ಮುಸ್ಲಿಮರಿಂದ ಕಿತ್ತುಕೊಂಡ ಮೀಸಲಾತಿ ಒಪ್ಪಿಕೊಳ್ಳಲು ಲಿಂಗಾಯತ, ಒಕ್ಕಲಿಗರಿಗೆ ಬೆದರಿಕೆ: ಡಿಕೆ ಶಿವಕುಮಾರ್
ಬೆಂಗಳೂರು, ಮಾರ್ಚ್. 27: ಒಕ್ಕಲಿಗ ಸಮುದಾಯದ ಧರ್ಮಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಪಂಚಮಸಾಲಿ ಲಿಂಗಾಯತ ಮಠಾಧೀಶ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಬಿಜೆಪಿ ಸರ್ಕಾರವು ತಲಾ ಶೇ 2ರಷ್ಟು ಕೋಟಾ ಹೆಚ್ಚಳವನ್ನು ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
"ಹೊಸ ಮೀಸಲಾತಿ ಕೋಟಾವನ್ನು ಒಪ್ಪಿಕೊಳ್ಳುವಂತೆ ಸರ್ಕಾರವು 20 ರಿಂದ 25 ಬಾರಿ ಇಬ್ಬರು ಸ್ವಾಮೀಜಿಗಳಿಗೆ ಕರೆ ಮಾಡಿದೆ. ಆದರೆ ಮುಸ್ಲಿಮರ ಶೇಕಡಾ 4ರಷ್ಟು ಒಬಿಸಿ ಕೋಟಾದಿಂದ ದೋಚಿರುವ ಈ ಮೀಸಲಾತಿಯನ್ನು ಪಡೆಯಲು ಒಕ್ಕಲಿಗರು ಮತ್ತು ಲಿಂಗಾಯತರು ಭಿಕ್ಷುಕರಲ್ಲ. ಅಲ್ಪಸಂಖ್ಯಾತರು ಕೂಡ ನಮ್ಮ ಜನರಲ್ಲವೇ..?" ಎಂದು ಪ್ರಶ್ನಿಸಿದ್ದಾರೆ.

"ನಿಮ್ಮಲ್ಲಿ ಕಾನೂನು ಇಲಾಖೆ ಇದೆಯೇ..? ಮೂರ್ನಾಲ್ಕು ಜನರ ಮನಸೋ ಇಚ್ಛೆ ಕೋಟಾ ಹಂಚಿಕೊಳ್ಳಲು ಇದು ನಿಮ್ಮ ಆಸ್ತಿಯೇ..? ನಿಮ್ಮ ಈ ಭಿಕ್ಷೆಯನ್ನು ಸ್ವೀಕರಿಸಲು ಯಾವ ಸಮುದಾಯವೂ ಭಿಕ್ಷುಕರಲ್ಲ. ಇದನ್ನು ನಾವು ವಿರೋಧಿಸುತ್ತೇವೆ. ಜನಸಂಖ್ಯೆಯ ಆಧಾರದ ಮೇಲೆ ಈ ಸಮುದಾಯಗಳಿಗೆ ಮೀಸಲಾತಿ ನೀಡಬೇಕು. ಅದಕ್ಕೆ ಕಾಂಗ್ರೆಸ್ ಬದ್ಧವಾಗಿದೆ" ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ಆಯೋಗ ವರದಿ ನೀಡದಿದ್ದರೂ 90 ದಿನಗಳಲ್ಲಿ ಮೂರು ಬಾರಿ ಮೀಸಲಾತಿ ಬದಲಾವಣೆ ಮಾಡಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದ್ವೇಷದ ರಾಜಕಾರಣ ಮಾಡುತ್ತಿವೆ ಎಂದು ಕಿಡಿಕಾರಿದರು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮುಂದಿನ 30 ರಿಂದ 40 ದಿನಗಳಲ್ಲಿ ಸರ್ಕಾರ ರಚಿಸಲಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ಮೀಸಲಾತಿ ಪುನರ್ರಚನೆಯನ್ನು ರದ್ದುಪಡಿಸುತ್ತದೆ ಎಂದು ಹೇಳಿದ್ದಾರೆ.

"ಕೋಟಾವನ್ನು ಹೆಚ್ಚಿಸಲು ಮೀಸಲಾತಿಯ ಮೇಲಿನ ಅಸ್ತಿತ್ವದಲ್ಲಿರುವ 56 ಶೇಕಡಾ ಮಿತಿಯನ್ನು ವಿಸ್ತರಿಸಬೇಕಾಗಿತ್ತು. ಲಿಂಗಾಯತರು ಶೇ 15 ಮತ್ತು ಒಕ್ಕಲಿಗರು ಶೇ 12 ರಷ್ಟು ಮೀಸಲಾತಿ ಕೇಳಿದ್ದರು. ಜನ ಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡುವುದನ್ನು ಬಿಟ್ಟು ಈ ಬಿಜೆಪಿ ಸರ್ಕಾರ ಈ ರೀತಿ ತಾರತಮ್ಯ ಮಾಡುವುದೇಕೆ? ನಮ್ಮ ಸಮುದಾಯವನ್ನು ಕಡೆಗಣನೆ ಮಾಡಿ ಮೀಸಲಾತಿ ನೀಡಿದ್ದಾರೆ. ಚುನಾವಣೆಯಲ್ಲಿ ನಾವು ಗೆದ್ದು ಅಧಿಕಾರ ಬರಲಿದ್ದು, ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ಮೀಸಲಾತಿಗಳನ್ನು ವಜಾ ಮಾಡುತ್ತೇವೆ " ಎಂದು ಕಿಡಿಕಾರಿದ್ದಾರೆ.
ಆಯೋಗ ರಚನೆ ಮಾಡದೆ ಸಂವಿಧಾನ ಬಾಹಿರವಾಗಿ ಕೋಟಾ ಮೀಸಲಾತಿಯನ್ನು ಪುನರ್‌ರಚಿಸಿರುವ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಬೇಕು. "ಜಾತಿ-ಧರ್ಮಗಳ ನಡುವೆ ಜಗಳ ಹಚ್ಚಿ ಚುನಾವಣೆಯಲ್ಲಿ ಲಾಭ ಗಳಿಸುವ ದುರುದ್ದೇಶದ, ತಪ್ಪು ಮಾಹಿತಿ ಆಧರಿಸಿದ ಮತ್ತು ಸಂವಿಧಾನ ವಿರೋಧಿಯಾದ ಪರಿಷ್ಕೃತ ಮೀಸಲಾತಿಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು. ಚುನಾವಣೆ ಘೋಷಣೆಗೆ ದಿನ ಎಣಿಕೆ ನಡೆಯುತ್ತಿರುವಾಗ ಅವಸರದಲ್ಲಿ ಪ್ರಕಟಿಸಲಾಗಿರುವ ಮೀಸಲಾತಿ ನೀತಿ ದೋಷಪೂರ್ಣವಾಗಿದೆ" ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
*ನ್ಯಾಯಾಲಯದ ಮೊರೆ ಹೋಗಲಿರುವ ಅಲ್ಪಸಂಖ್ಯಾತರು*
ಕೇಂದ್ರದ ಮಾಜಿ ಸಚಿವ ಕೆ ರೆಹಮಾನ್ ಖಾನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಧರ್ಮಗುರುಗಳು ಸೇರಿದಂತೆ ಮುಸ್ಲಿಂ ಮುಖಂಡರು, ಮುಸ್ಲಿಮರಿಗೆ ಶೇಕಡಾ 4 ರಷ್ಟು ಒಬಿಸಿ ಕೋಟಾವನ್ನು ರದ್ದುಗೊಳಿಸುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಸಭೆಯಲ್ಲಿ ಸರ್ಕಾರದ ನಿರ್ಧಾರದ ಸಾಧಕ-ಬಾಧಕಗಳ ಕುರಿತು ಚರ್ಚಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಯಾವುದೇ ವರದಿ ನೀಡದೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಅದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.












Click it and Unblock the Notifications