Gobi Manchurian: ಬೆಂಗಳೂರಿನಲ್ಲಿ 80% ಕುಸಿತ ಕಂಡ ಗೋಬಿ ಮಂಚೂರಿ ವ್ಯಾಪಾರ; ವರದಿ
ಮಾರ್ಚ್ 11 ರಂದು, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿಯಲ್ಲಿ ಕಂಡುಬರುವ ಕೃತಕ ಆಹಾರ ಬಣ್ಣದ ಮೇಲೆ ಕಡಿವಾಣವನ್ನು ವಿಧಿಸಿತು. ಕೃತಕ ಬಣ್ಣ ಏಜೆಂಟ್‌ಗಳ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ವಿಶೇಷವಾಗಿ ರೋಡಮೈನ್-ಬಿ ಬಳಕೆಯನ್ನು ನಿಷೇಧಿಸಿತ್ತು.
ಕೃತಕ ಬಣ್ಣ ಏಜೆಂಟ್‌ಗಳ ಬಳಕೆಯ ಮೇಲಿನ ನಿಷೇಧದ ಬಳಿಕ ನಗರದಲ್ಲಿ ಗೋಬಿ ಮಂಚೂರಿ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರಿದೆ, ದಿ ಹ್ಯಾನ್ಸ್ ಇಂಡಿಯಾದ ವರದಿಯ ಪ್ರಕಾರ ಈ ಕೃತಕ ಬಣ್ಣಗಳ ಬಳಕೆ ಮೇಲೆ ನಿಷೇಧ ಹೇರಿದ ಬಳಿಕ ಬೆಂಗಳೂರಿನಲ್ಲಿ ಗೋಬಿ ಮಂಚೂರಿ ವ್ಯಾಪಾರದಲ್ಲಿ ಶೇಕಡಾ 80 ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ.

ಗೋಬಿ ಮಂಚೂರಿ ವ್ಯಾಪಾರಿಗಳು ಆತಂಕಗೊಂಡಿದ್ದು, ಕೃತಕ ಆಹಾರ ಬಣ್ಣ ಬಳಕೆ ಬಿಟ್ಟ ಬಳಿಕ, ಗ್ರಾಹಕರ ಬೇಡಿಕೆ ಕಡಿಮೆಯಾಗಿದ್ದು, ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಬಣ್ಣವಿಲ್ಲದ ಗೋಬಿ ಮಂಚೂರಿ ತಿನ್ನಲ್ಲ!
"ಬಣ್ಣವಿಲ್ಲದ ಗೋಬಿ ಮಂಚೂರಿಯನ್ ಅನ್ನು ಗ್ರಾಹಕರು ಸ್ವೀಕರಿಸುವುದಿಲ್ಲ, ವ್ಯಾಪಾರ ಮಾಡುವುದು ಮತ್ತು ಜೀವನ ನಡೆಸುವುದು ದೊಡ್ಡ ಸವಾಲಾಗಿದೆ, ಮೊದಲು ದಿನಕ್ಕೆ 10,000 ರೂಪಾಯಿ ವ್ಯಾಪಾರ ಮಾಡುತ್ತಿದ್ದೆವು, ಈಗ 5,000 ರೂಪಾಯಿ ವ್ಯಾಪಾರ ಮಾಡುವುದು ಕಷ್ಟಕರವಾಗಿದೆ. ಹೂಡಿಕೆ ಮಾಡಿದ ಬಂಡವಾಳವೂ ಹಿಂತಿರುಗಿಲ್ಲ. ಸದ್ಯ ಯಾವುದೇ ಬಣ್ಣ ಬಳಸದೇ ನೈಸರ್ಗಿಕ ಗೋಬಿ ತಯಾರಿಸುತ್ತಿದ್ದೇವೆ.ಆದರೂ ಜನ ಬರುತ್ತಿಲ್ಲ" ಎಂದು ನಗರದ ಸ್ಟಾಲ್ ಮಾಲೀಕ ರಾಜೇಶ್ ವೈ ತಿಳಿಸಿರುವುದಾಗಿ ಹ್ಯಾನ್ಸ್ ವರದಿಯಲ್ಲಿ ಹೇಳಿದೆ.
ಕೃತಕ ಬಣ್ಣಗಳ ಬಳಕೆಯ ಮೇಲಿನ ನಿಷೇಧವು ಗೋಬಿ ಮಂಚೂರಿನಯನ್ ಉದ್ಯಮಕ್ಕೆ "ದೊಡ್ಡ ಹೊಡೆತ" ಎಂದು ಒಪ್ಪಿಕೊಂಡ ರಾಜೇಶ್ ಮತ್ತು ಅವರು ತಮ್ಮ ಸ್ಟಾಲ್‌ನಲ್ಲಿ ರಾಸಾಯನಿಕ ಮುಕ್ತ ಗೋಬಿ ಮಂಚೂರಿಯನ್ ಅನ್ನು ತಯಾರಿಸುತ್ತಿರುವುದಾಗಿ ಹೇಳಿದರು.
ಏನಿದು ರೊಡಮೈನ್ ಬಿ?
ರೊಡಮೈನ್ ಬಿ(ಆರ್‌ಎಚ್‌ಬಿ) ಎನ್ನುವ ರಾಸಾಯನಿಕ ಪದಾರ್ಥವನ್ನು ಸಾಮಾನ್ಯವಾಗಿ ಸಿಲ್ಕ್, ಗೋಣಿನಾರು, ಚರ್ಮ, ಹತ್ತಿ ಮತ್ತು ಉಣ್ಣೆ, ಅದೇ ರೀತಿಯಾಗಿ ಅಲಂಕಾರಿಕ ಹಾಗೂ ಪ್ಲಾಸ್ಟಿಕ್ ತಯಾರಿಕೆಯನ್ನು ಬಣ್ಣಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದು ಕಡಿಮೆ ಬೆಲೆಯಲ್ಲಿ ದೊರೆಯುವ ಕಾರಣ ಆಹಾರದಲ್ಲಿ ಕೂಡ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಸೇವಿಸುವುದು ಆರೋಗ್ಯದ ಮೇಲೆ ಅಪಾಯ ಉಂಟುಮಾಡುತ್ತದೆ.












Click it and Unblock the Notifications