ಅನಂತನ ಅವಾಂತರ ಕರ್ತೃ ಮುತಾಲಿಕ್ ಮೇಲೆ ದೂರು
ಬೆಂಗಳೂರು, ಏ.14: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಅವರ ವಿರುದ್ಧ ಅನಂತನ ಅವಾಂತರ ಎಂಬ ಪುಸ್ತಕ ಪ್ರಕಟಿಸಿರುವ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.
ಬಿಜೆಪಿಗೆ ಸೇರ್ಪಡೆ ಅಮಾನತು ಪ್ರಸಂಗದಿಂದ ಅವಮಾನಿತರಾದ ಮೇಲೆ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪರ್ಧಿಸುತ್ತಿದ್ದಾರೆ. ಧಾರಾವಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಎಚ್ ಎನ್ ಅನಂತಕುಮಾರ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಚುನಾವಣೆ ಚಿನ್ಹೆಯಾಗಿ ಊದುವ ತುತ್ತೂರಿ ಪಡೆದಿರುವ ಪ್ರಮೋದ್ ಅವರು ಅನಂತ್ ವಿರುದ್ಧ ರಣಕಹಳೆ ಮೊಳಗಿಸಿದ್ದು, ಅನಂತನ ಅವಾಂತರ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಿ, ಅನಂತ್ ಅವರ ಮೇಲೆ ಆರೋಪದ ಸುರಿಮಳೆ ಮಾಡಿದ್ದರು.
ಅನಂತ್ ಅವರು 14,000 ಕೋಟಿ ಹುಡ್ಕೋ ಹಗರಣ, ಕಾರ್ಪೋರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಸಂಪರ್ಕದಿಂದ 5,000 ಕೋಟಿ ಟೆಲಿಕಾಂ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ಅನಂತ್ ಭಾಗಿಯಾಗಿದ್ದಾರೆ ಈ ಬಗ್ಗೆ ಸುಪ್ರೀಂಕೋರ್ಟಿನಲ್ಲಿ ಪಿಟೀಷನ್ ಹಾಕಲಾಗಿದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

ಬಿಜೆಪಿ ದೂರು: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ವಿರುದ್ಧ ವೈಯಕ್ತಿಕವಾಗಿ ಹಾಗೂ ಉದ್ದೇಶಪೂರ್ವಕವಾಗಿ ಹಲ ವಾರು ದಿನಗಳಿಂದ ಅಪಪ್ರಚಾರ ಮಾಡುತ್ತಿರುವ ಪ್ರಮೋದ್ ಮುತಾಲಿಕ್, ಚುನಾವಣಾ ನೀತಿ ಸಂಹಿತೆ ಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅನಂತ್ ಕುಮಾರ್ ಅವರ ಆಪ್ತ ನರಹರಿ ಫಡ್ಕೆ ಅವರು ನೀಡಿರುವ ದೂರನ್ನು ಸ್ವೀಕರಿಸಿರುವ ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ ಅವರು ಮಾತನಾಡಿ, ಪುಸ್ತಕದ ಪ್ರತಿಯನ್ನು ಪೊಲೀಸ್ ಆಯುಕ್ತರ ಕಚೇರಿ ಕಳಿಸಿಕೊಡಲಾಗಿದ್ದು, ತನಿಖೆ ಕೈಗೊಳ್ಳಲಿದ್ದಾರೆ. ಪ್ರಕಾಶಕರ ಹೆಸರು ಹಾಗೂ ಎಷ್ಟು ಪ್ರತಿ ಮುದ್ರಿಸಲಾಗಿದೆ ಎಂಬ ಮಾಹಿತಿ ಇಲ್ಲದೆ ಪುಸ್ತಕ ಹಂಚಿದರೆ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.












Click it and Unblock the Notifications