ಮೇಕೆದಾಟು ಯೋಜನೆ ಜಾರಿ ಆಗ್ರಹ ಪತ್ರ ಚಳವಳಿಗೆ ಬಿಜೆಪಿ ಬೆಂಬಲಿಗರ ಅಡ್ಡಿ: ಎಎಪಿ
ಬೆಂಗಳೂರು, ಅಕ್ಟೋಬರ್ 13: ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು, ಆಮ್ ಆದ್ಮಿ ಪಕ್ಷ ಸಾರ್ವಜನಿಕರಿಂದ ಸಹಿ ಸಂಗ್ರಹಣಾ ಅಭಿಯಾನ ಮಾಡಲಾಗುತ್ತಿದೆ. ಆದರೆ ನಮ್ಮ ಈ ಅಭಿಯಾನಕ್ಕೆ ಕೆಲವು ಬಿಜೆಪಿ ಬೆಂಬಲಿಗರು ಇದಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ ಎಂದು ಪಕ್ಷ ಆರೋಪ ಮಾಡಿದೆ.
ಆಮ್ ಆದ್ಮಿ ಪಕ್ಷದ ಸಹಿ ಸಂಗ್ರಹ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶುಕ್ರವಾರ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್‌ಹಳ್ಳಿಯಲ್ಲಿ ಸಹಿ ಸಂಗ್ರಹ ನಡೆಸುವ ಸಂದರ್ಭದಲ್ಲಿ ಕೆಲವು ಬಿಜೆಪಿ ಬೆಂಬಲಿಗರು ಅಭಿಯಾನಕ್ಕೆ ಅಡ್ಡಿಪಡಿಸಲು ಮುಂದಾದರು ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಆಂಜನೇಯ ರೆಡ್ಡಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಅವರು, ಪೊಲೀಸರಿಗೆ ಅಭಿಯಾನದ ಬಗ್ಗೆ ವಿವರಣೆ ನೀಡಿದ ನಂತರ, ಪೊಲೀಸರು ಕೂಡ ಸಹಿ ಸಂಗ್ರಹ ಮಾಡಲು ಒಪ್ಪಿಗೆ ಕೊಟ್ಟರು.

ಎಎಪಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ
ಮೇಕೆದಾಟು ಜಲಾಶಯ (ಡ್ಯಾಂ) ನಿರ್ಮಾಣ, ಕೆರೆಗಳ ಅಭಿವೃದ್ಧಿ, ಬೆಂಗಳೂರು ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ವಿಚಾರವಾಗಿ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರದಾದ್ಯಂತ ಜನರಿಂದ ಸಹಿ ಸಂಗ್ರಹ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪಕ್ಷದ ಮುಖ್ಯಸ್ಥರು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ಬೆಂಗಳೂರು ನಗರದ ಕುಡಿಯುವ ನೀರಿನ ಶಾಶ್ವತ ಯೋಜನೆ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಪತ್ರ ಚಳುವಳಿ ಕಾರ್ಯಕ್ರಮ ಕಳೆದ ವಾರದಿಂದ ಆರಂಭವಾಗಿದೆ. ಮಂಗಳವಾರ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕೇಂಬ್ರಿಡ್ಜ್ ಬಡಾವಣೆಯಲ್ಲಿ ನಡೆಯಿತು. ನಿತ್ಯ ಒಂದೊಂದು ಕಡೆ ಪಕ್ಷ ಅಭಿಯಾನ ಮೂಲಕ ಪತ್ರ-ಸಹಿ ಸಂಗ್ರಹಿಸುತ್ತಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದೆ.











Click it and Unblock the Notifications