ಬೆಂಗಳೂರು ದಕ್ಷಿಣ & ಚನ್ನಪಟ್ಟಣ ಅಭಿವೃದ್ಧಿ ಕುರಿತು ಬಿಗ್ ಅಪ್ಡೇಟ್ ಕೊಟ್ಟು ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ, 03: ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಲೇ ಇದೆ. ಅಕ್ಕಪಕ್ಕದ ಜಿಲ್ಲೆಗಳು ಕೂಡ ಅಭಿವೃದ್ಧಿಯತ್ತ ಸಾಗಿವೆ. ಇನ್ನು ಇದೀಗ ಮುಂದಿನ 3 ವರ್ಷಗಳಲ್ಲಿ ಈ ಜಿಲ್ಲೆಗಳ ಚಿತ್ರಣವೇ ಬದಲಾಗಲಿದೆ ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಹಾಗಾದರೆ ಯಾವ ಜಿಲ್ಲೆಗಳು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದ ಹೇಳಲು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಅವರು ಮಾತನಾಡಿದರು. ಋಣ ತೀರಿಸುವ ಕಾರ್ಯಕ್ರಮ ಇದಾಗಿದ್ದು, ನಿಮ್ಮೆಲ್ಲರ ಬೆಂಬಲಕ್ಕೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ನಾಲ್ಕು ಶಾಸಕರನ್ನು ಆಯ್ಕೆ ಮಾಡುವ ಮೂಲಕ ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ್ದೀರಿ. ಇದೀಗ ಅಭಿವೃದ್ಧಿಯ ಮೂಲಕ ಚನ್ನಪಟ್ಟಣ ಮತ್ತು ಬೆಂಗಳೂರು ದಕ್ಷಿಣದ ಚಿತ್ರವನ್ನು ಬದಲಾಯಿಸುತ್ತೇವೆ ಎಂದು ಹೇಳಿದರು.

ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕ್ಷೇತ್ರದ ಜನರು ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದರು. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನೆ ಮಾಡಿದ್ದೀರಿ. ಚನ್ನಪಟ್ಟಣದ ಜನರನ್ನು ಸುಮ್ಮನೆ ಕೂರಿಸಲು ಸಾಧ್ಯ ಇಲ್ಲ ಎಂದು ನೀವು ತೋರಿಸಿದ್ದೀರಿ ಎಂದು ತಿಳಿಸಿದರು.
ಚುನಾವಣೆ ಸಮಯದಲ್ಲಿ ಇಲ್ಲಿ ನಾನೇ ಅಭ್ಯರ್ಥಿ ಎಂದಿದ್ದೆ. ಈಗಲೂ ನಾನೇ ಅಭ್ಯರ್ಥಿ. ಮುಂದಿನ ಒಂದು ವಾರದಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಕೊಟ್ಟ ಮಾತು ಈಡೇರಿಸುವ ಕೆಲಸದ ಬಗ್ಗೆ ಪರಿಶೀನೆ ಮಾಡುತ್ತೇನೆ. ಚುನಾವಣೆ ವೇಳೆ ನಾನು ಕುಮಾರಸ್ವಾಮಿ ಅವರಿಗೆ ನೀವು ಶಾಸಕರಾಗಿ, ಮುಖ್ಯಮಂತ್ರಿಯಾಗಿ ಯಾವ ಸಾಧನೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದೆ. ಯೋಗೇಶ್ವರ್ ಅವರು ಅನೇಕ ದೇವಾಲಯ ಕಟ್ಟಿಸಿದ್ದಾರೆ, ನೀವು ಯಾವ ದೇವಾಲಯ ಕಟ್ಟಿದ್ದೀರಿ, ಶಾಲೆಗಾಗಿ ನೀವು 2 ಹೆಕ್ಟೇರ್ ಜಮೀನು ದಾನ ಮಾಡಿದ್ದೀರಾ ಎಂದು ಸವಾಲು ಹಾಕಿದ್ದೆ. ನನ್ನ ಪ್ರಶ್ನೆಗೆ ಅವರಿಂದ ಉತ್ತರವೇ ಬರಲಿಲ್ಲ ಎಂದರು.
ಚುನಾವಣೆ ವೇಳೆ ಅಭಿವೃದ್ಧಿ ಬೇಕೋ, ಕಣ್ಣೀರು ಬೇಕೋ ನಿರ್ಧಾರ ಮಾಡಿ ಎಂದು ನಿಮ್ಮ ಹತ್ತಿರ ಮನವಿ ಮಾಡಿದ್ದೆ. ನೀವು ಅಭಿವೃದ್ಧಿಯನ್ನೇ ಆಯ್ಕೆ ಮಾಡಿದ್ದೀರಿ. ಮುಂದಿನ 3 ವರ್ಷಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ರೂಪುರೇಷೆ ಮಾಡಬೇಕಿದೆ. ನಾನು ಆಕಾಶವನ್ನು ಧರೆಗೆ ಇಳಿಸುತ್ತೇನೆ ಎಂದು ಹೇಳುವುದಿಲ್ಲ. ನಿಮ್ಮ ಕಣ್ಣಿಗೆ ಕಾಣುವ ಬದಲಾವಣೆ ತರುತ್ತೇವೆ. ಹಾಲು ಉತ್ಪಾದಕರ ಸಮಸ್ಯೆ ನೆನಪಿದ್ದು, ಸರಿಯಾದ ಸಮಯದಲ್ಲಿ ನಿರ್ಧಾರ ಮಾಡುತ್ತೇವೆ. ನೀವು ಹಣಕ್ಕೆ ಬೆಲೆ ಕೊಡಲಿಲ್ಲ, ಗುಣಕ್ಕೆ ಬೆಲೆ ಕೊಟ್ಟಿದ್ದೀರಿ ಎಂದು ಹೇಳಿದರು.
ಡಿ.ಕೆ.ಸುರೇಶ್ ಅವರು ಮಾತನಾಡಿ, ರಾಮನಗರದ ನಾಲ್ವರು ಕಾಂಗ್ರೆಸ್ ಶಾಸಕರ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಹೇಳಿದರು. ಜಿಲ್ಲೆಯ ಎಲ್ಲಾ ಶಾಸಕರು ಇದನ್ನು ಸವಾಲಾಗಿ ಸ್ವೀಕರಿಸಿ, ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಕ್ಷೇತ್ರದ ಜನರು ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿಗೆ ಮತ ಹಾಕಿದ್ದಾರೆ. ನಮಗೆ ಈಗಾಗಲೇ 600 ಕೋಟಿ ರೂಪಾಯಿ ಅನುದಾನ ಸಿಕ್ಕಿದೆ. ಕೆಲಸಗಳು ಪ್ರಾರಂಭವಾಗಿವೆ ಎಂದು ಹೇಳಿದರು.
ನಾನು ಚನ್ನಪಟ್ಟಣದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆ, ಆದರೆ, ಪಕ್ಷ ಒಪ್ಪಲಿಲ್ಲ. ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನಿಸಿ, ಯೋಗೇಶ್ವರ್ ಪಕ್ಷ ಹಾಗೂ ನಾಯಕತ್ವ ಒಪ್ಪಿ ಬಂದ ನಂತರ, ನಮ್ಮ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ, ಅಂತಿಮ ತೀರ್ಮಾನ ಮಾಡಿದೆವು. ಈ ವೇಳೆ ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಗಲಿಲ್ಲ. ಆದರೆ, ಚಿಂತೆ ಮಾಡೋದು ಬೇಡ, ಆದರೆ ಕಾರ್ಯಕರ್ತರ ಮೇಲಿನ ಗೌರವ ಮಾತ್ರ ಕಡಿಮೆಯಾಗಿಲ್ಲ ಎಂದರು.












Click it and Unblock the Notifications