ಹೈಕಮಾಂಡ್‌ನಿಂದ ವಿ. ಸೋಮಣ್ಣಗೆ ಖಡಕ್ ಸಂದೇಶ!
ಬೆಂಗಳೂರು, ಏಪ್ರಿಲ್ 11; ವಸತಿ ಸಚಿವ, ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಶಾಸಕ ವಿ. ಸೋಮಣ್ಣ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ನಾಯಕರು ಅವರಿಗೆ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ. ಇದರಿಂದಾಗಿ ವರಿಷ್ಠರನ್ನು ಭೇಟಿಯಾಗಿದ್ದ ಸೋಮಣ್ಣ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
ವಿ. ಸೋಮಣ್ಣ ಗೋವಿಂದರಾಜನಗರದಲ್ಲಿ ತಾವು ಕಣಕ್ಕಿಳಿದು, ಪುತ್ರ ಅರುಣ್ ಸೋಮಣ್ಣಗೂ ಬೇರೆ ಕಡೆ ಟಿಕೆಟ್ ಕೊಡಿಸುವ ಕುರಿತು ಚಿಂತನೆ ನಡೆಸಿದ್ದರು. ಆದರೆ ಪಕ್ಷದ ಹೈಕಮಾಂಡ್ ನಾಯಕರು ಕುಟುಂಬದಲ್ಲಿ ಒಬ್ಬರಿಗೆ ಒಂದೇ ಟಿಕೆಟ್ ಎಂದು ಸೂಚನೆ ನೀಡಿದೆ. ಇದರಿಂದಾಗಿ ಪುತ್ರನ ಜೊತೆಗೆ ವಿಧಾನಸಭೆಗೆ ಹೋಗುವ ವಿ. ಸೋಮಣ್ಣ ಚಿಂತನೆಗೆ ಹಿನ್ನಡೆಯಾಗಿದೆ.

ಕೆಲವು ದಿನಗಳ ಹಿಂದೆ ವಿ. ಸೋಮಣ್ಣ ದೆಹಲಿಗೆ ಭೇಟಿ ನೀಡಿದ್ದರು. ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದರು. ಆಗ ವಿ. ಸೋಮಣ್ಣಗೆ ವರಿಷ್ಠರು ನೀವು ಚುನಾವಣೆಗೆ ಸ್ಪರ್ಧಿಸುವುದಾದರೆ ಓಕೆ. ಮಗನಿಗೆ ಟಿಕೆಟ್ ಬೇಕು ಎಂದಾದರೆ ನೀವು ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಸೂಚನೆ ನೀಡಿದ್ದಾರೆ. ವರಿಷ್ಠರ ಮಾತಿನ ಬಳಿಕ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದು ಸೋಮಣ್ಣ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ವಿ. ಸೋಮಣ್ಣ ಪುತ್ರನಿಗೆ ಟಿಕೆಟ್ ಕೊಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದರು. ಸಾಕಷ್ಟು ಪ್ರಯತ್ನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ವಿ. ಸೋಮಣ್ಣ ಮನೆಗೆ ಸಹ ಭೇಟಿ ಕೊಟ್ಟಿದ್ದರು. ಇದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಇಂತಹ ಸಮಯದಲ್ಲೇ ಅಮಿತ್ ಶಾ ಭೇಟಿ ಕೊಟ್ಟಿದ್ದರು. ಬಳಿಕ ತಾವು ಬಿಜೆಪಿ ಬಿಡುವುದಿಲ್ಲ ಎಂದು ಹೇಳುವ ಮೂಲಕ ವಿ. ಸೋಮಣ್ಣ ಭಾವುಕರಾಗಿದ್ದರು.
ಟಿಕೆಟ್ ಹಂಚಿಕೆಯ ಸುದ್ದಿಗಳ ನಡುವೆಯೇ ಅರುಣ್ ಸೋಮಣ್ಣರನ್ನು ಬಿಜೆಪಿ ತುಮಕೂರು ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಅವರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಸೂಚನೆ ಬಳಿಕ ವಿ. ಸೋಮಣ್ಣ ಲೆಕ್ಕಾಚಾರ ಬದಲಾಗಿದೆ. ಅವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವರೇ? ಕಾದು ನೋಡಬೇಕಿದೆ. ಸೋಮವಾರ ವಿ. ಸೋಮಣ್ಣ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಹ ಭೇಟಿ ನೀಡಿದ್ದರು.
ಹೈಕಮಾಂಡ್ ಸಂದೇಶ; ಈ ಬಾರಿಯ ಚುನಾವಣೆಯಲ್ಲಿ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಟಿಕೆಟ್ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸಿದೆ. ಅಲ್ಲದೇ ಎಂಎಲ್‌ಸಿಗಳಿಗೆ, ಸಂಸದರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದೆ. ಈ ಹಿನ್ನಲೆಯಲ್ಲಿ ಪುತ್ರರನ್ನು ಚುನಾವಣಾ ಕಣಕ್ಕಿಳಿಸುವ ಕೆಲವು ಹಿರಿಯ ಶಾಸಕರ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಈಗಾಗಲೇ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಪುತ್ರ ಕಾಂತೇಶ್‌ಗೆ ಟಿಕೆಟ್ ಕೇಳುತ್ತಿದ್ದ ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾಗೆ ಅವರು ಪತ್ರವನ್ನು ಬರೆದಿದ್ದು, ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರು ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಮಂಗಳವಾರ ರಾತ್ರಿ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ರದ್ದುಗೊಳಿಸಿ ಶೆಟ್ಟರ್ ಸಂಜೆ 5 ಗಂಟೆಯ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ಜಗದೀಶ್ ಶೆಟ್ಟರ್ ಸಹ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು ಎಂಬ ಸುದ್ದಿ ಇತ್ತು. ಅವರ ದೀಢರ್ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications