ಉತ್ತಮ ರಸ್ತೆಗಳು, ಸುರಕ್ಷಿತ ಬೀದಿಗಳು: ಬೆಂಗಳೂರಿನ ಮೊದಲ ಬಾರಿಯ ಮತದಾರರ ಬೇಡಿಕೆಗಳು
ಬೆಂಗಳೂರು, ಮೇ. 08: ಕರ್ನಾಟಕವು ಬುಧವಾರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕರ್ನಾಟಕದ ಗೆಲುವು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ರಾಜಕೀಯವಾಗಿ ನಿರ್ಣಾಯಕ ರಾಜ್ಯವೆಂದು ಪರಿಗಣಿಸಲಾಗಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸಹ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ.
ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ (ಎಎಪಿ) ಸಹ ತನ್ನ ಅಭ್ಯರ್ಥಿಗಳನ್ನು ಈ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದೆ. ಎಲ್ಲಾ ರಾಜಕೀಯ ಪಕ್ಷಗಳ ಗುರಿಯಾಗಿರುವ ಒಂದು ವರ್ಗದ ಮತದಾರರಿದ್ದರೆ, ಅದು ಕರ್ನಾಟಕದಲ್ಲಿ 'ಮೊದಲ ಬಾರಿಯ ಮತದಾರರು'. ಏಕೆಂದರೆ ಯುವ ಮತದಾರರು ಸರ್ಕಾರವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಚುನಾವಣಾ ಆಯೋಗದ ಪ್ರಕಾರ, ಕರ್ನಾಟಕದಲ್ಲಿ ಮೊದಲ ಬಾರಿಗೆ 9.17 ಲಕ್ಷ ಮತದಾರರಿದ್ದಾರೆ. 17 ವರ್ಷಕ್ಕಿಂತ ಮೇಲ್ಪಟ್ಟ 1.25 ಲಕ್ಷಕ್ಕೂ ಹೆಚ್ಚು ಜನರು ಮುಂಗಡ ಅರ್ಜಿ ಸೌಲಭ್ಯದ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 41,000 ಅರ್ಜಿದಾರರು ಏಪ್ರಿಲ್ 1 ರ ವೇಳೆಗೆ 18 ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಅವರು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಮೊದಲ ಬಾರಿಗೆ ಮತ ಚಲಾಯಿಸಲು ಸಿದ್ಧವಾಗಿರುವ ಸುಶ್ಮಿತಾ ಎಸ್‌ಎಸ್, ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಮಾತನಾಡಿದ್ದಾರೆ. " ನನ್ನ ತಿಳುವಳಿಕೆಯ ಪ್ರಕಾರ, ಮೊದಲ ಬಾರಿಗೆ ಮತದಾನ ಮಾಡುವುದು ಒಂದು ಪ್ರಮುಖ ಘಟನೆ. ಏಕೆಂದರೆ ಮುಂದಿನ ಐದು ವರ್ಷಗಳು ನನ್ನ ವೃತ್ತಿಜೀವನದಲ್ಲಿ ಪ್ರಮುಖ ಸಮಯವಾಗಲಿವೆ. ನಾನು ನನ್ನ ನಾಯಕನನ್ನು ಬುದ್ಧಿವಂತಿಕೆಯಿಂದ ಆರಿಸಬೇಕು. ಈ ನಗರದಲ್ಲಿ ದಿನನಿತ್ಯದ ಸಂಚರಿಸುವ ಕಾರಣ ಉತ್ತಮ ರಸ್ತೆಗಳು ಮತ್ತು ಗುಣಮಟ್ಟದ ನೈರ್ಮಲ್ಯ ಕಾರ್ಯಗಳು ನನ್ನ ಪ್ರಾಥಮಿಕ ಬೇಡಿಕೆ. ನಂತರ ಉದ್ಯೋಗಾವಕಾಶ ಮತ್ತು ಸುರಕ್ಷತೆ ನನ್ನ ತಲೆಯಲ್ಲಿ ಬರುತ್ತವೆ" ಎಂದಿದ್ದಾರೆ.
ಬೆಂಗಳೂರಿನ ಇನ್ನೋರ್ವ ವಿದ್ಯಾರ್ಥಿನಿ ಸಹನಾ ಅಶ್ವಂತ್, "ಸಾಂಕ್ರಾಮಿಕ ರೋಗದ ನಂತರ, ಎಲ್ಲದರ ಬೆಲೆಗಳು ಹೆಚ್ಚಿವೆ. ಮಧ್ಯಮವರ್ಗದವರು ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಣಾಳಿಕೆಗಳು ಯಾವಾಗಲೂ ಸಾಕಷ್ಟು ಆರ್ಥಿಕ ಚಟುವಟಿಕೆಗಳನ್ನು ಭರವಸೆ ನೀಡುತ್ತವೆಯಾದರೂ, ಯಾವುದೇ ಸರ್ಕಾರವು ಅಧಿಕಾರದಲ್ಲಿದ್ದರೂ ಹಣದುಬ್ಬರ ದರವನ್ನು ಅಷ್ಟೇನೂ ನಿಯಂತ್ರಿಸಲಾಗುವುದಿಲ್ಲ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನ ಕುಖ್ಯಾತ ಟ್ರಾಫಿಕ್ ಅವ್ಯವಸ್ಥೆಯ ವಿಷಯವೂ ಯುವ ಮತದಾರರಿಗೆ ಒಂದು ದೊಡ್ಡ ಸಮಸ್ಯೆಯ ವಿಷಯವಾಗಿದೆ. ಬೆಂಗಳೂರಿನ ವರ್ತೂರಿನಿಂದ ಮಹದೇವಪುರಕ್ಕೆ ಪ್ರತಿದಿನ ಕೆಲಸದ ನಿಮಿತ್ತ ತೆರಳುವ ಐಟಿ ಉದ್ಯೋಗಿ ಚೇತನ್ ಗೌಡ ಮಾತನಾಡಿ, 'ಬಂಪರ್ ಟು ಬಂಪರ್ ಟ್ರಾಫಿಕ್ ನಲ್ಲಿ ದಿನನಿತ್ಯದ ಕೆಲಸದ ನಂತರ ಸಿಕ್ಕಿಹಾಕಿಕೊಳ್ಳುತ್ತೇವೆ. ನಮ್ಮ ಬೆಲೆಬಾಳುವ ಸಮಯವನ್ನು ವ್ಯಯಿಸಲಾಗುತ್ತಿದೆ. ಆದರೂ ಯಾವ ಸರಕಾರವೂ ಈ ಸಮಸ್ಯೆಯನ್ನು ಏಕೆ ಗಂಭೀರವಾಗಿ ಪರಿಗಣಿಸಿಲ್ಲ. ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸದೆ ನಾವು ನಗರೀಕರಣವನ್ನು ಅಭಿವೃದ್ಧಿ ಎಂದು ಕರೆಯಲು ಸಾಧ್ಯವಿಲ್ಲ. ಬೆಂಗಳೂರಿನ ಹೆಚ್ಚಿನ ಜಾಮ್‌ಗಳಿಗೆ ಪ್ರಮುಖ ಕಾರಣ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ನಮಗೆ ಕಠಿಣ ಕಾನೂನು ಬೇಕು" ಎಂದು ಆಗ್ರಹಿಸಿದ್ದಾರೆ.
ಉತ್ತಮ ರಸ್ತೆಗಳು, ಸ್ವಚ್ಛವಾದ ಬೀದಿಗಳು, ಸುರಕ್ಷಿತ ಸಾರ್ವಜನಿಕ ಸ್ಥಳಗಳು ಮತ್ತು ಕಠಿಣ ಸಂಚಾರ ನಿಯಮಗಳು ಇಲ್ಲಿನ ಪ್ರಮುಖ ಸಮಸ್ಯೆಗಳು. ಆದರೆ ಇವುಗಳನ್ನು ಪಕ್ಷಗಳು ಎಂದಿಗೂ ಪ್ರಾಥಮಿಕ ಸಮಸ್ಯೆಗಳೆಂದು ಪರಿಗಣಿಸುವುದಿಲ್ಲ. ಆದ್ದರಿಂದ, ಮೊದಲ ಬಾರಿಗೆ ಮತ ಚಲಾಯಿಸುವ ಮೊದಲು ಉತ್ತಮವಾದ ಪಕ್ಷವನ್ನು ಆಯ್ಕೆ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ 28 ಕ್ಷೇತ್ರಗಳಿದ್ದು, ಚುನಾವಣಾ ಆಯೋಗವು ಮತದಾನ ಮಾಡುವವರಿಗಾಗಿ ಬುಧವಾರ ರಜೆ ಘೋಷಿಸಿದೆ. ರಾಜ್ಯ ರಾಜಧಾನಿಯಲ್ಲಿ ಈ ಬಾರಿ ಹೆಚ್ಚಿನ ಮತದಾನದ ಶೇಕಡಾವಾರು ಪ್ರಮಾಣವನ್ನು ನಿರೀಕ್ಷಿಸುತ್ತಿರುವುದರಿಂದ ಯುವ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಬಳಸಿಕೊಳ್ಳುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications