲೇ ಇಲ್ಲ

ಅಂಬೇಡ್ಕರ್ ಸಂವಿಧಾನ ಅಲ್ಲಿ ಇರಲೇ ಇಲ್ಲ

ಡಾ. ಬಿಆರ್ ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ಬರಲಿಲ್ಲ. ಅಲ್ಲಿಯೂ ಅದನ್ನು ಜಾರಿ ಮಾಡಿ ಎಂದು ಯಾರಾದರೂ ಹೋರಾಟ ಮಾಡಿದ್ದನ್ನು ನಾನು ನೋಡಲಿಲ್ಲ. ಅಲ್ಲಿನ ಪರಿಶಿಷ್ಟ ಜಾರಿ ಮತ್ತು ಪಂಗಡದವರಿಗೆ ಮೀಸಲಾತಿ ಇರಲಿಲ್ಲ. ಇದನ್ನು ಯಾರೂ ಕೇಳಲಿಲ್ಲ. ಕಾಶ್ಮೀರದಲ್ಲಿ ಪರಿಶಿಷ್ಟರು ಇನ್ನು ಮುಂದೆ ಎಲ್ಲ ರೀತಿಯ ಮೀಸಲಾತಿಗಳನ್ನು ಪಡೆದುಕೊಳ್ಳಲಿದ್ದಾರೆ. ಹುಸಿ ಜಾತ್ಯತೀತ ರಾಜಕಾರಣವನ್ನು ಕಾಂಗ್ರೆಸ್ ದೇಶದ ತಲೆಯ ಮೇಲೆ ಹೇರಿಕೊಂಡು ಬಂದಿತ್ತು. ರಾಷ್ಟ್ರೀಯತೆಯನ್ನು ಹುಟ್ಟುಹಾಕಿದ ಬಳಿಕ ಜನರಲ್ಲಿ ಅದರ ಬಗ್ಗೆ ಅರಿವು ಮೂಡಿದೆ.

English summary
BJP National Secretary BL Santhosh said, the party did not born to form governments, but to remove Article 370 and to build ram mandir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X