ವಿಧಾನಸಭೆ ಅಧಿವೇಶನ: ಕಲಾಪ ಬಹಿಷ್ಕರಿಸಿದ ಬಿಜೆಪಿಗೆ ಜೆಡಿಎಸ್ ಬೆಂಬಲ
ಬೆಂಗಳೂರು, ಜುಲೈ 20: ಬುಧವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ದುರ್ವರ್ತನೆ ತೋರಿದ ಆರೋಪದ ಮೇಲೆ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಬಿಜೆಪಿ ಖಂಡಿಸಿದೆ. ಇದಕ್ಕೆ ಜೆಡಿಎಸ್ ಕೂಡ ಬೆಂಬಲ ಸೂಚಿಸಿದ್ದು, 2 ದಿನ ಕಲಾಪವನ್ನು ಬಹಿಷ್ಕರಿಸಿವೆ.
ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಈ ಬಗ್ಗೆ ದೂರು ನೀಡಿವೆ. ಗುರುವಾರ ಬೆಳಗ್ಗೆ ಕಲಾಪ ಆರಂಭವಾದಾಗ ಪ್ರತಿಪಕ್ಷದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಜಿ.ಜನಾರ್ದನ ರೆಡ್ಡಿ ಮಾತ್ರ ಸದನದಲ್ಲಿ ಹಾಜರಿದ್ದರು.

ಬಿಲ್ ಮತ್ತು ಅಜೆಂಡಾ ದಾಖಲೆಗಳ ಪ್ರತಿಗಳನ್ನು ಹರಿದು ಉಪಸಭಾಪತಿ ಲಮಾಣಿ ಕುಳಿತಿದ್ದ ಪೀಠದ ಕಡೆಗೆ ಎಸೆದ ನಂತರ "ಅಸಭ್ಯ ಮತ್ತು ಅಗೌರವದ ನಡವಳಿಕೆ"ಗಾಗಿ 10 ಶಾಸಕರನ್ನು ಅಮಾನತುಗೊಳಿಸಲಾಯಿತು.
ನಾಲ್ವರು ಮಾಜಿ ಸಚಿವರು ಸೇರಿದಂತೆ 10 ಶಾಸಕರನ್ನು ಅಮಾನತುಗೊಳಿಸುವ ನಿರ್ಣಯವನ್ನು ವಿಧಾನಸಭೆ ಬುಧವಾರ ಅಂಗೀಕರಿಸಿತು. ಬಿಜೆಪಿ ಶಾಸಕರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ, ವಿ. ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಆರಗ ಜ್ಞಾನೇಂದ್ರ, ಭರತ್ ವೈ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಗೆಹ್ಲೋಟ್ ಅವರನ್ನು ಭೇಟಿಯಾದ ವಿಪಕ್ಷಗಳು
ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಟ್ಲರ್ ಆಡಳಿತ, ಪ್ರತಿಪಕ್ಷದ ಧ್ವನಿಯನ್ನು ಕುಗ್ಗಿಸುವ ನಿರ್ಧಾರಗಳನ್ನು ಖಂಡಿಸಿ, ಜನರ ಧ್ವನಿಯಾಗಿ ಸದನದಲ್ಲಿ ಪ್ರಶ್ನಿಸುತ್ತಿದ್ದ ನಮ್ಮ ಶಾಸಕರನ್ನು ಅಮಾನತುಗೊಳಿಸಿರುವ ಬಗ್ಗೆ ಹಾಗೂ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಉಲ್ಲೇಖಿಸಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನಮ್ಮ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಗುರುವಾರ ಬೆಳಗ್ಗೆ ಬಿಜೆಪಿ ಶಾಸಕರು ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಕೂಡ ಭಾಗವಹಿಸುವ ಮೂಲಕ ಬಿಜೆಪಿಗೆ ಬೆಂಬಲ ನೀಡಿದ್ದರು.
ರಾಜ್ಯಪಾಲರ ಭೇಟಿ ಮಾಡಿದ ಯು.ಟಿ. ಖಾದರ್
ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ಉಪಸಭಾಪತಿ ರುದ್ರಪ್ಪ ಲಮಾಣಿ, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಕೂಡ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ10 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲು ಕಾರಣವಾದ ಸಂದರ್ಭಗಳ ಬಗ್ಗೆ ವಿವರಿಸಿದ್ದಾರೆ.












Click it and Unblock the Notifications