ಬೆಂಗಳೂರು : ಬಿಜೆಪಿ ಕಾರ್ಪೊರೇಟರ್ ಪತಿ ಹತ್ಯೆ
ಬೆಂಗಳೂರು, ಫೆಬ್ರವರಿ 07 : ಬೆಂಗಳೂರಿನಲ್ಲಿ ಬಿಜೆಪಿ ಬಿಬಿಎಂಪಿ ಸದಸ್ಯೆ ಪತಿಯನ್ನು ಹತ್ಯೆ ಮಾಡಲಾಗಿದೆ. ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
138 ವಾರ್ಡ್ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶ್ ಪತಿ ಕದಿರೇಶನ್ ಅವರನ್ನು ಬುಧವಾರ ಮಧ್ಯಾಹ್ನ ಹತ್ಯೆ ಮಾಡಲಾಗಿದೆ. ನಾಲ್ಕು ಸದಸ್ಯರ ತಂಡ ಕಾಟನ್‌ಪೇಟೆಯ ಅಂಜನಪ್ಪ ಗಾರ್ಡನ್ ಬಳಿ ಹತ್ಯೆ ಮಾಡಿದೆ.

ಹಳೇ ದ್ವೇಷದ ಹಿನ್ನಲೆಯಲ್ಲಿ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕದಿರೇಶ್ ಹಳೆಯ ರೌಡಿಯಾಗಿದ್ದರು. ಬೆಕ್ಕಿನ ಕಣ್ಣು ರಾಜೇಂದ್ರ ಅವರು ಸಹಚರರಾಗಿದ್ದರು.
ರೇಖಾ ಕದಿರೇಶ್ ಅವರು 138ನೇ ವಾರ್ಡ್ (ಛಲವಾದಿಪಾಳ್ಯ) ಬಿಬಿಎಂಪಿ ಸದಸ್ಯರು. ಮನೆಯ ಸಮೀಪ ಕದಿರೇಶನ್ ದೇವಾಲಯ ನಿರ್ಮಿಸುತ್ತಿದ್ದರು. ನಿರ್ಮಾಣ ಕಾರ್ಯವನ್ನು ವೀಕ್ಷಿಸಲು ಬುಧವಾರ ಮಧ್ಯಾಹ್ನ ಹೋದಾಗ ಕೊಚ್ಚಿ ಕೊಲೆ ಮಾಡಲಾಗಿದೆ.
ಬಿಜೆಪಿ ಕಾರ್ಪೊರೇಟರ್ ರೇಖಾ ಅವರ ಪತಿ ಕದ್ರೀಶ್ ರನ್ನು ಹತ್ಯೆಗೈದಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದನ್ನು ಈ ಘಟನೆ ಸಾರಿ ಹೇಳುತ್ತಿದೆ. ಬೆಂಗಳೂರಿನಲ್ಲಿ 3 ದಿನದಲ್ಲಿ ಹಾಡಹಗಲೇ ನಡೆದ 2ನೇ ಕೊಲೆ ಇದಾಗಿದೆ.
— B.S. Yeddyurappa (@BSYBJP) February 7, 2018
4 ತಂಡಗಳ ರಚನೆ : 'ಬುಧವಾರ ಮಧ್ಯಾಹ್ನ 3.45ರ ಸುಮಾರಿಗೆ ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಲು 4 ತಂಡಗಳನ್ನು ರಚನೆ ಮಾಡಲಾಗಿದೆ' ಎಂದು ಡಿಸಿಪಿ ಅನುಚೇತ್ ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆಗೆ ಶವವನ್ನು ಸಾಗಿಸಲಾಗಿದೆ. ಆಸ್ಪತ್ರೆ ಮುಂಭಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications