Mahalakshmi Murder Case: ಫಿಂಗರ್ ಪ್ರಿಂಟ್ಸ್ ಕೊಡ್ತಿವೆ ಹಲವು ಟ್ವಿಸ್ಟ್!
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬೆಂಗಳೂರಿನ ವೈಯಾಲಿಕಾವಲ್‌ನ ಮಹಾಲಕ್ಷ್ಮಿ ಕೊಲೆ ಕೇಸ್ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಒಂದೆಡೆ ಪೊಲೀಸರಿಗೆ ಆರೋಪಿಯ ಮಾಹಿತಿ ಸಿಕ್ಕಿದೆ. ಇತ್ತ ಮಹಾಲಕ್ಷ್ಮಿ ಮನೆಯಲ್ಲಿ ಹಲವರ ಫಿಂಗರ್ ಪ್ರಿಂಟ್ಸ್ ಪತ್ತೆಯಾಗಿರುವುದು ಮತ್ತಷ್ಟು ಅನುಮಾನಗಳನ್ನು ಮೂಡಿಸುತ್ತಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಮಹಾಲಕ್ಷ್ಮಿಯ ಮೃತದೇಹವನ್ನು 59 ಪೀಸ್ ಮಾಡಿರುವುದು ದೃಢವಾಗಿದೆ. ಆರೋಪಿಯು ಮೊದಲಿಗೆ ಮಹಾಲಕ್ಮಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಬಳಿಕ ತಲೆ ಕತ್ತರಿಸಿ ಬೇರ್ಪಡಿಸಿದ್ದಾನೆ ಎಂದು ವರದಿಯಾಗಿದೆ.

ಇನ್ನು ಆರೋಪಿಯು ಹೊರರಾಜ್ಯಕ್ಕೆ ಪರಾರಿಯಾಗಿರುವುದರಿಂದ ಪೊಲೀಸರು ಎರಡು ತಂಡಗಳಾಗಿ ಆತನ ಬೆನ್ನು ಹತ್ತಿದ್ದಾರೆ. ಆದರೆ, ಮಹಾಲಕ್ಷ್ಮಿ ಅವರಿದ್ದ ಮನೆಯಲ್ಲಿ ನಿನ್ನೆ ಪರಿಶೀಲನೆ ವೇಳೆ ಹಲವರು ಬೆರಳಚ್ಚುಗಳು ಪತ್ತೆಯಾಗಿವೆಯಂತೆ.
ಮನೆಯಲ್ಲಿ ಮೂರು ಮಂದಿಯ ಫಿಂಗರ್ ಪ್ರಿಂಟ್ಸ್ ಪತ್ತೆಯಾಗಿದ್ದು, ಈ ಕೊಲೆಯನ್ನು ಒಬ್ಬ ಮಾಡಿರುವುದೋ? ಅಥವಾ ಮೂರು ಜನ ಸೇರಿ ಮಾಡಿದ್ದೋ? ಎನ್ನುವ ಅನುಮಾನವೂ ವ್ಯಕ್ತವಾಗಿದೆ. ಹಾಗಾಗಿ ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸಲು ನಿರ್ಧರಿಸಿದ್ದಾರೆ.

ಮಹಾಲಕ್ಷ್ಮಿ ಕೊಲೆ ಪ್ರಕರಣವು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡಲಾಗಿದ್ದು, ಈ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಸದ್ಯ ಈ ಕೊಲೆ ಮಾಡಿರುವ ಆರೋಪಿ ಯಾರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಬಂಧಿಸಿ ಕರೆತರಲು ಹೊರರಾಜ್ಯಗಳಿಗೆ ತೆರಳಿದ್ದಾರೆ.
ಮೊದಲಿಗೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್ ಎಂಬಾತನ ಮೇಲೆ ಎಲ್ಲರೂ ಅನುಮಾನ ಪಟ್ಟಿದ್ದರು. ಮಹಾಲಕ್ಷ್ಮಿ ಕುಟುಂಬದವರು ಕೂಡ ಈತನ ಮೇಲೆ ಆರೋಪ ಮಾಡಿದ್ದರು. ಆದರೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರ ಮಧ್ಯೆ ಸಂಬಂಧ ಇದ್ದಿದ್ದು ನಿಜ ಎಂದು ಒಪ್ಪಿಕೊಂಡಿದ್ದ. ಆದರೆ, ಈ ಕೊಲೆ ನಾನು ಮಾಡಿಲ್ಲ. ನಮ್ಮಿಬ್ಬರ ವಿಚಾರ ಅವರ ಕುಟುಂಬಕ್ಕೆ ತಿಳಿದು ಗಲಾಟೆಯಾದ ಕಾರಣ ಆರು ತಿಂಗಳಿನಿಂದ ಇಬ್ಬರೂ ದೂರವಿದ್ದೆವು ಎಂದು ಹೇಳಿದ್ದ.
ಬಳಿಕ ಮಹಾಲಕ್ಷ್ಮಿಯ ಮೊಬೈಲ್ ಪರಿಶೀಲಿಸಿದಾಗ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಶಾ ಮೂಲದ ವ್ಯಕ್ತಿ ಮೇಲೆ ಕೊಲೆ ಅನುಮಾನ ದಟ್ಟವಾಗಿದೆ. ಮಾಲ್‌ನಲ್ಲಿ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದವನೇ ಆರೋಪಿ ಎಂದು ಪೊಲೀಸರು ಅನುಮಾನಗೊಂಡಿದ್ದಾರೆ.
ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಮಹಾಲಕ್ಷ್ಮಿ ಪತಿಯನ್ನು ಬಿಟ್ಟು, ವೈಯಾಲಿಕಾವಲ್‌ನಲ್ಲಿ ಬಾಡಿಗೆಗೆ ಇದ್ದರು. ಈಗ ಕೆಲಸ ಮಾಡುವ ಮಾಲ್‌ನಲ್ಲಿ ಆರೋಪಿಯ ಪರಿಚಯ ಮಹಾಲಕ್ಷ್ಮಿಗೆ ಆಗಿತ್ತು. ಇಬ್ಬರ ನಡುವೆ ಸ್ನೇಹ ಶುರುವಾಗಿ ಅಕ್ರಮ ಸಂಬಂಧದವರೆಗೂ ಮುಂದುವರಿದಿತ್ತು ಎಂಬುದು ತಿಳಿದುಬಂದಿದೆ.
ಇದರ ನಡುವೆ ಮಹಾಲಕ್ಷ್ಮಿ ಅಶ್ರಫ್ ಜೊತೆಗೂ ಸಲುಗೆಯಿಂದ ಇದ್ದರು. ಈ ವಿಚಾರ ಆರೋಪಿಗೆ ಗೊತ್ತಾಗಿ ಅಶ್ರಫ್‌ನಿಂದ ದೂರ ಇರುವಂತೆ ವಾರ್ನಿಂಗ್ ಕೊಟ್ಟಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿ ಹಾಗೂ ಮಹಾಲಕ್ಷ್ಮಿ ನಡುವೆ ಜಗಳ ನಡೆದಿದ್ದು, ಆರೋಪಿ ಕೋಪಗೊಂಡು ಈ ರೀತಿ ಕೃತ್ಯ ಎಸಗಿರುವ ಸಾಧ್ಯತೆ ಎನ್ನಲಾಗಿದೆ.
ಮಹಾಲಕ್ಷ್ಮಿ ಮೊಬೈಲ್ ವಿವರಗಳನ್ನು ಪರಿಶೀಲಿಸಿದಾಗ ಆರೋಪಿಯೂ ಸೇರಿದಂತೆ ಮೂವರ ಜೊತೆ ಹೆಚ್ಚು ಮಾತನಾಡಿರುವುದು ಗೊತ್ತಾಗಿದೆ. ಇದರಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮೊಬೈಲ್ ವಿವರಗಳನ್ನು ಬೆನ್ನತ್ತಿದಾಗ ಕೊನೆಯ ಬಾರಿ ಪಶ್ಚಿಮ ಬಂಗಾಳದಲ್ಲಿ ಈತನ ಮೊಬೈಲ್ ಲೊಕೇಶನ್ ಪತ್ತೆಯಾಗಿದೆ. ಸದ್ಯ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಈಗ ಮನೆಯಲ್ಲಿ ಹಲವರ ಫಿಂಗರ್ ಪ್ರಿಂಟ್ಸ್ ಕೂಡ ಸಿಕ್ಕಿರುವುದರಿಂದ ಕೇಸ್ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications